ಭಾಗವತ ಕಥೆಗಳು

ಮಹಾಭಾರತ ಯುದ್ಧದ ನಂತರ.... ಮಹಾಭಾರತ ಯುದ್ಧವು ಮುಗಿದಿತ್ತು. ಅದರಿಂದ ಉಂಟಾದ ಮಹಾ ವಿನಾಶವು ಎಲ್ಲೆಲ್ಲೂ ಕಂಡುಬರುತ್ತಿತ್ತು. ವಾತಾವರಣದಲ್ಲಿ ದುಃಖ-ದುಮ್ಮಾನಗಳು ದಟ್ಟವಾಗಿ ವ್ಯಾಪಿಸಿದ್ದವು. ಮಹಾಭಾರತ ಯುದ್ಧವು ಸಾವನ್ನು ತರದ ಯಾವುದೇ ಒಂದು ಮನೆಯು ಭರತವರ್ಷದಲ್ಲಿ ಇರಲಿಲ್ಲ ಎಂದೇ ಹೇಳಬಹುದು. ಪ್ರತಿಯೊಬ್ಬನಿಗೂ ಒಂದಿಲ್ಲೊಂದು ನಷ್ಟ ಆಗಿಯೇ ಆಗಿತ್ತು. ಯುದ್ಧದಲ್ಲಿ ವಿಜಯ ದೊರೆತು ಸಾಮ್ರಾಜ್ಯವು ಕೈವಶವಾಗಿದ್ದರೂ ಚಕ್ರವರ್ತಿ ಯುಧಿಷ್ಠಿರನ ಮನಸ್ಸಿಗೆ ನೆಮ್ಮದಿ ಇಲ್ಲವಾಯ್ತು. ಯುದ್ಧವು ತಂದಿರುವ ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿಯಿಂದ ಅವನಿಗೆ ದುಃಖವಾಗಿತ್ತು. ಯುದ್ಧದಲ್ಲಿ ಸತ್ತ ವೀರ ಅಭಿಮನ್ಯುವಿನ ಹೆಂಡತಿ ಉತ್ತರೆಯು ಗರ್ಭಿಣಿಯಾಗಿದ್ದಳು.

ಪಾಂಡವರ ಮುಂದಿನ ಪೀಳಿಗೆಯ ಬಾಕಿಯುಳಿದ ಒಂದೇ ಒಂದು ಪಿಂಡ ಅವಳ ಗರ್ಭದಲ್ಲಿತ್ತು. ಇದರಿಂದ ದ್ರೋಣಾಚಾರ್ಯನ ಮಗ ಅಶ್ವತ್ಥಾಮನಿಗೆ ಅಸಮಾಧಾನವೂ ಆಗಿತ್ತು. ಅವನಿಗೆ ಪಾಂಡವರ ಬಗ್ಗೆ ಅಸೂಯೆಯೂ ಪ್ರತೀಕಾರ ಭಾವನೆಯೂ ತೀವ್ರವಾಗಿತ್ತು. ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿರುವ ಪಾಂಡವರ ಏಕೈಕ ಕುಡಿಯನ್ನು ಕಮರಿಸಲು ಅವನು ಹೊಂಚು ಹಾಕುತ್ತಿದ್ದ. ಅತ್ತ ಪಾಂಡವರು ಧೃತರಾಷ್ಟ್ರನ ಯಾವೊಂದು ಸಂತಾನವೂ ಉಳಿಯದಂತೆ ಹೊಸಕಿ ಹಾಕಿದ್ದರು. ಅದೇ ಗತಿ ಪಾಂಡವರಿಗೂ ಬರಬೇಕೆಂದು ಅಶ್ವತ್ಥಾಮ ಬಯಸಿದ್ದ. ದ್ರೌಪದಿಯ ಐವರು ಮಕ್ಕಳನ್ನು - ಅವರು ನಿದ್ರೆಯಲ್ಲಿದ್ದಾಗ - ಅಶ್ವತ್ಥಾಮನು ಕೊಂದು ಹಾಕಿದ್ದ. ಉತ್ತರೆಯ ಗರ್ಭದಲ್ಲಿದ್ದ ಭ್ರೂಣವನ್ನು ಅವನು ನಾಶ ಮಾಡಿದ್ದರೆ ಅಲ್ಲಿಗೆ ಪಾಂಡವರ ವಂಶವೂ ಮುರುಟಿ ಹೋಗುತ್ತಿತ್ತು. ಅವರ ವಂಶದ ರಾಜ್ಯಭಾರ ಅಲ್ಲಿಗೇ ಮುಗಿಯುತ್ತಿತ್ತು. ಆದರೆ ಪಾಂಡವರಿಗೆ ಕೃಷ್ಣ ಪರಮಾತ್ಮನ ರಕ್ಷಣೆಯಿತ್ತು.

ಅಶ್ವತ್ಥಾಮನು ತನ್ನ ಮಾರಕವಾದ ಬ್ರಹ್ಮಾಸ್ತ್ರವನ್ನು ಉತ್ತರೆಯ ಗರ್ಭದತ್ತ ಹೊಡೆದಾಗ ಶ್ರೀಕೃಷ್ಣನು ಅದನ್ನು ತನ್ನ ದೈವೀಶಕ್ತಿಯಿಂದ ತಡೆದು ನಿಲ್ಲಿಸಿದ್ದ. ಆಗ ಆ ಭ್ರೂಣದ ಸುತ್ತಲೂ ದೈವೀ ಶಕ್ತಿಯ ಭದ್ರವಾದ ರಕ್ಷಣಾ ಪೊರೆಯೊಂದು ನಿರ್ಮಾಣವಾಗಿತ್ತು. ಇದು ಆ ಶಿಶುವನ್ನು ಜನ್ಮ ತಳೆಯುವುದಕ್ಕೆ ಮೊದಲೇ ಶ್ರೀಕೃಷ್ಣನ ಪರಮ ಭಕ್ತನನ್ನಾಗಿ ಮಾಡಿತ್ತು. ನವಮಾಸ ತುಂಬಿದಾಗ ಉತ್ತರೆಯು ಆರೋಗ್ಯಶಾಲಿಯಾದ ಗಂಡು ಶಿಶುವಿಗೆ ಜನ್ಮವಿತ್ತಳು. ಅಶ್ವತ್ಥಾಮನ ಬ್ರಹ್ಮಾಸ್ತ್ರದ ಯಾವುದೇ ಪ್ರತಿಕೂಲ ಪರಿಣಾಮಗಳು ಅದರ ಮೇಲೆ ಕಂಡು ಬರಲಿಲ್ಲ. ಮನೆಯಲ್ಲಿ ಪುತ್ರ ಸಂತಾನವಾದುದು ಯುಧಿಷ್ಠಿರನಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಯಿತು. ನವಜಾತ ಶಿಶುವಿನ ಜನ್ಮ ಕುಂಡಲಿ ನೋಡಲು ಅವನು ಜ್ಯೋತಿಷಿಗಳನ್ನು ಕರೆಸಿದ. “ಈ ಹುಡುಗ ಬಲು ಕೀರ್ತಿವಂತನಾದ ರಾಜನಾಗುವನು. ಇವನು ದೈವಭಕ್ತನೂ ಧರ್ಮಬೀರುವೂ ಪ್ರಜೆಗಳ ಕ್ಷೇಮಾಭ್ಯುದಯ ಹಾರೈಸುವವನೂ ಆಗಿರುತ್ತಾನೆ. ಅವನು ಪಾಂಡವರ ಕೀರ್ತಿಯನ್ನು ನಾಡಿನ ಉದ್ದಗಲಕ್ಕೂ ಬೆಳಗುವನು” ಎಂದು ಜ್ಯೋತಿಷಿಗಳು ಹೇಳಿದರು. ಇದರಿಂದ ಪಾಂಡವರಿಗೆ ಆತಂಕ ನಿವಾರಣೆಯಾಯಿತು. ರಾಜಕುಮಾರನಿಗೆ ಪರೀಕ್ಷಿತನೆಂದು ಹೆಸರಿಟ್ಟರು. ಅವನು ಸರ್ವ ವಿದ್ಯೆಗಳನ್ನೂ ಕರಗತ ಮಾಡಿಕೊಂಡು ಸಮರ್ಥನಾದ ಯುವಕನಾಗಿ ಬೆಳೆದುನಿಂತ. ಒಬ್ಬ ಋಷಿಯ ಶಾಪದ ನಿಮಿತ್ತ ಅವನು ಸಾವನ್ನು ಪಡೆದರೂ ಅದಕ್ಕೆ ಮೊದಲೇ ಜೀವನದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದ. ಜ್ಯೋತಿಷಿಗಳು ನುಡಿದ ಭವಿಷ್ಯ ವಾಣಿಯನ್ನೆಲ್ಲ ನಿಜ ಮಾಡಿದ. ಇಂದ್ರಪ್ರಸ್ಥ-ಹಸ್ತಿನಾಪುರ ರಾಜ್ಯದ ದೊರೆಯಾಗಿ ಅವನು ಅಪಾರ ಕೀರ್ತಿಯನ್ನು ಪಡೆದ. ಮಹಾಭಾರತ ಯುದ್ಧದ ಕಹಿಭಾವನೆಗಳನ್ನು ಪ್ರಜಾಜನರ ಮನಸ್ಸಿನಿಂದ ಅಳಿಸಿ ಹಾಕಲು ಅವನು ತನ್ನ ಉತ್ತಮ ರಾಜ್ಯಭಾರದಿಂದ ಸಾಕಷ್ಟು ಪ್ರಯತ್ನಪಟ್ಟ.

ಇತ್ತ ಯುಧಿಷ್ಠಿರನು ಮಹಾಭಾರತ ಯುದ್ಧಾನಂತರ ಶ್ರೀಕೃಷ್ಣನ ಸಲಹೆಯ ಮೇರೆಗೆ ಮೂರು ಅಶ್ವಮೇಧ ಯಾಗಗಳನ್ನು ಮಾಡಿದ. ಆದರೂ ಮಹಾಭಾರತ ಯುದ್ಧದಿಂದ ಆದ ಜೀವಹಾನಿಯಿಂದ ಉಂಟಾದ ಅವನ ಮನಸ್ಥಿತಿ ಸಂಪೂರ್ಣವಾಗಿ ತಿಳಿಯಾಗಲಿಲ್ಲ. ಅವನ ಅಪರಾಧ ಪ್ರಜ್ಞೆಯೂ ಸಂಪೂರ್ಣ ಅಳಿಸಿ ಹೋಗಲಿಲ್ಲ. ಇದಾದ ಮೇಲೆ ಕೆಲವು ದಿನಗಳ ನಂತರ ಶ್ರೀಕೃಷ್ಣ ತನ್ನ ರಾಜಧಾನಿಯಾದ ದ್ವಾರಕೆಗೆ ಹೊರಟುಹೋದ. ಅವನ ರಾಜ್ಯದಲ್ಲಿಯೂ ಪರಿಸ್ಥಿತಿ ನೆಟ್ಟಗಿರಲಿಲ್ಲ. ಒಬ್ಬ ಋಷಿಯ ಶಾಪದ ನಿಮಿತ್ತ ಯಾದವ ಕುಲದವರೆಲ್ಲ, ಕುಡಿತ, ಜೂಜು, ಹಾದರ, ಕೊಲೆ, ಸುಲಿಗೆ ಇತ್ಯಾದಿ ದುರ್ಗುಣ, ದುಷ್ಕøತ್ಯಗಳಲ್ಲಿ ಮುಳುಗಿಹೋಗಿದ್ದರು. ಪರಸ್ಪರರನ್ನು ನಾಶ ಮಾಡುವುದೇ ಯಾದವರ ಪರಮ ಗುರಿಯಾಗಿದೆಯೋ ಎಂಬಂತೆ ಭಾಸವಾಗುತ್ತಿತ್ತು. ವಾಪಸು ಚೇತರಿಸಿಕೊಳ್ಳಲಾರದಂತಹ ವಿನಾಶದ ಪ್ರಪಾತದ ಕಡೆಗೆ ಯಾದವ ಕುಲ ನಾಗಾಲೋಟದಿಂದ ಸಾಗುತ್ತಿತ್ತು.

ಯಾದವರ ಈ ರೀತಿಯ ಅವನತಿಯು ಶ್ರೀಕೃಷ್ಣನಿಗೆ ಅಪಾರ ದುಃಖವನ್ನು ಉಂಟು ಮಾಡಿತು. ಪರಸ್ಪರ ಬಡಿದಾಟ, ಹೋರಾಟಗಳಲ್ಲಿ ಯಾದವ ನಾಯಕರು ಒಬ್ಬನಾದ ನಂತರ ಒಬ್ಬ ಸಾಯುತ್ತಿರುವುದನ್ನು ಕೃಷ್ಣನು ಅಸಹಾಯಕನಾಗಿ ನೋಡ ಬೇಕಾಯಿತು. ಅವನೂ ನಿವೃತ್ತಿ ಬಯಸಿ ತನ್ನ ಮೂಲ ನಿವಾಸಕ್ಕೆ ಅಂದರೆ ವಿಷ್ಣು ಲೋಕಕ್ಕೆ ಹೋಗಲು ಬಯಸಿದ. ಭೂಲೋಕದಲ್ಲಿ ಈಗ ಅವನು ಮಾಡಬೇಕಾದುದು ಏನೂ ಉಳಿದಿರಲಿಲ್ಲ. ವಿದುರನು ತೀರ್ಥಯಾತ್ರೆಯಿಂದ ವಾಪಸು ಬಂದ. ಕೌರವರ ತಂದೆ ಧೃತರಾಷ್ಟ್ರ ಇನ್ನೂ ಹಸ್ತಿನಾಪುರದಲ್ಲೇ ವಾಸ ಮಾಡುತ್ತಿದ್ದ. ಅವನ ಸ್ಥಿತಿಯನ್ನು ಕಂಡು ವಿದುರನು ಅವನಿಗೆ ಹೀಗೆ ಹೇಳಿದ : “ಪೂಜ್ಯನೆ, ನಾವೆಲ್ಲರೂ ವೃದ್ಧರಾಗಿದ್ದೇವೆ. ಇನ್ನೇನು ಇಂದೋ ನಾಳೆಯೋ ಸಾವು ಬರಬಹುದು. ಹಾಗಾಗಿ ನಾವು ದಿಕ್ಕು-ದೆಸೆಯಿಲ್ಲದೆ ಹಸ್ತಿನಾಪುರಿಯಲ್ಲಿ ಏನು ಮಾಡೋಣ? ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೆ? ನಾವು ಇಲ್ಲಿಂದ ಹೊರಟು ಹೋಗೋಣ. ನಿನ್ನ ಸ್ಥಿತಿಯಂತೂ ಬಲು ದಯನೀಯವಾಗಿದೆ.

ವಿದುರನು ಹೀಗೆ ಛೇಡಿಸಿದಾಗ ಧೃತರಾಷ್ಟ್ರನಿಗೆ ಅವನ ಮಾತು ಸರಿಯೆನಿಸಿತು. ಅವನ ಪುತ್ರ ಶೋಕ ಇನ್ನೂ ಹೋಗಿರಲಿಲ್ಲ. ಬೇರಾವುದನ್ನೂ ಚಿಂತಿಸಲು ಅವನಿಗೆ ಸಾಧ್ಯವೇ ಆಗದ ಸ್ಥಿತಿಯಲ್ಲಿದ್ದನವನು. ವಿದುರನ ಮಾತು ಚಾಟಿಯೇಟಿನಂತೆ ಅವನನ್ನು ಬಡಿದೆಬ್ಬಿಸಿತು. ಅವನು ಕೂಡಲೇ ಪತ್ನಿ ಗಾಂಧಾರಿಯನ್ನೂ ವಿದುರನನ್ನೂ ಕೂಡಿಕೊಂಡು ಕಾಡಿಗೆ ಹೊರಟ. ಅಚ್ಚರಿಯೆಂದರೆ ಪಾಂಡವರ ತಾಯಿ ಕುಂತಿಯೂ ಈ ಮೂವರ ಜತೆ ಕಾಡಿಗೆ ಹೊರಟಳು. ಹೋಗಬೇಡವೆಂದು ಯುಧಿಷ್ಠಿರ ಪರಿಪರಿಯಿಂದ ಬೇಡಿಕೊಂಡರೂ ಅವಳು ಕೇಳಲಿಲ್ಲ.

ಕೆಲ ಕಾಲದಲ್ಲೇ ಈ ವೃದ್ಧರೆಲ್ಲ ಕಾಡಿನಲ್ಲಿ ಮರಣ ಹೊಂದಿದರು. ಈ ವಾರ್ತೆಯಿಂದ ಯುಧಿಷ್ಠಿರನಿಗೆ ದುಃಖವಾಯಿತು. ಅವನು ಇನ್ನಷ್ಟು ಏಕಾಂತ ಪ್ರಿಯನೂ ಮೂಕನೂ ಆದ. ಇದರ ಜತೆಗೆ ದ್ವಾರಕೆಯಲ್ಲಿ ಯಾದವರೆಲ್ಲ ತಮ್ಮ ತಮ್ಮಲ್ಲೇ ಬಡಿದಾಡಿ ಸತ್ತು ಹೋಗಿದ್ದರು. ಶ್ರೀಕೃಷ್ಣನೂ ದೇಹತ್ಯಾಗ ಮಾಡಿ ವೈಕುಂಠಕ್ಕೆ ವಾಪಸು ಹೋಗಿದ್ದ. ಕೃಷ್ಣ ಇಲ್ಲದ ಪ್ರಪಂಚದಲ್ಲಿ ಇನ್ನು ತಮಗೆ ಬದುಕಾದರೂ ಎಲ್ಲಿದೆ ಎಂದು ಪಾಂಡವರು ವ್ಯಥೆ ಪಟ್ಟರು. ದ್ರೌಪದಿಯ ಅಳುವಿಗೆ ಸಾಂತ್ವನ ಹೇಳುವವರೇ ಇರಲಿಲ್ಲ. ಪಾಂಡವರಿಗೆ ಈಗ ದಾತಾರರೇ ಇರಲಿಲ್ಲ.

ಯುಧಿಷ್ಠಿರನ ಬಾಳಿನಲ್ಲಿ ಕತ್ತಲೆ ಕವಿಯಿತು. ಕೃಷ್ಣನೆಂಬ ಬೆಳಕು ಆರಿಹೋಗಿತ್ತು. ಯುಧಿಷ್ಠಿರನೂ ಅವನ ತಮ್ಮಂದಿರೂ ನಂತರ ಬಲು ಬೇಗನೇ ವೃದ್ಧರಾದರು. ಯುಧಿಷ್ಠಿರನು ಪರೀಕ್ಷಿತನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ ಮಾಡಿದ. ನಂತರ ಸ್ವರ್ಗಾರೋಹಣ ಕಾರ್ಯ ಸುಲಭವಾಗಲೆಂದು ಅವನು ತಮ್ಮಂದಿರು ಹಾಗೂ ಪತ್ನಿ ದ್ರೌಪದಿಯೊಡನೆ ಹಿಮಾಲಯಕ್ಕೆ ಹೊರಟುಹೋದ. ಕಾಲನ ಮಹಿಮೆಯನ್ನು ಕಂಡವರಾರು? ದೇವರ ಅವತಾರಗಳನ್ನೂ ಅದು ಬಿಡದು.