ಭಾಗವತ ಕಥೆಗಳು

ಹರಿಭಕ್ತ ಪ್ರಹ್ಲಾದ ವಿಜಯ ವಿಜಯರು ವಿಷ್ಣುವಿನ ದ್ವಾರಪಾಲಕರು. ಒಂದು ಸಾರಿ ಸನಕಾದಿ ಋಷಿಗಳು ವಿಷ್ಣುವಿನ ದರ್ಶನಕ್ಕೆ ಬಂದರು. ಅವರು ಬ್ರಹ್ಮಮಾನಸಪುತ್ರರು. ಅವರು ವಿಧಿ ನಿಯಮಗಳನ್ನು ದಾಟಿದವರು. ವಿಷ್ಣುವಿನ ದ್ವಾರದಲ್ಲಿದ್ದ ಜಯವಿಜಯರು ವಿಷ್ಣುದರ್ಶನಕ್ಕೆ ಬಿಡಲಿಲ್ಲ. ಮಹಾದ್ವಾರದಲ್ಲಿಯೇ ತಡೆದರು. ಆಗ ಸನಕಾದಿಗಳು ಅವರಿಗೆ ನಿಮಗೆ ಯಾರನ್ನು ಬಿಡಬೇಕು, ಯಾರನ್ನು ಬಿಡಬಾರದೆಂಬ ನಿಯಮ ಗೊತ್ತಿಲ್ಲ. ಇದೆಲ್ಲ ಅಹಂಕಾರದ ದ್ಯೋತಕ. ಅಹಂಕಾರಿಯಾದ ಮನುಷ್ಯನಿಗೆ ಧರ್ಮ-ಅಧರ್ಮಗಳು, ಕರ್ತವ್ಯ-ಅಕರ್ತವ್ಯಗಳು, ಪಾಪ-ಪುಣ್ಯಗಳು, ನಯ-ವಿನಯಗಳು ಇರುವುದಿಲ್ಲ. ಆಗ ಸನಕಾದಿಗಳು ದ್ವಾರಪಾಲಕರಾದ ಜಯವಿಜಯರಿಗೆ ನೀವು ವಿಷ್ಣುವಿನ ದ್ವಾರಪಾಲಕರಾದರೂ ನಿಮಗೆ ಯಾರನ್ನು ಬಿಡಬೇಕು ಯಾರನ್ನು ಬಿಡಬಾರದೆಂಬ ತಿಳುವಳಿಕೆಯಿಲ್ಲ. ಇದೆಲ್ಲ ಅಹಂಕಾರದ ಪ್ರಭಾವ. ನೀವು ‘ರಾಕ್ಷಸರಾಗಿರಿ’ ಎಂದು ಸನಕಾದಿಗಳು ಅವರಿಗೆ ಶಾಪಕೊಟ್ಟರು. ಆಗ ಅವರು ಮೊದಲು ಹಿರಣ್ಯಾಕ್ಷ, ಹಿರಣ್ಯಕಶಿಪರೆಂದು ಲೋಕಕಂಠಕರಾಗಿ ಜನ್ಮ ತಾಳಿದರು. ಇಬ್ಬರೂ ಲೋಕಕಂಠಕರಾಗಿ ಸಾತ್ವಿಕರಿಗೆ ದೇವತೆಗಳಿಗೆ ತೊಂದರೆ ಕೊಡುತ್ತಾ ಬಂದರು. ಇವರ ಕ್ರೂರ ಸ್ವಭಾವವು ದೇವತೆಗಳನ್ನೇ ಹೆದರುವಂತೆ ಮಾಡಿತು. ಭಗವಂತನಾದ ವಿಷ್ಣುವಿನ ಮೊರೆ ಹೊಕ್ಕರು.

ವಿಷ್ಣು ಕೂರ್ಮವತಾರ ತಾಳಿ, ಪಾತಾಳ ಲೋಕದಲ್ಲಿ ಹುದುಗಿಸಿಟ್ಟಿದ್ದ ಭೂದೇವಿಯನ್ನು ಮತ್ತೆ ಅದರ ಸ್ವಸ್ಥಾನಕ್ಕೆ ಸೇರಿಸಿ, ಲೋಕಕಂಠಕನಾಗಿದ್ದ ಹಿರಣ್ಯಾಕ್ಷನನ್ನು ಮುಗಿಸಿದ. ಸಹೋದರನಾದ ಹಿರಣ್ಯಕಶಪು ಭಗವಂತನನ್ನು ಕುರಿತು ತಪಸ್ಸು ಮಾಡಿ “ನನಗೆ ಸಾವು ಇಲ್ಲವೇ ಇಲ್ಲ. ರಾತ್ರಿಯಲ್ಲಿಯೂ ಇಲ್ಲ, ಹಗಲು ಇಲ್ಲ, ಯಾವ ಆಯುಧದಿಂದಲೂ ಇಲ್ಲ, ಮತ್ತು ಮನುಷ್ಯ, ಗಂಧರ್ವ, ಯಕ್ಷ, ರಾಕ್ಷಸರು, ದೇವತೆಗಳು, ವಿಷ್ಣು, ಮಹೇಶ್ವರ ಯಾರಿಂದಲೂ ಸಾವಿಲ್ಲ.’ ಇಂತಹ ವರ ಪಡೆದಿದ್ದಾನೆ. ದೇವತೆಗಳನ್ನು ದೇವಲೋಕದಿಂದ ಓಡಿಸಿದ. ಅವನ ಉಪಟಳ ಯಾರೂ ತಡೆಯುವಂತಿಲ್ಲ. ಅವನ ಹೆಂಡತಿ ಕಯಾಲುದೇವಿ. ಸಾತ್ವಿಕ ಸ್ವಭಾವದವಳು. ಒಂದು ಸಾರಿ ಹಿರಣ್ಯಕಶಿಪು ತಪಸ್ಸಿಗಾಗಿ ಅರಣ್ಯಕ್ಕೆ ಹೋದ. ದೇವತೆಗಳಿಗೆ ಬಹಳ ಭಯವಾಯಿತು. ಈಗಲೇ ಇವನ ಉಪಟಳ ತಡೆಯುವಂತಿಲ್ಲ. ಇನ್ನು ತಪಸ್ಸು ಮಾಡಿ ಹೆಚ್ಚಿನ ಶಕ್ತಿ ಗಳಿಸಿದರೆ ನಾವು ಇರುವಂತಿಲ್ಲ. ಆದ್ದರಿಂದ ದೇವತೆಗಳು ಉಪಾಯ ಮಾಡಿದರು. ಅವನು ಯಾವ ಮರದ ಕೆಳಗೆ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ ಆ ಮರದ ಮೇಲೆ ಬೃಹಸ್ಪತಿಯು ಯಾವ ಆಕಾರವನ್ನು ಧಾರಣೆ ಮಾಡದೆ ‘ನಾರಾಯಣ ನಾರಾಯಣ’ ಎನ್ನಬೇಕು. ಈ ವ್ಯವಸ್ಥೆಯಾಯಿತು.

ಹಿರಣ್ಯಕಶಿಪು ತನ್ನ ಹೆಂಡತಿಗೆ ತಪಸ್ಸಿಗೆ ಹೋಗಿ ದೇವತೆಗಳನ್ನು ಎಲ್ಲರನ್ನೂ ನಿರ್ಮೂಲ ಮಾಡಿ, ಎಲ್ಲೆಲ್ಲೂ ನಾನೇ ಇರಬೇಕು. ಅಂತಹ ವರ ಪಡೆದು ಬರುತ್ತೇನೆಂದು ಹೆಂಡತಿ ಕಯಾಲು ದೇವಿಗೆ ಹೇಳಿ ಹೋಗಿದ್ದಾನೆ. ಒಂದು ಮರದ ಕೆಳಗೆ ಕುಳಿತು ತಪಸ್ಸಿಗೆ ಕುಳಿತ ಕೂಡಲೆ ಆ ಮರದ ಮೇಲಿನ ಬೃಹಸ್ಪತಿಯು “ನಾರಾಯಣ ನಾರಾಯಣ” ಎಂದಿತು. ಈ ಸ್ಥಳ ಸರಿಯಿಲ್ಲವೆಂದು ಮತ್ತೊಂದು ಮರದ ಕೆಳಗೆ ಕುಳಿತ. ಅಲ್ಲಿಯೂ “ನಾರಾಯಣ ನಾರಾಯಣ”. ಇವನಿಗೆ ಕೇಳಲು ಆಗಲಿಲ್ಲ. ಹೀಗೆ ಎಲ್ಲೆಲ್ಲಿ ಹೋದರೂ ಎಲ್ಲಿ ಕುಳಿತರೂ “ನಾರಾಯಣ ನಾರಾಯಣ” ತಪಸ್ಸು ಸಿದ್ದಿ ಆಗಲಿಲ್ಲ. ಮನೆಗೆ ಹಿಂದಿರುಗಿದ.

ಕಯಾಲು ದೇವಿಯು ‘ಸ್ವಾಮಿ, ತಪಸ್ಸಿಗೆ ಹೋದವರು ಏಕೆ ಮರಳಿ ಬಂದಿರಿ?’ ಎಂದಳು. ‘ಏನು ಹೇಳುವುದು ಕಯಾಲು. ಯಾವ ಸ್ಥಳದಲ್ಲಿ ತಪಸ್ಸಿಗೆ ಕುಳಿತರೂ “ನಾರಾಯಣ ನಾರಾಯಣ” ಎಂಬ ಕೆಟ್ಟ ಹೆಸರು ಕೇಳಿ ಬಂತು. ಎಲ್ಲಿ ಕುಳಿತರೂ ನನ್ನ ವೈರಿ ನಾಮವೇ. ಕೇಳಲಾರದೆ ವಾಪಾಸು ಬಂದೆ’ ಎಂದ. ಕಯಾಲು ದೇವಿಗೆ ಅದೆಷ್ಟು ಸಂತೋಷ!! ಅದು ಹೇಳಲು ಬರುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು “ನಾರಾಯಣ ನಾರಾಯಣ” ಎಂದು ವೈರಿ ನಾಮ ಕೂಗಿತು.’ ಸರಿ ಆದಾಗ್ಯೂ ಬಂದು ಬಹಳ ಸಂತೋಷದಿಂದ ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಕೇಳಬೇಡ. ಆ ಕೆಟ್ಟ ಹೆಸರನ್ನು ನನ್ನ ಬಾಯಿಂದ ಹೇಳಿಸಬೇಡ’ ಎಂದನು. ಆದರೂ ಕಯಾಲು ಸಂತೋಷಪಟ್ಟು ‘ಸ್ವಾಮಿ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ಪದೇ ಪದೇ ಆ ಕೆಟ್ಟ ಹೆಸರು ಕೇಳಬೇಡ. ನನ್ನ ಬಾಯಿಂದ ಆ ದುಷ್ಟ ಹೆಸರು ಹೇಳಬಾರದು’ ಎಂದು ಆಜ್ಞೆ ಮಾಡಿದ. ರಾತ್ರಿ ಊಟ ಮಾಡುವಾಗ ಸೌಜನ್ಯದಿಂದ ‘ಸ್ವಾಮಿ, ಮರತೇಬಿಟ್ಟೆ, ಆ ಪಕ್ಷಿ ಏನೆಂದು ಕೂಗಿತು?’ ‘ಕಯಾಲು ನನ್ನ ಬಾಯಿಂದ ಆ ದುಷ್ಟ ನೀಚ ಹೆಸರನ್ನು ಪದೇ ಪದೇ ಹೇಳಿಸಬೇಡ. ಅದು “ನಾರಾಯಣ ನಾರಾಯಣ” ಎಂದಿತು’ ಎಂದ. ಹೀಗೆ ಮಾಡಿ ಕಯಾಲು ದೇವಿಯು ಬಹಳ ಬುದ್ಧಿವಂತಿಕೆಯಿಂದ ಉಪಚಾರ ಮಾಡುತ್ತಾ ‘ಸ್ವಾಮಿ ಆ ಪಕ್ಷಿ ಏನೆಂದಿತು. ನಾನು ಮರೆತೇ.’ ‘ಕಯಾಲು “ನಾರಾಯಣ ನಾರಾಯಣ” ಎಂದಿತು.’ ಹಾಗೆ ಹೀಗೆ ಮಾಡಿ ಬುದ್ಧಿವಂತಳಾದ ದೈವಿ ಸಂಪತ್ತಿನ ಆ ಕಯಾಲು ಮಲಗುವುದರೊಳಗಾಗಿ 108 ಸಾರಿ ನಾರಾಯಣ ನಾಮವನ್ನು ಆ ರಾಕ್ಷಸನ ಬಾಯಿಂದ ಹೇಳಿಸಿದಳು. ಆ ದಿನವೇ ಗರ್ಭ ಧರಿಸಿದಳು.

ಪುನಃ ಹಿರಣ್ಯಕಶಿಪನು ತಪಸ್ಸಿಗೆ ಹೊರಟು ಹೋದನು. ಅದೇ ಸಂದರ್ಭವನ್ನು ಉಪಯೋಗ ಮಾಡಿಕೊಂಡ ಇಂದ್ರನು ಆ ಮಹಾತಾಯಿ ಕಯಾಲು ದೇವಿಯನ್ನು ದೇವಲೋಕಕ್ಕೆ ಕರೆದುಕೊಂಡು ಹೋದನು. ದೇವತೆಗಳೆಲ್ಲಾ ಹೆದರಿ ಮೊದಲು ಆ ಮಹಾತಾಯಿಯನ್ನು ಹಿಂದಕ್ಕೆ ಬಿಟ್ಟು ಬರಲು ಒತ್ತಾಯಿಸಿದರು. ಇಂದ್ರನು ಹೆದರಿದನು. ಆಗ ದಾರಿಯಲ್ಲಿ ನಾರದರು ಅನೇಕ ದಿವ್ಯವಾದ ಕತೆಗಳನ್ನು ಹೇಳುತ್ತಾ “ನಾರಾಯಣ ನಾರಾಯಣ” ನಾಮವನ್ನು ಹೇಳುತ್ತಾ ಇರುವಾಗ ಆಕೆಗೆ ರಥದಲ್ಲಿ ನಿದ್ದೆ ಬಂತು. ಆಗ ಗರ್ಭದಲ್ಲಿರುವ ಆ ಮಗು “ನಾರಾಯಣ ನಾರಾಯಣ” ಎನ್ನುತ್ತಿದೆ. ನಾರದರಿಗೆ ಆಶ್ಚರ್ಯವಾಯಿತು. ರಥದಲ್ಲಿ ಹೋಗಿ ಅವರ ಅರಮನೆಗೆ ಸುಖವಾಗಿ ಬಿಟ್ಟು ಬಂದರು. ಆ ಗರ್ಭದಿಂದ ಹೊರ ಬಂದ ಮಗುವೆ “ಪ್ರಹ್ಲಾದ”. ಪ್ರಕರ್ಷಣೀಯ ಆಹ್ಲಾದ ಪ್ರಹ್ಲಾದ. ರಾಕ್ಷಸ ಪುತ್ರನಾದರೂ ದೇವತೆಗಳಿಗೆ ದೇವತೆ ಆದ. ಅದು ಕಯಾಲು ದೇವಿಯ ತಪಸ್ಸು. ದೇವತೆಗಳ ಯುಕ್ತಿ-ಪ್ರಯುಕ್ತಿ. ನಾವು ಸಹ ನಮ್ಮ ಮಕ್ಕಳನ್ನು ಹೀಗೆ ಪಡೆಯಬೇಕು. ಮಕ್ಕಳು ದೈವಿ ಸಂಪತ್ತರಾಗುವ ಅವಕಾಶವನ್ನು ಆಗಲು ಅನೇಕ ಜನ ಪುಣ್ಯವಂತ ಸ್ತ್ರೀಯರು ತಮ್ಮ ಮಕ್ಕಳಿಗೆ ದೈವಿ ಸಂಪತ್ತು ಉಂಟು ಮಾಡುತ್ತಾರೆ. ಆದ್ದರಿಂದ ನಮ್ಮ ಭಾರತ ದೇಶದಲ್ಲಿ ಏಕನಾಥ ಸ್ವಾಮಿಗಳು, ಸಮರ್ಥ ರಾಮದಾಸರು, ಮೀರಾಬಾಯಿ, ಜ್ಞಾನದೇವ ಇಂತಹ ಸಹಸ್ರಾರು ಜನಗಳು ಭಾರತ ಭೂಮಿಗೆ ತಮ್ಮ ತಪಸ್ಸನ್ನು ಧಾರೆ ಎರೆದು ಹೋಗಿದ್ದಾರೆ.

ಈಗ ಪ್ರಹ್ಲಾದ, ರಾಕ್ಷಸನ ಮಗ. ಆದರೆ ಅವನ ಆಚರಣೆ ದೈವಿ ಆಚರಣೆ. ರಾಕ್ಷಸನಾದ ತಂದೆ ಮಗನನ್ನು ರಾಕ್ಷಸನನ್ನಾಗಿ ಮಾಡಲು ಹಾಗೂ ನಾರಾಯಣ ನಾಮಸ್ಮರಣೆಯಿಂದ ವಿಮುಖನಾಗಲು ಆನೆಯಿಂದ ತುಳಿಸಿದ. ಪರ್ವತದ ಮೇಲಿಂದ ಎತ್ತಿ ಹಾಕಿದ. ನಾರಾಯಣ ರಕ್ಷಣೆ ಇರುವಾಗ ಪ್ರಹ್ಲಾದನಿಗೆ ಏನು ಆಗಲಿಲ್ಲ. ಬೆಂಕಿಯು ಇವನನ್ನು ಸುಡಲಿಲ್ಲ, ನೀರು ಇವನನ್ನು ಕೊಲ್ಲಲಿಲ್ಲ. ಇದೆಲ್ಲಾ ಭಗವತ್ಪ್ರಸಾದ. ‘ಎಲ್ಲಿದ್ದಾನೋ ನಿನ್ನ ದೇವರು?’ ಎಂದ ತಂದೆ. ನೋಡುವವರ ಕಣ್ಣು ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲಿ ಇದ್ದಾನೆ. ಅರಮನೆ ಕಂಬ ತೋರಿಸಿ ‘ನಿನ್ನ ದೇವರು ಇದರಲ್ಲಿ ಇದ್ದಾನೆಯೇ’ ಅಂದ. ‘ಹೌದು ಇದ್ದಾನೆ.’ ತನ್ನ ಖಡ್ಗದಿಂದ ಅರಮನೆ ಕಂಬಕ್ಕೆ ಹೊಡೆದ. ಅಲ್ಲಿಂದಲೇ ಭಕ್ತರಕ್ಷಕ ಹೊರಗೆ ಬಂದ. ಹೇಗೆ ಬಂದ? ಮುಖ ಸಿಂಹ, ದೇಹ ಮನುಷ್ಯ. ಹಿರಣ್ಯಕಶಿಪನನ್ನು ಅರಮನೆ ಬಾಗಿಲಿಗೆ ಎಳೆದೊಯ್ದ ನರಸಿಂಹ. ನಾನು ಯಾರು, ಮನುಷ್ಯನೇ ಅಥವಾ ಪ್ರಾಣಿಯೇ ಗೊತ್ತಿಲ್ಲ. ಇದು ಒಳಗೋ ಹೊರಗೋ, ಒಳಗಲ್ಲ, ಹೊರಗಲ್ಲ, ಹಗಲೋ ರಾತ್ರಿಯೋ ಇದು ಹಗಲೂ ಅಲ್ಲ ರಾತ್ರಿಯೂ ಅಲ್ಲ, ಉಗುರನ್ನು ತೋರಿಸಿ ಇವು ಯಾವ ಆಯುಧ? ಯಾವ ಆಯುಧವೂ ಅಲ್ಲ. ಉಗುರಿನಿಂದಲೇ ಹಿರಣ್ಯಕಶಿಪನನ್ನು ಸೀಳಿದ. ಲೋಕಕಂಟಕ ನರಸಿಂಹ ಜಗತ್ತನ್ನು ರಕ್ಷಣೆ ಮಾಡಿದ. ಆ ನಾರಸಿಂಹನಿಗೆ ಅನೇಕ ನಮಸ್ಕಾರಗಳು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ |
ಅಭ್ಯುತ್ಥಾನ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||4||7||
ಯಾವ ಯಾವಾಗ ಧರ್ಮವು ಗ್ಲಾನಿಯಾಗಿ ಅಧರ್ಮವು ವೃದ್ಧಿ ಆಗುತ್ತದೆಯೋ ಆಗ ಭಗವಂತನು ತನ್ನನ್ನು ತಾನೆಯೇ ಸೃಷ್ಟಿಸಿಕೊಂಡು ಅವತರಿಸುತ್ತಾನೆ.
ಹಾಗೆ ಪರಮಾತ್ಮನು ಅವತಾರ ಮಾಡಿಕೊಂಡು ಬಂದು ಸತ್ಯವಂತರಾದ ಸಾಧುಗಳ ರಕ್ಷಣೆ ಮಾಡುತ್ತಾನೆ. ದುಷ್ಕøತ್ಯಗಳನ್ನು ವಿನಾಶ ಮಾಡುತ್ತಾನೆಂದು ಭಗವದ್ಗೀತೆಯ ಪ್ರಮಾಣವಿದೆ. ಭಕ್ತರಕ್ಷಕ ಭಗವಂತನಿಗೆ ಅನೇಕ ನಮಸ್ಕಾರಗಳು