ಮಹಾಭಾರತ ಕಥೆಗಳು

ನಳನ ಕಥೆ ಜೂಜಾಟದಲ್ಲಿ ದುರ್ಯೋಧನನಿಂದ ಸೋತುಹೋದ ಧರ್ಮರಾಯನು ಚಿಂತೆಯಲ್ಲಿ ಮಗ್ನನಾಗಿದ್ದನು. ತನ್ನಂತೆ ನೊಂದವರು ಯಾರೂ ಈ ಭೂಮಿಯಲ್ಲೇ ಇಲ್ಲ ಎಂದು ತಿಳಿದು ಬೇಸರಗೊಂಡಿದ್ದನು. ಆಗ ಬೃಹದೇಶ್ವರನೆಂಬ ಮುನಿ ಅಲ್ಲಿಗೆ ಬಂದರು. ಅವರು ಧರ್ಮರಾಯನಿಗೆ ಸಾಂತ್ವನ ಹೇಳುವ ಬಗೆಯಲ್ಲಿ ನಳದಮಯಂತಿಯರು ಪಟ್ಟ ಕಷ್ಟದ ಕಥೆಯನ್ನು ಹೇಳಿದರು. “ನಿಷದ ದೇಶದ ರಾಜನಾದ ವೀರಸೇನನು ಚೆನ್ನಾಗಿ ರಾಜ್ಯವಾಳುತ್ತಿದ್ದನು. ಅವನಿಗೆ ನಳನೆಂಬ ಮಗ ಇದ್ದನು. ಸೌಂದರ್ಯವೇ ಮೂರ್ತಿವೆತ್ತ ನಳನು ವಿದ್ಯೆಯಲ್ಲೂ ಅರಿವಿನಲ್ಲೂ ಶೌರ್ಯದಲ್ಲೂ ಶ್ರೇಷ್ಠನಾಗಿ ಬೆಳಗಿದನು. ಸದ್ಗುಣಗಳನ್ನು ಪಡೆದ ಅವನು ಕುದುರೆ ಸವಾರಿಯಲ್ಲಿಯೂ ನಿಪುಣನಾಗಿದ್ದನು. ಅದೇ ಸಮಯದಲ್ಲಿ ವಿದರ್ಭ ದೇಶವನ್ನು ಭೀಮನೆಂಬ ರಾಜನು ಆಳುತ್ತಿದ್ದನು. ಅವನಿಗೆ ದಮಯಂತಿ ಎಂಬ ಮಗಳಿದ್ದಳು. ಅವಳು ಅರಿವಿನಿಂದಲೂ, ಕಲೆಗಳಲ್ಲಿಯೂ ಶ್ರೇಷ್ಠಳಾಗಿದ್ದಳು. ಅವಳ ಸೌಂದರ್ಯ ಲಾವಣ್ಯಗಳ ಕೀರ್ತಿಯನ್ನು ಹಲವರು ವರ್ಣಿಸಿದ್ದನ್ನು ಕೇಳಿ ನಳನು ಅವಳನ್ನು ಕಾಣದೇ ಇದ್ದರೂ ಮನಸ್ಸಿನಲ್ಲೇ ಅವಳನ್ನು ಪ್ರೀತಿಸತೊಡಗಿದನು. ಅವನಂತೆಯೇ ದಮಯಂತಿಯೂ ಸಹ ನಳನ ಬಗ್ಗೆ ಕೇಳಿ ತಿಳಿದು ಅವನನ್ನು ಪ್ರೀತಿಸತೊಡಗಿದಳು. ಒಬ್ಬರನ್ನೊಬ್ಬರು ನೋಡದೆಯೇ ನಳದಮಯಂತಿಯರ ಪ್ರೇಮ ಬೆಳೆಯಿತು.

ಒಂದು ದಿನ ನಳನು ಅರಮನೆಯ ಹತ್ತಿರದ ತೋಟದಲ್ಲಿ ಒಬ್ಬನೇ ಇದ್ದನು. ಆಗ ಸುಂದರವಾದ ಹಂಸಗಳು ಅಲ್ಲಿಗೆ ಬಂದವು. ಅವುಗಳಲ್ಲಿ ಒಂದು ಅವನ ಬಳಿಗೆ ಬಂದು “ಸುಂದರನಾದ ರಾಜನೇ! ನಿನಗೆ ಎಲ್ಲ ಬಗೆಯಲ್ಲೂ ಅನುರೂಪಳಾದವಳು ಒಬ್ಬಳು ಇದ್ದಾಳೆ. ಅವಳು ವಿದರ್ಭ ದೇಶದ ರಾಜ ಭೀಮನ ಮಗಳು ದಮಯಂತಿ. ಅವಳನ್ನು ನೀನು ಪತ್ನಿಯಾಗಿ ಪಡೆಯಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿತು. ತಾನು ಮನದಲ್ಲಿ ಬಯಸಿದ ದಮಯಂತಿಯ ಬಳಿಗೆ ಹೋಗಿ ಇಚ್ಛೆಯನ್ನು ತಿಳಿಸುವಂತೆ ನಳನು ಹಂಸವನ್ನು ಕೇಳಿಕೊಂಡನು. ಹಂಸವು ದಮಯಂತಿಯ ಬಳಿ ಹಾರಿಹೋಯಿತು. ನಳನ ಕೀರ್ತಿಯನ್ನು ಅವಳ ಬಳಿ ಹೇಳಿತು. ತುಂಬಾ ಸಂತೋಷದಿಂದ ದಮಯಂತಿಯು ತನ್ನ ಇಚ್ಛೆಯನ್ನು ನಳನಿಗೆ ತಿಳಿಸುವಂತೆ ಹಂಸವನ್ನು ಪ್ರಾರ್ಥಿಸಿ ಅದನ್ನು ದೂತನಾಗಿ ಕಳುಹಿಸಿದಳು.

ಅಂದಿನಿಂದ ದಮಯಂತಿ ನಳನನ್ನೇ ನೆನೆಯುತ್ತಾ ನೆಮ್ಮದಿ ಇಲ್ಲದೇ ಕಾಲ ಕಳೆದಳು. ಅವಳ ಮನಃಸ್ಥಿತಿಯನ್ನು ಅವಳ ಸಖಿಯರು ಭೀಮನಿಗೆ ತಿಳಿಸಿದರು. ದಮಯಂತಿ ತನ್ನ ಪತಿಯನ್ನು ತಾನೇ ಆರಿಸಲು ಸ್ವಯಂವರವನ್ನು ನಡೆಸಲು ಭೀಮನು ಏರ್ಪಾಡು ಮಾಡಿದನು. ಭೂಮಂಡಲದ ಎಲ್ಲ ರಾಜರೂ ದಮಯಂತಿಯ ಸ್ವಯಂವರಕ್ಕೆ ಬಂದರು. ನಳನು ಸ್ವಯಂವರದಲ್ಲಿ ಭಾಗವಹಿಸಲು ಬರುತ್ತಿರುವಾಗ, ದೇವತೆಗಳು ಅವನನ್ನು ಎದುರಾದರು. “ಆಡಿದ ಮಾತನ್ನು ತಪ್ಪದ ನಳ ಮಹಾರಾಜನೇ! ನಾವು ದಮಯಂತಿ ಸ್ವಯಂವರಕ್ಕೆ ಹೊರಟಿದ್ದೇವೆ. ನೀನು ನಮ್ಮ ದೂತನಾಗಿ ದಮಯಂತಿಯ ಬಳಿಗೆ ಹೋಗಿ ನಮ್ಮಲ್ಲಿ ಒಬ್ಬರನ್ನು ಆರಿಸುವಂತೆ ಹೇಳು” ಎಂದು ಇಂದ್ರನು ಹೇಳಿದನು. ನಳನು ಅದಕ್ಕೆ ಒಪ್ಪಿ ಅರಮನೆಗೆ ಹೋಗಿ ತಾನು ನಳನೆಂದೂ ದೇವತೆಗಳ ದೂತನಾಗಿ ಬಂದಿರುವನೆಂದೂ ಹೇಳಿದನು.

ದಮಯಂತಿ ನಳನನ್ನು ಬಿಟ್ಟು ಬೇರಾರನ್ನೂ ಪತಿಯಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಿದಳು. ಈ ಸಮಾಚಾರವನ್ನು ನಳನು ದೇವತೆಗಳಿಗೆ ಮುಟ್ಟಿಸಿದನು. ಸ್ವಯಂವರಕ್ಕಾಗಿ ದಮಯಂತಿ ಕೈಯ್ಯಲ್ಲಿ ಮಾಲೆ ಹಿಡಿದು ಮಂಟಪಕ್ಕೆ ಬಂದಳು. ಅಲ್ಲಿಗೆ ಆಗಮಿಸಿದ್ದ ಒಬ್ಬೊಬ್ಬ ರಾಜರನ್ನೂ ಅವಳಿಗೆ ಪರಿಚಯ ಮಾಡಿಸಿದರು. ಆಗ ರೂಪದಲ್ಲಿ ನಳನಂತೆಯೇ ಇರುವ ಐವರನ್ನು ನೋಡಿ ದಮಯಂತಿ ಗೊಂದಲಕ್ಕೆ ಒಳಗಾದಳು. ಅವಳು ದೇವತೆಗಳನ್ನು ತಾನು ನಳನಲ್ಲದೆ ಬೇರಾರನ್ನೂ ವಿವಾಹವಾಗಲು ಸಾಧ್ಯವಿಲ್ಲ. ಆದ್ದರಿಂದ ಅವರು ನಿಜವಾದ ನಳನನ್ನು ತೋರಿಸಬೇಕು ಎಂದು ಪ್ರಾರ್ಥಿಸಿದಳು. ದೇವತೆಗಳು ದಮಯಂತಿಯ ದೃಢ ನಿಶ್ಚಯವನ್ನು ಕಂಡು ಆಶ್ಚರ್ಯಗೊಂಡರು. ದೇವತೆಗಳ ರೆಪ್ಪೆ ಮುಚ್ಚದ ಕಣ್ಣುಗಳು, ಬಾಡದ ಹೂಗಳು, ನೆಲವನ್ನು ಮುಟ್ಟದ ಪಾದಗಳನ್ನು ದಮಯಂತಿ ನೋಡಿದಳು. ಇದರಿಂದ ನಿಜವಾದ ನಳನನ್ನು ಕಂಡು ಹಿಡಿದು ಅವನಿಗೇ ಮಾಲೆ ಹಾಕಿದಳು. ದೇವತೆಗಳು ಸಂತೋಷಗೊಂಡು ನಳನಿಗೆ ಎಂಟು ವರಗಳನ್ನು ಕೊಟ್ಟು ತೆರಳಿದರು. ನಳದಮಯಂತಿಯರ ವಿವಾಹ ಸಂಭ್ರಮದಿಂದ ನಡೆಯಿತು.

ವಿದರ್ಭ ದೇಶದಲ್ಲಿ ಕೆಲವು ದಿನಗಳಿದ್ದು ನಳನು ದಮಯಂತಿಯೊಂದಿಗೆ ನಿಷಧ ದೇಶಕ್ಕೆ ಬಂದು ಚೆನ್ನಾಗಿ ರಾಜ್ಯಭಾರ ಮಾಡಿದನು. ಅವನಿಗೆ ಇಂದ್ರಸೇನ ಎಂಬ ಮಗನೂ ಇಂದ್ರಸೇನೆ ಎಂಬ ಮಗಳೂ ಹುಟ್ಟಿದರು. ಇದು ಹೀಗಿರಲು, ದೇವತೆಗಳು ಸ್ವಯಂವರವನ್ನು ಮುಗಿಸಿಕೊಂಡು ದೇವಲೋಕಕ್ಕೆ ಹಿಂದಿರುಗುತ್ತಿರುವಾಗ, ಕಲಿಯನ್ನೂ ದ್ವಾಪರನನ್ನೂ ಭೇಟಿಯಾದರು. ತಾವು ದಮಯಂತಿ ಸ್ವಯಂವರಕ್ಕೆ ಹೋಗಿ ಬರುತ್ತಿರುವುದಾಗಿ ತಿಳಿಸಿದರು. ಆದರೆ ಕಲಿಯು ತಾನು ದಮಯಂತಿಯನ್ನು ವರಿಸುವುದಾಗಿ ಖಂಡಿತವಾಗಿ ಹೇಳಿದನು. ಸ್ವಯಂವರ ಆಗಿಯೇ ಹೋಯಿತಲ್ಲ ಎಂದು ಇಂದ್ರನು ನಕ್ಕನು. ದೇವತೆಗಳು ಹೋದ ನಂತರ ಕಲಿಯು ದ್ವಾಪರನಿಗೆ “ನನ್ನಿಂದ ಕೋಪವನ್ನು ನಿಗ್ರಹಿಸಲು ಸಾಧ್ಯವಿಲ್ಲ. ನಾನು ನಳನ ಒಳಗೆ ಪ್ರವೇಶಿಸಿ ಮಹಾರಾಜ ಪದವಿಯಿಂದ ಅವನನ್ನು ಕೆಳಗೆ ಇಳಿಸುತ್ತೇನೆ. ದಮಯಂತಿಯೊಂದಿಗೆ ಅವನು ಸಂತೋಷವಾಗಿ ಇರಬಾರದು. ಅದಕ್ಕೆ ನೀನು ಸಹಾಯ ಮಾಡಬೇಕು” ಎಂದು ಹೇಳಿದನು. ಅದಕ್ಕೆ ದ್ವಾಪರನೂ ಒಪ್ಪಿದನು. ನಂತರ ಕಲಿಯು ಪುಷ್ಕರನ ಬಳಿ ಹೋಗಿ-ಅವನು ನಳನೊಂದಿಗೆ ಜೂಜು (ದ್ಯೂತ) ಆಡಬೇಕೆಂದೂ, ತಾನು ಅವನಿಗೆ ಜಯ ಲಭಿಸುವಂತೆ ಮಾಡುವುದಾಗಿಯೂ, ನಳನ ರಾಜ್ಯವನ್ನು ಕಸಿದುಕೊಂಡು ಪುಷ್ಕರನಿಗೆ ಕೊಡುವುದಾಗಿಯೂ ಹೇಳಿದನು. ಕಲಿಯು ನಳನ ಒಳಗೆ ಪ್ರವೇಶ ಮಾಡಿದನು. ಪುಷ್ಕರನು ನಳನನ್ನು ಜೂಜಾಡುವಂತೆ ಮತ್ತೆ ಮತ್ತೆ ಬಲವಂತ ಮಾಡಿದನು. ನಳನೂ ಇದಕ್ಕೆ ಒಪ್ಪಿಕೊಂಡು ಯಾರು ಹೇಳಿದರೂ ಕೇಳದೇ ಜೂಜಿನಲ್ಲಿ ರಾಜ್ಯ, ಆಭರಣ ಮುಂತಾದ ಎಲ್ಲ ಸ್ವತ್ತನ್ನೂ ಕಳೆದುಕೊಂಡನು. ಎಲ್ಲವನ್ನೂ ಕಳೆದುಕೊಂಡ ನಳನಿಗೆ ಯಾರೂ ಸಹಾಯ ಮಾಡಬಾರದೆಂದು ಪುಷ್ಕರನು ಆಜ್ಞೆ ಮಾಡಿದನು. ನಳನು ದಮಯಂತಿಯೊಡನೆ ಕಾಡಿಗೆ ಹೋದನು. ಅವನ ಮಕ್ಕಳು ಅಜ್ಜ ಭೀಮನಲ್ಲಿಗೆ ಹೋದರು. ಒಂದು ದಿನ ನಳನು ದಮಯಂತಿಯನ್ನು ಒಂಟಿಯಾಗಿ ಕಾಡಿನಲ್ಲಿ ಬಿಟ್ಟು ಹೊರಟು ಹೋದನು. ದಮಯಂತಿ ಹಲವು ಕಷ್ಟಗಳನ್ನು ಅನುಭವಿಸಿದಳು. ಮೂರು ದಿವಸಗಳ ನಂತರ ಚೇದಿ ದೇಶದ ಅರಮನೆಯನ್ನು ಸೇರಿ ಅಲ್ಲಿಯ ರಾಜನ ತಾಯಿಯ ಆಶ್ರಯದಲ್ಲಿ ಇದ್ದಳು. ದಮಯಂತಿಯನ್ನು ಅಗಲಿದ ನಳನು ಕಾಡಿನಲ್ಲಿ ಭಯಂಕರವಾದ ಬೆಂಕಿ ಉರಿಯುತ್ತಿರುವುದನ್ನು ಕಂಡನು. ಜ್ವಾಲೆಯ ಮಧ್ಯದಲ್ಲಿ ಇನ್ನೂ ಜೀವವಿರುವ ಯಾವುದೋ ಒಂದು “ಇಲ್ಲಿಗೆ ಬಾ! ಬಾ!” ಎಂದು ಧ್ವನಿ ಕೂಗಿತು. ನಳನು ಅಲ್ಲಿಗೆ ಹೋಗಿ ನೋಡಿದಾಗ ಬೆಂಕಿಯಲ್ಲಿ ಕಾರ್ಕೋಟಕನೆಂಬ ಸರ್ಪಗಳ ರಾಜನನ್ನು ಕಂಡನು. “ನಾರದರ ಶಾಪದಿಂದ ನನಗೆ ಈ ಸ್ಥಿತಿ ಒದಗಿತು. ನೀನು ನನ್ನನ್ನು ಕಾಪಾಡಿದರೆ ನಾನು ನಿನಗೆ ಒಳಿತನ್ನು ಮಡುವೆ” ಎಂದು ಕಾರ್ಕೋಟಕವು ಹೇಳಿತು. ನಳನು ಅದನ್ನು ಕಾಪಾಡಿದನು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸರ್ಪರಾಜನು ನಳನನ್ನು ಕಚ್ಚಿ ತನ್ನ ನಿಜರೂಪವನ್ನು ತಾಳಿದನು.

ಸರ್ಪರಾಜನು ಕಚ್ಚಿದೊಡನೆ ನಳನು ವಿಕಾರವಾದ ರೂಪವನ್ನು ತಾಳಿದನು. ಆಗ ಸರ್ಪರಾಜನು “ಭಯಪಡಬೇಡ! ಇನ್ನು ನಿನಗೆ ಒಳ್ಳೆಯದೇ ಆಗುತ್ತದೆ, ಈಗಲೇ ಅಯೋಧ್ಯೆಯ ರಾಜನ ಬಳಿಗೆ ಹೋಗಿ ನಿನ್ನ ಹೆಸರು ಬಾಹುಕನೆಂದು ಹೇಳಿಕೊಂಡು ಸಾರಥಿಯಾಗಿ ಕೆಲಸಕ್ಕೆ ಸೇರು. ನಿನಗೆ ಒಳ್ಳೆಯದಾಗುತ್ತದೆ. ನಾನು ಈಗ ಕೊಡುವ ವಸ್ತ್ರವನ್ನು ಧರಿಸು. ಆಗ ನಿನ್ನ ಹಳೆಯ ಸ್ವರೂಪವು ಮರಳಿ ಬರುವುದು” ಎಂದು ಹೇಳಿ ವಸ್ತ್ರವನ್ನು ಕೊಟ್ಟು ಸರ್ಪವು ಮರೆಯಾಯಿತು. ಸರ್ಪವು ಹೇಳಿದಂತೆಯೇ ನಳನು ಅಯೋಧ್ಯೆಗೆ ಹೋದನು. ತಾನು ಅಶ್ವಗಳನ್ನು ಪರೀಕ್ಷಿಸುವುದರಲ್ಲಿಯೂ, ರಥವನ್ನು ಓಡಿಸುವುದರಲ್ಲಿಯೂ,, ಪಾಕಶಾಸ್ತ್ರದಲ್ಲಿಯೂ ನಿಪುಣನೆಂದು ಹೇಳಿ ಕೆಲಸಕ್ಕೆ ಸೇರಿದನು. ನಳನನ್ನೂ ದಮಯಂತಿಯನ್ನೂ ಕಾಣದ ಭೀಮನು ಅವರನ್ನು ಎಲ್ಲ ಕಡೆಯೂ ಹುಡುಕಿಸಿದನು. ದಮಯಂತಿಯು ಚೇದಿ ದೇಶದಲ್ಲಿ ಇರುವುದನ್ನು ಅರಿತು ಅವಳನ್ನು ಕರೆದುಕೊಂಡು ಬಂದನು. ನಳನನ್ನು ಹುಡುಕಲು ಏರ್ಪಾಡು ಮಾಡಿದನು. ಹುಡುಕಿಕೊಂಡು ಹೋದವರಲ್ಲಿ ಒಬ್ಬನು ಹಿಂದಿರುಗಿ ಬಂದು ಅಯೋಧ್ಯೆಯ ರಾಜನ ಸಾರಥಿಯಾಗಿ ಇರುವ ಕುರೂಪಿಯಾಗಿರುವ ಒಬ್ಬನ ಚಲನವಲನಗಳು ನಳನನ್ನು ಹೋಲುತ್ತದೆ. ಅವನು ತಾನು ಬಾಹುಕನೆಂದು ಹೇಳಿಕೊಳ್ಳುತ್ತಾನೆ ಎಂದು ಆ ಬೇಹುಗಾರನು ತಿಳಿಸಿದರು.

ಬಾಹುಕನೇ ನಳನಿರಬಹುದು ಎಂದು ಊಹಿಸಿದ ಭೀಮನು ಅವನನ್ನು ಕಂಡು ಹಿಡಿಯಲು ಒಂದು ತಂತ್ರವನ್ನು ಹೂಡಿದನು. ಅದರಂತೆ ದಮಯಂತಿಗೆ ಎರಡನೆಯ ಸ್ವಯಂವರ ಎಂದು ಸಾರಿದನು. ಸಮಾಚಾರವನ್ನು ತಿಳಿದ ಅಯೋಧ್ಯೆಯ ರಾಜನು ಬಾಹುಕನಿಗೆ ವಿಷಯವನ್ನು ತಿಳಿಸಿ ರಥವನ್ನು ನಡೆಸಲು ಹೇಳಿದನು. ಇದನ್ನು ಕೇಳಿದ ಬಾಹುಕನು ಆಶ್ಚರ್ಯಗೊಂಡನು. ರಥದ ಸಾರಥ್ಯವನ್ನು ವಹಿಸಲು ಸಮ್ಮತಿಸಿದನು. ರಥವನ್ನು ನಡೆಸುವಾಗ ಬಾಹುಕ ವೇಷದಲ್ಲಿರುವ ನಳನು ಅಯೋಧ್ಯೆಯ ರಾಜನಿಂದ ದ್ಯೂತದ ಕಲೆಯನ್ನು ಕಲಿತನು. ಜೂಜಾಟವನ್ನು ಕಲಿತ ತಕ್ಷಣ ಕಲಿಯು ನಳನ ಶರೀರವನ್ನು ಬಿಟ್ಟು ಹೊರಟು ಹೋದನು. ನಳನು ಕಲಿಯ ಕಾಟದಿಂದ ಮುಕ್ತನಾದನು. ಅಯೋಧ್ಯಾಧಿಪತಿ ಋತುಪರ್ಣನು ವಿದರ್ಭಕ್ಕೆ ಬಂದಾಗ ಭೀಮನು ಅವನನ್ನು ಸ್ವಾಗತಿಸಿದನು. ಅಲ್ಲಿ ಸ್ವಯಂವರ ನಡೆಯುವ ಸೂಚನೆಗಳೇ ಇಲ್ಲದ್ದನ್ನು ಕಂಡು ಋತುಪರ್ಣನು ಆಶ್ಚರ್ಯಭರಿತನಾದನು. “ಬಾಹುಕನ ವೇಷದಲ್ಲಿ ಬಂದಿರುವುದು ನಳ ಎಂದು ನಾನು ಸಂದೇಹ ಪಡುವುದರಿಂದ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ತಿಳಿದು ಬಾ” ಎಂದು ದಮಯಂತಿಯು ತನ್ನ ಸಖಿಯನ್ನು ಕಳುಹಿಸಿದಳು. ಸಖಿಯು ಅಲ್ಲಿಗೆ ಹೋಗಿ ಬಾಹುಕನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದಳು.

ನಳನು ತನ್ನ ಮಕ್ಕಳನ್ನು ನೋಡಿ ಬಹಳ ಸಂತೋಷಗೊಂಡನು. ಸಖಿಯು ಅವನ ಭಾವನೆ, ವರ್ತನೆಯನ್ನು ತಿಳಿದುಕೊಂಡಳು. ಅಲ್ಲಿ ನಡೆದದ್ದನ್ನು ದಮಯಂತಿಗೆ ವಿವರಿಸಿದಳು. ಹೆತ್ತವರ ಅನುಮತಿಯನ್ನು ಪಡೆದು ದಮಯಂತಿಯು ಬಾಹುಕನೆಂಬ ನಳನನ್ನು ಆ ಪಟ್ಟಣಕ್ಕೆ ಬರಮಾಡಿಕೊಂಡಳು. ತನ್ನ ಸ್ಥಿತಿಯನ್ನೂ, ನಡುರಾತ್ರಿಯಲ್ಲಿ ತನ್ನ ಪತಿ ಕಾಡಿನಲ್ಲಿ ಬಿಟ್ಟು ಹೋದ ಘಟನೆಗಳನ್ನೂ ಅವನಲ್ಲಿ ವಿವರಿಸಿ ಕಣ್ಣೀರಿಟ್ಟಳು. ನಳನೂ ಕಣ್ಣೀರಿಟ್ಟನು. ತಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದೂ ಎಲ್ಲವೂ ಕಲಿಯ ಪ್ರಭಾವವೆಂದೂ ತಿಳಿಸಿದನು. “ನಾಥ! ತಮ್ಮನ್ನು ಕಂಡು ಹಿಡಿಯುವುದಕ್ಕಾಗಿಯೇ ಎರಡನೆಯ ಸ್ವಯಂವರ ಎಂದು ಘೋಷಿಸಿದೆವು. ನಾನು ಯಾವ ಪಾಪವನ್ನೂ ಮಾಡಿಲ್ಲ” ಎಂದು ದಮಯಂತಿ ವಿವರಿಸಿದಳು. ಅವಳು ಹಾಗೆ ಹೇಳುವಾಗ ಆಕಾಶದಿಂದ ವಾಯುದೇವನು ದಮಯಂತಿಯನ್ನು ಕೊಂಡಾಡಿದನು. ಅದೇ ಸಮಯದಲ್ಲಿ ಆಕಾಶದಿಂದ ಹೂಮಳೆ ಸುರಿಯಿತು. ತದನಂತರ ನಳನು ಹಿಂದೆ ಸರ್ಪರಾಜನಾದ ಕಾರ್ಕೋಟಕನು ಕೊಟ್ಟ ವಸ್ತ್ರವನ್ನು ಧರಿಸಿ ಸರ್ಪರಾಜನನ್ನು ನಮಸ್ಕರಿಸಿದನು. ಆಗ ಅವನು ತನ್ನ ಹಳೆಯ ಸುಂದರ ರೂಪವನ್ನು ಪಡೆದನು.

ಋತುಪರ್ಣನು ಇವರನ್ನು ಆಶೀರ್ವದಿಸಿದ. ಕೆಲ ಕಾಲ ವಿದರ್ಭದಲ್ಲಿಯೇ ಇದ್ದು, ನಳನು ಕೆಲವು ಸೈನಿಕರೊಡನೆ ನಿಷಧ ದೇಶಕ್ಕೆ ಹೋದನು. ಅಲ್ಲಿ ನಳನೂ ಪುಷ್ಕರನೂ ಜೂಜಾಡಿದರು. ಮೊದಲ ಆಟದಲ್ಲಿಯೇ ಪುಷ್ಕರನು ಸೋತು ಹೋದನು. ಆಗ ನಳನು “ಪುಷ್ಕರ! ಹಿಂದೆ ಜೂಜಾಟದಲ್ಲಿ ನನ್ನನ್ನು ಸೋಲಿಸಿದ್ದು ನೀನಲ್ಲ ಕಲಿ. ನನ್ನ ರಾಜ್ಯದ ಒಂದು ಭಾಗವನ್ನು ನಿನಗೆ ಕೊಡುವೆ. ನನಗೆ ಯಾವಾಗಲೂ ನಿನ್ನ ಮೇಲೆ ಪ್ರೀತಿ ಇದೆ. ನೀನು ನನ್ನ ಸಹೋದರ” ಎಂದು ಹೇಳಿದನು. ನಂತರ ದಮಯಂತಿ, ಮಕ್ಕಳೊಡನೆ ನಳನು ಬಹಳ ವೈಭವದಿಂದ ರಾಜ್ಯವಾಳಿದನು. ಪತಿ ಭಕ್ತಿಯೇ ದಮಯಂತಿಯನ್ನು ಕಾಪಾಡಿತು. ಧರ್ಮವೇ ನಳನನ್ನು ರಕ್ಷಿಸಿತು. ಒಬ್ಬನ ಮನಸ್ಥೈರ್ಯ, ಸಹನೆಯನ್ನು ಪರೀಕ್ಷಿಸುವುದಕ್ಕಾಗಿಯೇ ಶೋಧನೆಗಳು ಬರುತ್ತವೆ. ಅವುಗಳು ಎದುರಿಸಿ ಧೈರ್ಯದಿಂದ ಮುಂದೆ ನಡೆಯಿರಿ” ಎಂದು ಹೇಳಿ ಬೃಹದೇಶ್ವರರು ಧರ್ಮರಾಯನನ್ನು ಸಮಾಧಾನಪಡಿಸಿದರು.