ಪುರಾಣ ಕಥೆಗಳು

“ಶಿವರಾತ್ರಿ” ಬಂದ ಬಗೆ ಅದೊಂದು ಬಡತನದ ಕುಟುಂಬ. ಮನೆಯ ಒಡತಿ ದೇವರಲ್ಲಿ ಮೊರೆ ಇಡುತ್ತಿದ್ದಳು: “ಪರಮೇಶ್ವರಾ, ಯಾಕಪ್ಪಾ ಹೀಗೆ ನಮ್ಮನ್ನು ಪರೀಕ್ಷಿಸುತ್ತಿದ್ದೀ? ಮೂರು ದಿವಸಗಳಿಂದ ಮನೆಯಲ್ಲಿ ಯಾರೊಬ್ಬರಿಗೂ ಒಂದು ತುತ್ತು ಅನ್ನವೂ ಸಿಕ್ಕಿಲ್ಲ. ಮಕ್ಕಳೆಲ್ಲಾ ಹಸಿವಿನಿಂದ ಕೊರಗಿ-ಸೊರಗುತ್ತಿದ್ದಾರೆ.” ಕುಟುಂಬದ ಯಜಮಾನನಿಂದ ಹೆಂಡತಿಯ ಹೃದಯದ ನೋವಿನ ಕೂಗನ್ನು ಕೇಳಲು ಆಗಲಿಲ್ಲ. ಅವನೊಬ್ಬ ಬೇಟೆಗಾರ. ಕೂಡಲೇ ಬಿಲ್ಲು-ಬಾಣ ತೆಗೆದುಕೊಂಡ. ಪರಮೇಶ್ವರನನ್ನು ಮನಸ್ಸಿನಲ್ಲಿಯೇ ಸ್ಮರಿಸುತ್ತಾ ಕಾಡಿನ ದಾರಿ ಹಿಡಿದ. ತುಂಬಾ ದೂರ ದಟ್ಟವಾಗಿ ಬೆಳೆದು ನಿಂತಿದ್ದ ಮರಗಳ ನಡುವೆ ಬಂದ ತುಂಬಾ ಕಾಲ ನಡೆ-ನಡೆದು ಸಾಕಾದ. ಯಾವೊಂದು ಪ್ರಾಣಿಯೂ ಕಣ್ಣಿಗೆ ಬೀಳಲಿಲ್ಲ. ಬೇಸರ, ಬೇಗುದಿ ಎರಡೂ ಭಾವನೆಗಳು ಒಟ್ಟಿಗೆ ಮೂಡಿದವು. ಅಲ್ಲೊಂದು ಕೊಳ ಕಾಣಿಸಿತು. ಅದರ ಹತ್ತಿರವೇ ಒಂದು ಮರ. ಮರದ ಕೊಂಬೆಗಳ ನಡುವೆ ಒಂದು ಶಿವಲಿಂಗ. ಬೇಟೆಗಾರ ತುಂಬಾ ದಣಿದಿದ್ದ ಮೊದಲು ಕೊಳದಲ್ಲಿ ಇಳಿದು ನೀರು ಕುಡಿದು ಬಾಯಾರಿಕೆಯನ್ನು ಹೋಗಲಾಡಿಸಿಕೊಂಡು ನಿಧಾನವಾಗಿ ಮರವನ್ನು ಹತ್ತಿದ. ತುಂಬಾ ಎಲೆಗಳಿದ್ದ ಕೊಂಬೆಯೊಂದರ ಮೇಲೆ ಮರೆಯಾಗಿ ಕುಳಿತು ಯಾವುದಾದರೂ ಜಿಂಕೆ ಎತ್ತಲಿಂದಾದರೂ ಬರಬಹುದೇನೋ - ಎಂದು ಯೋಚಿಸುತ್ತಾ, ಸದ್ದಿಲ್ಲದೇ ಕಣ್ಣರಳಿಸಿ ನೋಡುತ್ತಾ ಕುಳಿತ. ರಾತ್ರಿಯೂ ಆಯಿತು. ನಾಲ್ಕೈದು ಜಿಂಕೆಗಳು ನೀರು ಕುಡಿಯಲು ಆ ಕಡೆ ಬಂದವು. ಪಾದಗಳ ಸಪ್ಪಳ ಮರದ ಮೇಲಿದ್ದ ಬೇಟೆಗಾರನಿಗೆ ಕೇಳಿಸಿತು. ಬೇಟೆಗಾರ ಜಿಂಕೆಗಳ ಕಡೆ ಬಾಣವನ್ನು ಗುರಿ ಇಟ್ಟ. ಒಂದು ಜಿಂಕೆ ನೋಡಿಬಿಟ್ಟಿತು. ಕೂಡಲೇ ದೈನ್ಯದಿಂದ ಕೇಳಿಕೊಂಡಿತು: “ಅಪ್ಪಾ, ದಯೆ ತೋರು. ನಮ್ಮ ಮೇಲೆ ಬಾಣ ಪ್ರಯೋಗಿಸಬೇಡ. ನಮ್ಮ ಮರಿಗಳು ನಮಗಾಗಿ ಗುಹೆಯಲ್ಲಿ ದಾರಿ ಕಾಯುತ್ತಿರುತ್ತವೆ. ಅವನ್ನು ಕಂಡು, ಸಮಾಧಾನಪಡಿಸಿ ಹಿಂದಿರುಗುವವರೆಗಾದರೂ ಅವಕಾಶ ಕೊಡು. ನಾವು ನಿಮ್ಮ ಸೇವೆಗೆ ಸಿದ್ಧರಾಗುತ್ತೇವೆ.”
ಬೇಟೆಗಾರನಿಗೆ ಜಿಂಕೆಯ ಮಾತು ಕೇಳಿ ನಗು ಬಂತು. ಈ ಕಲಿಯುಗದಲ್ಲಿ ಇದು ಯಾವ ಪುಣ್ಯಕೋಟಿ ಎಂಬ ಪ್ರಾಣಿ ಇರಬಹುದಪ್ಪಾ! ಎಂದು ಆಶ್ಚರ್ಯವೂ ಆಯಿತು. ಅವನು ಹೇಳಿದ: “ಕೈಗೆ ಬಂದ ಬೇಟೆಯನ್ನು ಕೈ ಬಿಡುವಂತಹ ಮೂರ್ಖ ನಾನಲ್ಲ. ನನ್ನ ಮಕ್ಕಳೂ ಹಸಿವೆಯಿಂದ ಒದ್ದಾಡುತ್ತಿದ್ದಾರೆ". ಜಿಂಕೆ ಅದೇ ದೀನ ಭಾವದೊಂದಿಗೆ ಕೇಳಿಕೊಂಡಿತು: “ನಾವೂ ನಮ್ಮ ಮಕ್ಕಳು ಮರಿಯ ಸಲುವಾಗಿಯೇ ನಿನ್ನನ್ನು ಇಷ್ಟೊಂದು ಕೇಳಿಕೊಳ್ಳುತ್ತಿರುವುದು. ಒಂದು ಬಾರಿ ಅವುಗಳ ಮುಖ ನೋಡಿ, ಆಹಾರವನ್ನು ಕೊಟ್ಟು, ಪ್ರಾಮಾಣಿಕತೆಯಿಂದ ಹಿಂದಿರುಗುತ್ತೇವೆ.
ಕಲ್ಲು ಹೃದಯದವನಾಗಿದ್ದ ಬೇಟೆಗಾರನ ಹೃದಯವೂ ಈಗ ಕರಗಿ ನೀರಾಗಿಹೋಯಿತು. ಗುರಿ ಇಟ್ಟಿದ್ದ ಬಾಣ ಹಾಗೆಯೇ ಕೆಳಗಿಳಿಯಿತು. ಅವನ ಕಣ್ಣಲ್ಲಿ ಕರುಣೆ ತುಂಬಿಬಂತು. ಆದರೂ ನಿಷ್ಠುರವಾಗಿಯೇ ನುಡಿದ: “ಬೆಳಗಾಗುವುದರೊಳಗಾಗಿ ಬರಬೇಕು. ಮಾತಿಗೆ ತಪ್ಪಿದರೆ ಇನ್ನೆಂದೂ ದಯೆ ತೋರಿಸೆ.” ಜಿಂಕೆಗಳಿಗೆ ಹೋದ ಜೀವ ಬಂದಂತಾಯಿತು. ಬೇಗ ಬೇಗ ತಮ್ಮ ಗುಹೆಯ ಕಡೆ ಮನ ಹರಿಸಿದುವು. ಆದರೂ ಅವುಗಳ ಪಾದಗಳು ದುಃಖದಿಂದ ನಿಧಾನವಾಗಿ ಸಾಗುತ್ತಿದ್ದವು. ಇತ್ತ ಬೇಟೆಗಾರನ ಮನಸ್ಸಿನಲ್ಲಿ ಜಿಂಕೆಗಳ ಮಾತು ಮರುಕಳಿಸಿದವು. ತನ್ನ ಮಕ್ಕಳ ಮಡದಿಯ ನೆನಪೂ ಬಾಧಿಸತೊಡಗಿತು. ಜಿಂಕೆಗಳು ಕೊಟ್ಟ ಮಾತಿನಂತೆ ಹಿಂದಿರುಗುವುವೋ, ಇಲ್ಲವೋ ಎಂಬ ಶಂಕೆಯೂ ಹೆಚ್ಚಿತು. ಬೇಸರದಿಂದ ಮರದ ಮೇಲೆ ಕುಳಿತಲ್ಲಿಂದಲೇ ಒಂದೊಂದೇ ಬಿಲ್ವದ ಎಲೆಯನ್ನು ಕಿತ್ತು ಕೆಳಗೆ ಹಾಕತೊಡಗಿದ. ಆ ಎಲೆಗಳು ಶಿವನ ಲಿಂಗದ ಮೇಲೆ ಬೀಳತೊಡಗಿದವು. ರಾತ್ರಿಯೆಲ್ಲಾ ಬೇಸರದ ಬೇಗುದಿಯಲ್ಲಿ ಎಲೆಗಳನ್ನು ಕಿತ್ತುಹಾಕುತ್ತಲೇ ಇದ್ದ. ಜಿಂಕೆಗಳ ಹಿಂದಿರುಗುವಿಕೆಗಾಗಿ ನಿರೀಕ್ಷಿಸುತ್ತಲೇ ಇದ್ದ. ಆದರೂ ಜಿಂಕೆಗಳು ಇನ್ನೂ ಬಾರದಿರುವುದನ್ನು ಕಂಡು ನಿಜಕ್ಕೂ ನಾನೊಬ್ಬ ದಡ್ಡ; ಕೈಗೆ ಬಂದ ವಸ್ತುವನ್ನು ಕೈಬಿಡಬಾರದಿತ್ತು ಎಂದು ತನ್ನಷ್ಟಕ್ಕೆ ತಾನೇ ಪೇಚಾಡತೊಡಗಿದ. ಅತ್ತ ಜಿಂಕೆಗಳು ಮರಿಗಳ ಬಳಿಗೆ ಬಂದವು. ಆಹಾರ ಕೊಟ್ಟವು. ಸಮಾಧಾನ ಹೇಳಿ ದುಃಖದಿಂದಲೇ ಕೊಟ್ಟ ಮಾತಿಗೆ ತಪ್ಪದೆ ಬೆಳಗಾಗುವ ಮೊದಲೇ ಬೇಟೆಗಾರನ ಬಳಿಗೆ ಹಿಂದಿರುಗಿದವು. ಮರಿಗಳೂ ಹಿಂಬಾಲಿಸಿದವು. ಬೇಟೆಗಾರನ ಮುಂದೆ ನಿಂತು ಜಿಂಕೆಗಳು ಹೇಳಿದವು: “ಬೇಟೆಗಾರನೇ, ತಡವಾದುದಕ್ಕಾಗಿ ಕ್ಷಮೆ ಇರಲಿ. ನಮ್ಮ ಮಕ್ಕಳು-ಮರಿಗಳನ್ನು ಸಂತೈಸಿ ಹಿಂದಿರುಗಲು ಕೊಂಚ ತಡವಾಯಿತು. ಆದರೆ ನಮ್ಮನ್ನು ಅಗಲಿರಲಾರದೆ ಅವೂ ನಮ್ಮೊಂದಿಗೆ ಬಂದಿದೆ. ಇನ್ನು ನಿನಗೆ ತಡಮಾಡುವುದು ತರವಲ್ಲ. ಈಗಲೇ ನಮ್ಮೆಲ್ಲರನ್ನೂ ಕೊಂದುಬಿಡು. ನಮ್ಮ ಶರೀರದ ಮಾಂಸವನ್ನು ತೆಗೆದುಕೊಂಡು ಹೋಗು. ನಿಮ್ಮ ಮಡದಿ-ಮಕ್ಕಳಿಗೆ ಕೊಡು. ಪಾಪ, ಅವರೆಷ್ಟು ಹಸಿದಿದ್ದಾರೋ! ನಮ್ಮಿಂದ ಅವರ ಹಸಿವು ಹಿಂಗಲಿ.” ಅವುಗಳ ವಿನಯದ ಮಾತುಗಳನ್ನು ಕೇಳುತ್ತಿದ್ದಂತೆ ಬೇಟೆಗಾರನ ಕಣ್ಣುಗಳಲ್ಲಿ ಕಣ್ಣೀರು ಉಕ್ಕಿ ಬಂತು. ಅವನು ಹೇಳಿದ: “ನಿಮ್ಮ ಪ್ರಾಮಾಣಿಕತೆ, ಸತ್ಯಸಂಧತೆಯನ್ನು ಕಂಡು ನನ್ನ ಮನಸ್ಸು ಬದಲಾಯಿಸಿದೆ. ನನ್ನಲ್ಲಿದ್ದ ಕ್ರೌರ್ಯ ಭಾವನೆ ಅಳಿದಿದೆ. ಹೋಗಿ ನೀವೆಲ್ಲರೂ ಸಂತೋಷದಿಂದ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ, ದೇವರು ನಿಮಗೆ ಒಳ್ಳೆಯದು ಮಾಡಲಿ.” ಹೀಗೆ ಹೇಳುತ್ತಾ ಬೇಡನು ಇನ್ನೊಂದು ಬಿಲ್ವಪತ್ರವನ್ನು ಕಿತ್ತು, ಬೇಸರದಿಂದಲೇ ಕೆಳಗೆ ಹಾಕಿದ. ಅದೂ ಶಿವನ ಲಿಂಗದ ಮೇಲೆ ಬಿತ್ತು. ಬೇಟೆಗಾರ ಈ ವೇಳೆಗೆ ಒಂದು ಸಾವಿರದ ಎಂಟು ಬಿಲ್ವಪತ್ರಗಳನ್ನು ಕೆಳಗೆ ಹಾಕಿದ್ದ. ಅವೆಲ್ಲವೂ ಶಿವನ ಲಿಂಗದ ಮೇಲೆ ರಾಶಿಯಾಗಿ ಬಿದ್ದಿದ್ದವು.
ಬೇಟೆಗಾರ ಕೆಳಗಿಳಿದು ಬಂದು ಲಿಂಗದ ಮೇಲೆ ರಾಶಿಯಂತೆ ಎಲೆಗಳು ಬಿದ್ದಿರುವುದನ್ನು ಕಂಡ. ಅವನಿಗೇ ಅಲೌಕಿಕ ಆನಂದವಾಯಿತು. ಅಷ್ಟರಲ್ಲಿ ಲಿಂಗದಿಂದ ಪರಶಿವನು ಉದ್ಭವಿಸಿ ಹೊರಬಂದ. ಪ್ರೀತಿಯಿಂದ ಬೇಟೆಗಾರನ ಕಡೆ ನೋಡುತ್ತಾ ಹೇಳಿದ: “ಬೇಟೆಗಾರನೇ, ನಿನ್ನ ಬಿಲ್ವಾರ್ಚನೆ ಹಾಗೂ ದಯಾಳುತನವನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ನನ್ನ ಮನಸ್ಸಿಗೆ ಮೆಚ್ಚುಗೆ ಎನಿಸಿದೆ. ಹೋಗು, ಇನ್ನು ಮುಂದೆ ನೀನು, ನಿನ್ನ ಮನೆಯವರು ಎಲ್ಲರೂ ಸುಖವಾಗಿರುತ್ತೀರಿ ಎಂದು ಆಶೀರ್ವದಿಸಿದ.” ಈ ಘಟನೆ ಮಾಘ ಕೃಷ್ಣಚತುರ್ದಶಿಯಂದು ಸಂಭವಿಸಿತು. ಈ ಘಟನೆಯ ನೆನಪಿಗಾಗಿಯೇ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ರಾತ್ರಿ ಎಲ್ಲಾ ಶಿವನ ಆರಾಧನೆಯಲ್ಲಿಯೇ ಜಾಗರಣೆ ಮಾಡುತ್ತಾರೆ. ಶಿವನ ಕೃಪೆಗೆ ಪಾತ್ರರಾಗುತ್ತಾರೆ.