ಉಪನಿಷತ್ತಿನ ಕಥೆಗಳು

ಬಾಲಾಕಿ – ಅಜಾತಶತೃ ಉಶೀನಕ ಎಂಬ ದೇಶದಲ್ಲಿ ಬಲಾಕ ಎಂಬ ಬ್ರಾಹ್ಮಣ ಗರ್ಗಗೋತ್ರದವನು; ಅವನ ಮಗನೇ ಬಾಲಾಕಿ ವೇದೋಪನಿಷತ್ತುಗಳ ವಿಚಾರದಲ್ಲಿ ತಂದೆಯನ್ನೇ ಮೀರಿಸಿದ್ದ. ಗರ್ಗಗೋತ್ರದವನಾಗಿದ್ದುದರಿಂದ ಗರ್ಗ್ಯಾ ಬಾಲಾಕಿ ಎಂಬ ಹೆಸರಿನಿಂದಲೇ ಖ್ಯಾತನೆನಿಸಿದ್ದ. ಆತ್ಮತತ್ವದ ಬಗ್ಗೆ ತಾನೇ ಸಕಲ ಲೋಕಗಳಲ್ಲಿಯೂ ಶ್ರೇಷ್ಠನಾದವನು ಎಂಬ ಅಹಂಕಾರವೂ ಇವನಲ್ಲಿ ತುಂಬಿತ್ತು. ಉಶೀನಕ ಇವನ ಹುಟ್ಟೂರು ಆದರೂ ಬಾಲಾಕಿ ಹುಟ್ಟೂರಿನಲ್ಲಿಯೇ ದೀರ್ಘಕಾಲ ಇದ್ದವನಲ್ಲ. ತನ್ನ ವಿದ್ವತ್ ಪ್ರೌಢಿಮೆಯ ಬೆಳಕನ್ನು ಚೆಲ್ಲಾಡಲು ಸದಾ ಊರಿಂದೂರಿಗೆ ಪ್ರವಾಸ ನಡೆಸುತ್ತಲೇ ಇರುತ್ತಿದ್ದ. ಹೀಗೆಯೇ ಮತ್ಯ್ಯ, ಕುರು, ಪಾಂಚಾಲ ಮಿಥಿಲ ಮೊದಲಾದ ರಾಜ್ಯಗಳಲ್ಲಿ ಸುತ್ತಾಡುತ್ತಾ, ತಾನು ಗಳಿಸಿದ್ದ ಆತ್ಮತತ್ವದ ಬೆಳಕನ್ನು ಬೆಳಗುತ್ತಾ,ಕಾಶೀನಗರ ತಲುಪಿದ. ಕಾಶಿ ನಗರದಲ್ಲಿ ಅಜಾತಶತೃ ರಾಜನಾಗಿದ್ದ. ಕೇವಲ ರಾಜನೇ ಅಲ್ಲ ವಿಥಿಲೆಯ ಜನಕ ರಾಜರಂತೆ ಇವನೂ ಸಹ ವೇದೋಪನಿಷತ್ತುಗಳ ವಿಚಾರದಲ್ಲಿ ಪೂರ್ಣ ಪ್ರಜ್ಞತೆಯನ್ನು ಪಡೆದವನಾಗಿದ್ದ. ಇಷ್ಟಾದರೂ ಸರಳ ಸ್ವಭಾವಿ. ತನ್ನ ವಿದ್ವತ್ಪ್ರೌಡಿಮೆಯ ಬಗ್ಗೆ ಬಾಲಾಕ ಒಣಜಂಬದಿಂದಲೇ ಹೇಳಿದ: “ಮಹಾರಾಜಾ, ನಾನು ನಿನಗೆ ಬ್ರಹ್ಮತತ್ವದ ಬಗ್ಗೆ ಉಪದೇಶಿಸಲು ಬಂದಿದ್ದೇನೆ. ಸ್ವೀಕರಿಸಲು ಸಿದ್ಧನಾಗು.”
ರಾಜನಾದ ಅಜಾತಶತೃ ಸದ್ವಿನಯಭಾವದಿಂದಲೇ ಎರಡೂ ಕೈಗಳನ್ನು ಜೋಡಿಸುತ್ತಾ, ವಿನಂತಿಸಿಕೊಂಡ:
“ಬ್ರಾಹ್ಮಣೋತ್ತಮಾ, ನನ್ನನ್ನು ತಾವು ರಾಜರ್ಷಿಯಾದ ಜನಕ ಮಹಾರಾಜನಿಗೆ ನಮ್ಮವನೆಂದೇ ತಿಳಿದು, ಅನುಗ್ರಹಿಸಲು ಬಂದಿರುವುದನ್ನು ಕಂಡು, ಸಂತೃಪ್ತನಾಗಿದ್ದೇನೆ. ತಮ್ಮ ಆಶ್ವಾಸನೆಯ ಆಶೀರ್ವಾದಪೂರ್ವಕದ ಹಾರೈಕೆಯ ಮಾತುಗಳಿಗಾಗಿ ನಾನು ಒಂದು ಸಾವಿರ ಗೋವುಗಳನ್ನು ತಮಗೆ ನೀಡಿ ಪುರಸ್ಕರಿಸುತ್ತೇನೆ. ಕೃಪೆ ಮಾಡಿ ಸ್ವೀಕರಿಸಿ.” ಗರ್ಗ್ಯಾ ಬಾಲಾಕಿ ರಾಜನ ಸೌಜನ್ಯತೆಯನ್ನು ಕಂಡು, ಬೆರಗಾಗಿ ಉಪದೇಶಿಸುತ್ತಾ ಹೇಳಿದ:
“ಮಹಾರಾಜಾ, ಸೂರ್ಯಮಂಡಲದಲ್ಲಿರುವ ಅಂತರ್ಯಾಮಿ ಎನಿಸಿರುವ ಪುರುಷ ಶ್ರೇಷ್ಠನನ್ನು ನಾನು ಉಪಾಸನೆ ಮಾಡುತ್ತೇನೆ.”
ಎರಡೂ ಕಿವಿಕೊಟ್ಟು, ಶ್ರದ್ಧಾಸಕ್ತಿಯಿಂದ ಆಲಿಸುತ್ತಿದ್ದ ರಾಜನಾದ ಅಜಾತಶತೃ ಸವಿನಯದಿಂದಲೇ ತಿಳಿಸಿದ:
“ಮಹಾತ್ಮ ಬೇಡಿ, ಆ ಬಗ್ಗೆ ಏನೂ ಹೇಳಬೇಡಿ. ಆ ಪುರುಷಶ್ರೇಷ್ಠನು ಸರ್ವರಿಗಿಂತಲೂ ಸರ್ವೋತ್ತಮನಾಗಿದ್ದು, ಆತನೇ ಸದಾ ನನ್ನ ಉಪಾಸನೆಯ ಆರಾಧ್ಯದೇವ ಎನಿಸಿದ್ದಾನೆ.”
ಬಾಲಾಕಿ ಈಗ ಮತ್ತೆ ಉಪದೇಶ ರೀತಿಯಲ್ಲಿಯೇ ಹೇಳಿದ:
“ಚಂದ್ರಮಂಡಲದಲ್ಲಿ ಅಂತರ್ಯಾಮಿಯ ರೀತಿಯಲ್ಲಿ ಬ್ರಹ್ಮರೂಪದಲ್ಲಿರುವವನನ್ನು ನಾನು ಸದಾ ಉಪಾಸನೆ ಮಾಡುತ್ತೇನೆ.”
ಅಜಾತಶತೃ ಆಗಲೂ ವಿನಮ್ರತೆಯಿಂದಲೇ ಶಿಷ್ಯಮನೋಭಾವದಲ್ಲಿಯೇ ನುಡಿದ:
“ಆತನಲ್ಲಿಯೇ ಬ್ರಹ್ಮಸ್ವರೂಪಿಯ ರೂಪದಲ್ಲಿ ಆರಾಧಿಸುತ್ತಾ ಪುನೀತನಾಗಿರುವುದರಿಂದ ಈ ಉಪದೇಶಕ್ಕಿಂತಲೂ ಶ್ರೇಷ್ಠವಾದುದನ್ನು ಕೃಪೆ ಮಾಡಿ ತಿಳಿಸಿ.”
ಬಾಲಾಕಿ ಹೇಳಿದ:
“ಯಾವ ವಿದ್ಯುನ್ಮಂಡಲದಲ್ಲಿ ಅಂತರ್ಗತರೂಪದಲ್ಲಿ ಬ್ರಹ್ಮ ಸ್ವರೂಪಿ ಆಗಿರುವನೋ, ಅವನನ್ನು ನಾನು ಆರಾಧಿಸುತ್ತೇನೆ.”
“ಮಹಾತ್ಮಾ, ಆತನನ್ನೇ ನಾನೂ ತೇಜ:ಪುಂಜ ಆತ್ಮನೆಂದು ಭಾವಿಸಿ, ಆರಾಧಿಸುತ್ತಿದ್ದೇನೆ. ಆದ್ದರಿಂದ ಆ ಬಗ್ಗೆಯೂ ಉಪದೇಶದ ರೂಪದಲ್ಲಿ ದಯವಿಟ್ಟು ಏನನ್ನೂ ಪ್ರಸ್ತಾಪಿಸಬೇಡಿ. ಅಂತಹ ಉಪಾಸಕರೇ ಲೋಕದಲ್ಲಿ ತೇಜೋಪೂರಿತರೆನಿಸುವರು.”
ಗಾರ್ಗ್ಯ ಈಗ ರಾಜನಾದ ಆಜಾತ ಶತೃವಿನ ವಾದದ ಮುಂದೆ ಕಳೆಗುಂದತೊಡಗಿದ. ಆದರೂ ಧೃತಿಗೆಡದೆ ವಾಯು,ಅಗ್ನಿ,ಜಲ ಮೊದಲಾದ ನೇತ್ರಾಂತರ್ಗತಪುರುಷನನ್ನೇ ಬ್ರಹ್ಮನೆಂದು ಉಪದೇಶಿಸುತ್ತ ಹೋದ.
ಆದರೆ ರಾಜ ಅವೆಲ್ಲವೂ ಬ್ರಹ್ಮನ ಅಂಶ ಮಾತ್ರ ಎಂಬುದನ್ನು ಸರಳರೂಪವಾಗಿಯೇ ಸಮರ್ಥಿಸುತ್ತಾ ಹೋದ.
ಈಗ ತನ್ನ ಉಪದೇಶಾತ್ಮಕ ವಾದದಲ್ಲಿ ಗಾರ್ಗ್ಯ ಸೋತು, ಸುಣ್ಣ ಆಗತೊಡಗಿದ. ಕಡೆಗೆ ಈ ರಾಜರ್ಷಿಗೇ ಶರಣಾಗಿ, ಆತನನ್ನೇ ತನ್ನ ಗುರುವಿನ ರೂಪದಲ್ಲಿ ಸ್ವೀಕರಿಸಿದ. ತನ್ನನ್ನು ಶಿಷ್ಯನ ರೂಪದಲ್ಲಿ ಸ್ವೀಕರಿಸಲು ಕೇಳಿಕೊಂಡ. ಮೊದಲಿನ ಒಣಜಂಬ ಈಗ ಬಹುಮಟ್ಟಿಗೆ ಕಡಿಮೆ ಆಗಿತ್ತು. ರಾಜನಾದ ಆಜಾತಶತೃ ಆತ್ಮಜ್ಞಾನಿಯೂ, ವಿವೇಕ ಪೂರ್ಣನೂ ಎನಿಸಿದ್ದ. ಕ್ಷತ್ರಿಯನು ಬ್ರಾಹ್ಮಣನನ್ನು ಶಿಷ್ಯನನ್ನಾಗಿ ಸ್ವೀಕರಿಸುವುದು ಆ ಸಮಯದಲ್ಲಿ ಸತ್ ಸಂಪ್ರದಾಯ ಎನಿಸಿರಲಿಲ್ಲ. ಲೋಕಾರೂಢಿಯಲ್ಲಿ ಇಲ್ಲದ ಸಮಸ್ಯಾತ್ಮಕ ಗೊಂದಲಗಳಿಗೆ ವೃಥಾ ಅವಕಾಶ ನೀಡುವ ರೀತಿಯದಾಗಿತ್ತು. ಆದರೂ ವಿವೇಕಿಯಾದ ರಾಜ ಗಾರ್ಗ್ಯ ಬಾಲಾಕಿಯನ್ನು ದೂರದ ಒಂದು ಏಕಾಂತ ಸ್ಥಳಕ್ಕೆ ಕರೆದೊಯ್ದ.
ಅಲ್ಲೊಬ್ಬ ವ್ಯಕ್ತಿ ನಿದ್ರಾವಶತೆಯಲ್ಲಿ ಮಲಗಿದ್ದ ಅವನನ್ನು ಎಬ್ಬಿಸುತ್ತಾ ಅಜಾತಶತೃ ಕರೆದ:
“ಬ್ರಹ್ಮನ್, ಸೋಮರಾಜಾ, ಪಾಂಡರವಾಸಾ...”
ಇಲ್ಲ! ಅವನು ಎದ್ದೇಳಲಿಲ್ಲ. ನಿದ್ರಾವಸ್ಥೆಯಲ್ಲಿಯೇ ಇದ್ದ. ಅವನನ್ನು ಒಂದೆರಳು ಉರುಳು ಉರುಳಿಸುತ್ತಾ ಎಚ್ಚರಗೊಳಿಸಿದ. ಈಗ ಅವನು ನಿದ್ದೆಯಿಂದ ಎದ್ದು ಕುಳಿತ.
ರಾಜ ಅವನತ್ತ ಸಂಕೇತಿಸುತ್ತಾ ಬಾಲಾಕಿಯನ್ನು ಪ್ರಶ್ನಿಸಿದ.
“ಮಿತ್ರಾ, ಇದುವರೆಗೂ ಪ್ರಜ್ಞೆ ಇಲ್ಲದೆ ಮಲಗಿದ್ದ ಇವನಲ್ಲಿನ ವಿಜ್ಞಾನಮಯ ಪುರುಷನು ಇದುವರೆಗೂ ಎಲ್ಲಿಗೆ ಹೋಗಿದ್ದಾ?
ಇವನೆದ್ದ ಕೂಡಲೇ ಮತ್ತೆ ಅವನು ಇವನಲ್ಲಿ ಹೇಗೆ ಬಂದು ಸೇರಿಕೊಂಡ?”
ಈ ರಹಸ್ಯ ಗಾರ್ಗ್ಯನಿಗೆ ಇದುವರೆಗೂ ತಿಳಿದೇ ಇರಲಿಲ್ಲ. ಇದನ್ನು ಈಗ ರಾಜರ್ಷಿಯಾದ ಅಜಾತಶತೃವಿನಿಂದ ತಿಳಿಯುವ ಕುತೂಹಲ ಕೆರಳಿತು.
ಅಜಾತಶತೃ ಸಾವಧಾನವಾಗಿ ಶಿಷ್ಯನಿಗೆ ತಿಳಿಸತೊಡಗಿದ:
“ವ್ಯಕ್ತಿಯ ಹೃದಯದೊಂದಿಗೆ ಹಿತ ಎಂದೇ ಕರೆಯಲ್ಪಡುವ ಆನೇಕ ನಾಡಿಗಳು ಸೇರಿರುತ್ತವೆ. ಇವು ಸೇರಿರುವ ಜಾಗದಿಂದ ದೇಹಾದ್ಯಂತ ಪಸರಿಸಿರುತ್ತವೆ. ಹಾಗೆಯೇ ಪರಮಪುರುಷನಾದ ಪರಬ್ರಹ್ಮ ವ್ಯಕ್ತಿಯ ಶರೀರದಲ್ಲಿರುವ ಹೃದಯದಲ್ಲಿ ನೆಲೆಗೊಂಡಿರುತ್ತಾನೆ. ಪಂಚೇಂದ್ರಿಯಗಳಾದ ಕಣ್ಣು, ಕಿವಿ,ಮೂಗು,ನಾಲಿಗೆ ಮೊದಲಾದವೆಲ್ಲವೂ ಅವನ ಸೇವಕನಂತೆ ಕಾರ್ಯತತ್ಪರತೆಯಲ್ಲಿರುತ್ತದೆ. ಎದ್ದಾಗ ಅವೂ ಮತ್ತೆ ತಮ್ಮ ಕಾರ್ಯಗಳಲ್ಲಿ ತೊಡಗುತ್ತವೆ. ಅಂದರೆ ಪ್ರಾಣವೇ ಹೃದಯಾಂತರಂಗ ಆಗಿರುತ್ತದೆ. ಸಮಸ್ತ ಇಂದ್ರಿಯಗಳೂ ಪ್ರಾಣವನ್ನವಲಂಬಿಸಿದ್ದಾರೆ. ಪ್ರಾಣವು ಆತ್ಮನಲ್ಲಿ ಲೀನವಾಗಿರುತ್ತದೆ. ಇವೆರಡೂ ಆಗ ಏಕೀಭಾವದ ಅವಸ್ಥೆಯಲ್ಲಿರುತ್ತದೆ. ಇದನ್ನೇ ಆತ್ಮತತ್ವ ಎನ್ನುವರು. ಈ ಜ್ಞಾನ ಇಲ್ಲದುದರಿಂದಲೇ ದೇವೇಂದ್ರ ಅಂತಶ್ಯಕ್ತಿಯಿಂದ ವಂಚಿತನಾಗಿದ್ದ. ದಾನವರಿಂದ ಹಲವಾರು ಬಾರಿ ಪರಾಜಿತನೆನಿಸಿದ್ದ. ಇದನ್ನು ಗಳಿಸಿದ ನಂತರವೇ ಅವರನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಪಡೆದ. ಇದೇ ರೀತಿ ಆತ್ಮತತ್ವದ ಅರಿವು ಉಂಟಾದವನಲ್ಲಿ ಬ್ರಹ್ಮತತ್ವದ ರಹಸ್ಯವನ್ನು ತಿಳಿಯಲು ಸುಲಭ ಸಾಧ್ಯ ಆಗುವುದು.