ಮಹಾಭಾರತ ಕಥೆಗಳು

ಧರ್ಮರಾಜ ಒಂದೇ ಒಂದು ಸುಳ್ಳು ಹೇಳಿದ್ದರಿಂದ ನರಕಕ್ಕೆ ಹೋಗಬೇಕಾಯಿತು ಪುಣ್ಯಕ್ಷೇತ್ರ ರಣರಂಗ. ಪಾಂಡವರು ಐದು ಜನ. ಅವರ ಸೇನೆ ಏಳು ಅಕ್ಷೋಹಿಣಿ. ಕೌರವರು 100 ಜನ ಅವರ ಸೇನೆ ಹನ್ನೊಂದು ಅಕ್ಷೋಹಿಣಿ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕೃಪಾಚಾರ್ಯರು, ಅಶ್ವತ್ಥಾಮ ಇವರೆಲ್ಲರೂ ಕೌರವರ ಪಕ್ಷಪಾತಿಗಳು. ದ್ರೋಣಾಚಾರ್ಯರು ಭೀಷ್ಮಾಚಾರ್ಯರ ನಂತರ ಸೇನಾಧಿಪತಿಗಳಾದರು. ಇವರಿಗೆ ಐದು ದಿನದ ಸೇನಾಧಿಪತ್ಯ. ದ್ರೋಣಾಚಾರ್ಯರ ಕೈಯಲ್ಲಿ ಧನುಸ್ಸು ಇರುವವರೆಗೆ ತ್ರಿಮೂರ್ತಿಗಳೂ ಅವರ ಎದುರಿಗೆ ನಿಲ್ಲಲಾರರು. ಅಂತಹ ಆಶೀರ್ವಾದ ಭಾರಧ್ವಜ ಋಷಿಗಳಿಂದ ಬಂದದ್ದು. ಇದಕ್ಕೆ ಭಗವಂತನಾದ ಕೃಷ್ಣನೇ ಉಪಾಯ ಹುಡುಕಬೇಕು. ಕೌರವರ ಸೇನೆಯಲ್ಲಿ ಅಶ್ವತ್ಥಾಮ ಎಂಬ ಒಂದು ಆನೆ ಇತ್ತು. ಇದು ಬಹಳ ಶೂರವಾದ ಆನೆ. ಅದನ್ನು ಭೀಮನು ಸಂಹರಿಸಿದನು. ಆಗ ಶ್ರೀ ಕೃಷ್ಣನು ಒಂದು ಉಪಾಯ ಹುಡುಕಿದ. ‘ಅಶ್ವತ್ಥಾಮ ಹತಃ ಕುಂಜರ” ‘ಅಶ್ವತ್ಥಾಮ ಎಂಬ ಆನೆ ಸತ್ತು ಹೋಯಿತು’ ಎಂಬ ಅರ್ಥ. ಹಾಗೆ ಕೂಗಲು ಧರ್ಮರಾಜನಿಗೆ ಶ್ರೀ ಕೃಷ್ಣ ಹೇಳಿದ. ಆಗ ಧರ್ಮರಾಜನು ಎಂದು ಇಂತಹ ವಿಷಯಕ್ಕೆ ಪ್ರವೇಶ ಮಾಡದವನಲ್ಲ. “ಅಶ್ವತ್ಥಾಮ ಹತಃ ಕುಂಜರ” ಎನ್ನುವಾಗ ಶ್ರೀ ಕೃಷ್ಣನು ತನ್ನ ಪಾಂಚಜನ್ಯವನ್ನು ಊದಿದಾಗ, ದ್ರೋಣಾಚಾರ್ಯರಿಗೆ ಕೇವಲ ಅಶ್ವತ್ಥಾಮ ಹತಃ ಎಂದು ಕೇಳಿಸಿತು. ಸ್ವತಃ ಧರ್ಮರಾಜನೇ “ಅಶ್ವತ್ಥಾಮ ಹತಃ” ಎಂದು ಮೂರು ಸಾರಿ ಕೂಗಿರುವಾಗ ನನ್ನ ಮಗನಿಗೆ ಏನಾಯಿತೆಂದೂ, ಅವನನ್ನು ಯಾರು ಕೊಂದರೆಂದೂ, ಚಿರಂಜೀವಿ ಆದರೂ ಸಹ ಸತ್ಯಸಂಧ ಧರ್ಮರಾಜ ಕೂಗಿದ್ದರಿಂದ ನನ್ನ ಮಗ ಸತ್ತೇ ಹೋದನೆಂದು ದ್ರೋಣಾಚಾರ್ಯರು ರಥದಲ್ಲಿಯೇ ತನ್ನ ದೇಹವನ್ನು ಧನಸ್ಸನ್ನು ಕೈಬಿಟ್ಟು ಮೂರು ಲೋಕಕ್ಕೆ ಸೂಕ್ಷ್ಮ ದೇಹದಲ್ಲಿ ಹೋಗಿ ನೋಡಿದರು. ಎಲ್ಲೆಲ್ಲಿಯೂ ಅಶ್ವತ್ಥಾಮ ಇರಲಿಲ್ಲ. ಓಹೋ ಈ ಪಾಂಡವರು ಮೋಸ ಮಾಡಿ ಜಯಿಸಬೇಕೆಂದು ಇಂಥ ಯುಕ್ತಿ ಹೂಡಿದ್ದಾರೆಂದು,
ಈ ಪಾಂಡವರನ್ನು ಪೂರ್ತಿ ಕೊಲ್ಲಬೇಕೆಂದು ನಿಶ್ಚಯಿಸಿ ಅವರ ದೇಹವನ್ನು ಸೇರಲು ಬಂದರೆ ಶ್ರೀ ಕೃಷ್ಣನ ಯುಕ್ತಿಯಿಂದ ಅವರ ಕಳೇಬರವು ರಣಾಂಗಣದಲ್ಲಿ ಸಣ್ಣ ತುಂಡಾಗಿ ಬಿದ್ದಿದೆ. ಸತ್ತ ನಾಯಿಯಲ್ಲಿ ಸೇರಿ ಆ ಸಣ್ಣ ಸಣ್ಣ ದೇಹದ ತುಂಡು ತೆಗೆದುಕೊಂಡು ಸಾಗುತ್ತಿರುವಾಗ ಶ್ರೀ ಕೃಷ್ಣನು ಬಂದು ‘ಏನಯ್ಯ, ಬ್ರಾಹ್ಮಣನಾಗಿ ಸತ್ತ ನಾಯಿಯಲ್ಲಿ ಸೇರಿ ಮಾಂಸ ಕಚ್ಚಿ ತೆಗೆದುಕೊಂಡು ಹೋಗುತ್ತಿದ್ದೀಯಲ್ಲಾ’ ಎಂದು ಮೂದಲಿಸಿದಾಗ, ದ್ರೋಣಾ ಚಾರ್ಯರು ಆ ನಾಯಿ ದೇಹ ಬಿಟ್ಟು ಹೋದರು. ಹೀಗೆ ದ್ರೋಣಾಚಾರ್ಯರನ್ನು ಸುಳ್ಳು ಹೇಳಿಯೇ ಕೊಂದು ಹಾಕಿದರು. ಆ ಒಂದು ಸುಳ್ಳು ಹೇಳಿದ್ದರಿಂದ ಧರ್ಮರಾಜ ನರಕಕ್ಕೆ ಹೋದ. ನರಕದಲ್ಲಿರುವವರಿಗೆ ಧರ್ಮವಂತನ ಆಗಮನದಿಂದ ನರಕವು ಶಾಂತವಾಯಿತು. ಅಲ್ಲಿಯವರೇ ತಾವು ಇಲ್ಲೇ ಇರಿ ನಮಗೆ ಆನಂದವಾಗುತ್ತದೆಂದು ಬೇಡಿಕೊಂಡರು. ಧರ್ಮರಾಜನು ಸಹ ಹಾಗೆ ಆಗಲಿ ಎಂದು ಸ್ವರ್ಗ ನಿರಾಕರಿಸಿದನು. ಇದರಿಂದ ಅವನಿಗೆ ಮೋಕ್ಷವೇ ಆಯಿತು. ಆದ್ದರಿಂದ ಅಧರ್ಮ-ಧರ್ಮದಿಂದ ಮುಕ್ತನಾದವನಿಗೆ ಸಾಕ್ಷಾತ್ ಬ್ರಹ್ಮ ಪದವಿಯೇ ಸಿಕ್ಕುತ್ತದೆ.