ಉಪನಿಷತ್ತಿನ ಕಥೆಗಳು

ಬ್ರಹ್ಮಜ್ಞಾನಿ ಜನಕಮಹಾರಾಜ ಬ್ರಹ್ಮಜ್ಞಾನದಲ್ಲಿ ಯಾಜ್ಞವಲ್ಕ್ಯರು ಎಲ್ಲಾ ಋಷಿ-ಮುನಿಗಳನ್ನೂ ಮೀರಿಸಿದ್ದರು. ಎಲ್ಲರೂ ಇವರನ್ನು ಈ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು.
ಜನಕ ಮಹಾರಾಜ ಮಿಥಿಲಾಪುರವನ್ನು ಆಳುತ್ತಿದ್ದ ಅರಸ, ಅರಸನಾದರೂ ರಾಜ್ಯಾಡಳಿತದ ಬಗ್ಗೆ ಮರೆಯದೆ, ಪಾರಮಾರ್ಥಿಕ ಚಿಂತನೆಯಲ್ಲಿಯೂ ಸದಾ ಮುಳುಗಿರುತ್ತಿದ್ದ. ಆದ್ದರಿಂದಲೇ ರಾಜರ್ಷಿ ಎಂದು ಭಾರತಾದ್ಯಂತ ವಿಖ್ಯಾತ ಎನಿಸಿದ್ದ. ಹಲವಾರು ಮಂದಿ ಋಷಿಮುನಿಗಳು ಬ್ರಹ್ಮಜ್ಞಾನದ ರಹಸ್ಯವನ್ನು ತಿಳಿಯಲು ಇವನ ಬಳಿಗೆ ಬರುತ್ತಿದ್ದರು. ಸಾಕಷ್ಟು ಅವಧಿಯವರೆಗೆ ಇವನ ಶಿಷ್ಯರಾಗಿದ್ದು, ಬ್ರಹ್ಮಜ್ಞಾನದೊಂದಿಗೆ ಹಿಂದಿರುಗುತ್ತಿದ್ದರು.
ಬ್ರ್ಹಹ್ಮಜ್ಞಾನದಲ್ಲಿ ಉತ್ತುಂಗ ಶಿಖರವನ್ನೇರಿದ್ದ ಯಾಜ್ಞವಲ್ಕ್ಯರೂ ಸಹ ಜನಕ ಮಹಾರಾಜನನ್ನು ಗೌರವಾದರದಿಂದ ಕಾಣುತ್ತಿದ್ದರು.
ಒಂದು ಬಾರಿ ದಿನವೂ ನಿಯಮಿತ ಕಾಲದಲ್ಲಿ ಋಷಿ-ಮುನಿಗಳಿಗೆ ಬ್ರಹ್ಮಜ್ಞಾನ-ರಹಸ್ಯದ ಬಗ್ಗೆ ಉಪನ್ಯಾಸ ನೀಡತೊಡಗಿದರು. ಋಷಿ-ಪುಂಗವನ ಉಪನ್ಯಾಸವನ್ನು ಆಲಿಸಿ-ಆನಂದಿಸಲು ಅಸಂಖ್ಯಾತ ಆಸ್ತಿಕರು ನೆರೆದಿರುತ್ತಿದ್ದರು. ಋಷಿ-ಮುನಿಗಳೇ ಅಲ್ಲದೆ ವಿಪ್ರೋತ್ತಮರೂ ಶ್ರದ್ಧಾಸಕ್ತಿಯೊಂದಿಗೆ ಹಾಜರಿರುತ್ತಿದ್ದರು. ಜನಕ ಮಹಾರಾಜನೂ ತನಗೆ ವಿರಾಮವಿರದಿದ್ದರೂ, ಹೇಗಾದರೂ ಮಾಡಿ, ಯಾಜ್ಞವಲ್ಕ್ಯರ ಉಪನ್ಯಾಸಕ್ಕೆ ಹಾಜರಾಗುವುದನ್ನೂ ಅಳವಡಿಸಿಕೊಂಡಿದ್ದ ಯಾಜ್ಞವಲ್ಕ್ಯರೂ ಸಹ ಜನಕರಾಜನು ಬರಲು ವಿಳಂಬವಾದಾಗ, ಉಪನ್ಯಾಸವನ್ನು ಪ್ರಾರಂಭಿಸದೆ ಅವನು ಬರುವವರೆಗೂ ತಡೆಯುತ್ತಿದ್ದರು. ಬಂದನಂತರವೇ ಪ್ರಾರಂಭಿಸುತ್ತಿದ್ದರು.
ದಿನವೂ ಈ ಪ್ರಸಂಗವನ್ನು ಗಮನಿಸುತ್ತಿದ್ದ ಶ್ರೋತೃಗಳಿಗೆ ಯಾಜ್ಞವಲ್ಕ್ಯರ ಈ ವಿಷಯದ ಬಗ್ಗೆ ಬೇಸರವಾಯಿತು. ಜನಕರಾಜನ ಬರುವಿಕೆಗಾಗಿಯೇ ಹೀಗೆ ನಿರೀಕ್ಷಿಸುತ್ತಾ, ಕಾಲವಿಳಂಬ ಮಾಡುವುದು ಏಕೆ? ಎಂದು ಬೇಸರ ಭಾವದ ಬಗ್ಗೆ ತಮ್ಮ-ತಮ್ಮಲ್ಲಿಯೇ ಮಾತಾಡಿಕೊಳ್ಳತೊಡಗಿದರು.
ಯಾಜ್ಞವಲ್ಕ್ಯರಿಗೂ ಈ ವಿಷಯ ಗೋಚರ ಆಗದಿರಲಿಲ್ಲ. ಜನಕ ಮಹಾರಾಜನಂತಹ, ಬ್ರಹ್ಮಜ್ಞಾನದಲ್ಲಿ ಅತುಲ ಅನುಭವ ವನ್ನು ಪಡೆದಿರುವ ರಾಜರ್ಷಿಯ ಮಹಿಮೆಯನ್ನು ಇವರಲ್ಲಿ ಬಹುಮಂದಿ ಅರಿಯದಂತಹವರೇ ಆಗಿರುವರಲ್ಲಾ! ಎಂದು ವಿಷಾದಿಸಿದರು. ಜೊತೆಗೆ ಇವರಿಗೆ ಜನಕರಾಜನ ಬಗ್ಗೆ ಮೂಡಿದ್ದ ಬೇಸರ ಹಾಗೂ ತಿರಸ್ಕಾರಭಾವವನ್ನು ದೂರಮಾಡಲು ಹಾಗೆಯೇ ಯೋಚಿಸತೊಡಗಿದರು.
ಶ್ರೋತೃಗಳಿಗೆ ಈ ರೀತಿಯ ಕಾಲವಿಳಂಬ ಉಪನ್ಯಾಸದ ಪ್ರಾರಂಭದಲ್ಲಿ ಆಗುತ್ತಿರುವುದರ ಬಗ್ಗೆ ಬೇಸರ ಇನ್ನೂ ಹೆಚ್ಚಿತು. ಆದರೆ ಯಾಜ್ಞವಲ್ಕ್ಯರ ಎದುರಿಗೆ ಈ ವಿಚಾರವನ್ನು ಪ್ರಸ್ತಾಪಿಸಲು ಯಾರೊಬ್ಬರಿಗೂ ಧೈರ್ಯ ಇರಲಿಲ್ಲ.
ಆದರೆ ಯಾಜ್ಞವಲ್ಕ್ಯರಿಗಂತೂ ಶ್ರೋತೃಗಳಲ್ಲಿ ಮೂಡುತ್ತಿರುವ ಬೇಸರದ ಮನೋಭಾವ ಸ್ಪಷ್ಟವಾಗತೊಡಗಿತು. ನಿವಾರಣೆಯ ಸಮಯ-ಸಂದರ್ಭಕ್ಕಾಗಿ ನಿರೀಕ್ಷಿಸುತ್ತಿದ್ದರು. ಒಂದು ಬಾರಿ ಉಪನ್ಯಾಸ ನಡೆಯುತ್ತಿದ್ದಾಗ ಹಲವಾರು ಮಂದಿ ಮುನಿಕುಮಾರರರು ಏದುಸಿರಿನಲ್ಲಿ ಓಡೋಡುತ್ತಾ ಬಂದು ಒಂದೇ ಉಸುರಿಗೆ ಒಕ್ಕೊರಳಿನಲ್ಲಿ ಕೂಗಿ ಹೇಳಿದರು:
“ಗುರುಗಳೇ, ಕಾಡಿನಲ್ಲಿ ಕಾಡ್ಕಿಚ್ಚು ಹಬ್ಬಿದೆ. ಗಾಳಿಯೂ ಅದರ ಪ್ರಭಾವವನ್ನು ಹೆಚ್ಚಿಸುತ್ತಿದೆ. ನಮ್ಮ ಆಶ್ರಮದ ಕಡೆಯೇ ಭರದಿಂದ ಹಬ್ಬುತ್ತಿದೆ.”
ಮುನಿಕುಮಾರರ ಗಾಬರಿ ಹಾಗೂ ಭಯದ ಮುಖದಿಂದ ಬರುತ್ತಿರುವ ಮಾತುಗಳು ನೆರೆದಿದ್ದವರಲ್ಲಿ ಬಹುಮಂದಿಯನ್ನು ಗಾಬರಿಗೊಳಿಸಿತು. ಅವರಲ್ಲಿ ಪ್ರಾಣಭಯ ವೃದ್ಧಿಸತೊಡಗಿತು. ಎತ್ತೆಂದರತ್ತ ಗಾಳಿಗೆ ಸಿಕ್ಕಿದ ತರಗೆಲೆಗಳಂತೆ ಚದುರಗೊಡಗಿದರು. ಜನಕರಾಜ ಇದ್ಯಾವುದರ ಕಡೆಗೂ ಗಮನ ಹರಿಸದೆ, ಯಾಜ್ಞವಲ್ಕ್ಯರ ಬಾಯಿಂದ ಉದುರುವ ಮಾತಿನ ಮುತ್ತುಗಳಿಗಾಗಿಯೇ ವೀಕ್ಷಿಸತೊಡಗಿದ. ಅಳಿದುಳಿದವರು ಕಿವಿಯನ್ನು ಉಪನ್ಯಾಸದ ಕಡೆ, ಕಣ್ಣುಗಳನ್ನು ಕಾಡಿನ ಕಡೆ ನೀಡುತ್ತಾ ಗಾಬರಿಯ ಮುಖ ಮುದ್ರೆಯೊಂದಿಗೆ ಅತ್ತದರಿ, ಇತ್ತ ಪುಲಿ ಎಂಬಂತೆ ಬಲವಂತಸ್ನಾನ ಮಾಡುತ್ತಿರುವಂತೆ ಕುಳಿತ್ತಿದ್ದರು.
ಅಷ್ಟರಲ್ಲಿ ಮತ್ತೆ ಮುನಿಕುಮಾರರು ಬಂದು ಕೂಗಿಕೊಂಡರು:
“ಗುರುಗಳೇ, ಮಿಥಿಲಾ ಪುರದ ಕಡೆ ಕಾಡ್ಗಿಚ್ಚು ಬಿರುಸಿನಿಂದ ಸಾಗುತ್ತಿದೆ!”
ಎಲ್ಲರೂ ಈಗ ಜನಕರಾಜನ ಕಡೆ ನೋಡತೊಡಗಿದರು. ಯಾಜ್ಞವಲ್ಕ್ಯರೂ ಜನಕರಾಜನ ಕಡೆಯೇ ನೋಡುತ್ತಾ, ಉಪನ್ಯಾಸವನ್ನು ಮುಂದುವರಿಸಿದರು. ಜನಕರಾಜನು ಸ್ಥಿತಪ್ರಜ್ಞನಂತೆ ಅವರ ಕಡೆಯೇ ನೋಡುತ್ತಾ, ಉಪನ್ಯಾಸವನ್ನು ಮುಂದುವರಿಸಲು ಕೈಗಳಿಂದ ಸನ್ನೆ ಮಾಡಿದ.
ಉಪನ್ಯಾಸ ಮುಂದುವರಿಯುತ್ತಿದ್ದಂತೆ ಮುನಿಕುಮಾರರು ಮತ್ತೆ ಬಂದು, ಗೋಳಿಟ್ಟರು:
“ಗುರುಗಳೇ, ಮಿಥಿಲಾಪುರದ ಭವ್ಯ ಅರಮನೆಯೇ ಕಾಡ್ಗಿಚ್ಚಿನಿಂದ ಭಸ್ಮವಾಗಿಹೋಯಿತು!”
ಈಗಂತೂ ಅಳಿದುಳಿದ ಶ್ರೋತೃಗಳೆಲ್ಲರ ದೃಷ್ಟಿಯೂ ಜನಕ ರಾಜನ ಮುಖದ ಕಡೆ ಕೇಂದ್ರೀಕರಿಸಿತು. ಯಾಜ್ಞವಲ್ಕ್ಯರು ಉಪನ್ಯಾಸವನ್ನು ನಿಲ್ಲಿಸಿ, ಜನಕರಾಜನ ಕಡೆ ಗಾಬರಿ ಹಾಗೂ ಭಯಾತುರತೆಯಿಂದ ವೀಕ್ಷಿಸತೊಡಗಿದರು.
ಆಗಲೂ ಜನಕ ರಾಜನ ಮನಸ್ಸು ಪರ್ವತದಂತೆ ಅಚಲವಾಗಿತ್ತು. ದೃಢಮನದಿಂದಲೇ ವಿನಯ ವಿನಮ್ರತೆಯೊಂದಿಗೆ ಯಾಜ್ಞವಲ್ಕ್ಯರಲ್ಲಿ ಭಿನ್ನವಿಸಿಕೊಂಡ-
“ಗುರುಗಳೇ, ಆತ್ಮ ಅಮರವಾದುದು. ಅರಮನೆ ಅಂತ:ಪುರ ಹಾಗೂ ನನ್ನ ಈ ಶರೀರವೇ ಸುಟ್ಟುಹೋದರೂ, ಆತ್ಮಕ್ಕೆ ಯಾವ ಬೆಂಕಿಯೂ ಸೋಂಕದು. ಯಾವ ಜಲಪ್ರವಾಹವೂ ಅದನ್ನು ಒದ್ದೆ ಮಾಡಲಾರದು. ತಾವು ಕೃಪೆ ಮಾಡಿ ಪ್ರವಚನವನ್ನು ಮುಂದುವರಿಸಿ ನಿಲ್ಲಿಸಬೇಡಿ.”
ಯಾಜ್ಞವಲ್ಕ್ಯರು ಈಗ ನೆರೆದಿದ್ದವರ ಕಡೆ ನಗುತ್ತಾ ನೋಡತೊಡಗಿದರು. ಕಾರಣ ಯಾವ ಕಾಡ್ಗಿಚ್ಚು ಎಲ್ಲೂ ಹರಡಿರಲಿಲ್ಲ. ಯಾವ ನಗರವಾಗಲಿ, ಅರಮನೆಯಾಗಲಿ ಭಸ್ಮ ಆಗಿರಲಿಲ್ಲ. ಜನಕರಾಜನ ಬ್ರಹ್ಮಜ್ಞಾನದ ಆಳದ ಅರಿವನ್ನು ಶ್ರೋತೃಗಳಿಗೆ ಮಾಡಿಕೊಡುವ ಸಲುವಾಗಿಯೇ ಯಾಜ್ಞವಲ್ಕ್ಯರು ಈ ನಾಟಕ ಆಡಿಸಿದ್ದರು.
ಗಾಬರಿ ಹಾಗೂ ಭಯದಿಂದ ಚದುರಿ, ಪರಾರಿ ಆಗಿದ್ದ ಶ್ರೋತೃಗಳೆಲ್ಲರೂ ಈಗ ಹಿಂದಿರುಗಿದರು.
ಯಾಜ್ಞವಲ್ಕ್ಯರು ನಗುತ್ತಲೇ ಹೇಳಿದರು:
ಶ್ರೋತೃಗಳೇ, ಈಗಾದರೂ ರಾಜರ್ಷಿ ಎನಿಸಿರುವ ಜನಕಮಹಾರಾಜನ ಬ್ರಹ್ಮಜ್ಞಾನದ ಹಿರಿಮೆ ಎಂತಹುದೆಂಬುದರ ಅರ್ಥ ಆಗಿರಬಹುದಲ್ಲವಾ? ಇನ್ನು ಮುಂದಾದರೂ ನಿಮ್ಮಲ್ಲಿ ಯಾರೂ ಬೇಸರಭಾವವನ್ನು ಮತ್ತೆ ತೋರ್ಪಡಿಸುವುದಿಲ್ಲಾ ತಾನೇ?”
ಎಲ್ಲರೂ ಈಗ ಜನಕರಾಜನಲ್ಲಿದ್ದ ಬ್ರಹ್ಮಜ್ಞಾನದ ಹಿರಿಮೆಯನ್ನು ಹೃನ್ಮನಪೂರ್ವಕವಾಗಿ ಕೊಂಡಾಡಿದರು.