ಸಾಧು ಸಂತರ ಕಥೆಗಳು

ಗುರುವಿಗೇ ಗುರು ಎನಿಸಿದ ಈ ಶಿಷ್ಯ(ಶ್ರೀರಾಮಕೃಷ್ಣರ ಜೀವನದ ಕಥೆ) ಶ್ರೀ ರಾಮಕೃಷ್ಣ ಪರಮಹಂಸರು ಒಮ್ಮೆ ತಮ್ಮ ಗುರುಗಳಾದ ತೋತಾಪುರಿ ಅವರೊಂದಿಗೆ ಸ್ನಾನ ಮಾಡಲು ನದಿಗೆ ಹೋಗಿದ್ದರು. ಅವರು ಯಾವುದೇ ವಿಚಾರವನ್ನು ಕಂಡರೂ ಸಹ, ಮನೋವೈಜ್ಞಾನಿಕ ರೀತಿಯಲ್ಲಿ ಯೋಚಿಸುತ್ತಿದ್ದರು.ದಿನವೂ ತೋತಾಪುರಿ ಅವರು ಸ್ನಾನ ಮಾಡುವ ಮೊದಲು ತಾವು ತರುತ್ತಿದ್ದ ಕಮಂಡಲವನ್ನು ಕೊಂಚವೂ ಕೊಳೆ ಸೇರದ ಹಾಗೆ ಹುಣಸೆಹಣ್ಣು ಹಾಗೂ ಮಣ್ಣಿನಿಂದ ಉಜ್ಜಿ, ಶುಚಿಗೊಳಿಸಿ, ಸೂರ್ಯನ ಬೆಳಕಿನಂತೆ ಹೊಳೆಯುವ ಹಾಗೆ ಮಾಡಿ, ಅದರಲ್ಲಿ ನೀರು ತುಂಬಿ ತರುತ್ತಿದ್ದರು.ಒಂದು ಬಾರಿ ತೋತಾಪುರಿ ಅವರು ತಮ್ಮ ಶಿಷ್ಯರಾದ ರಾಮಕೃಷ್ಣರಿಗೆ ತುಂಬಾ ಕಾಲ ಆತ್ಮಶುದ್ಧಿಯ ಬಗ್ಗೆ ಪ್ರಶ್ನೋತ್ತರ ರೀತಿಯಲ್ಲಿ ಕೂಲಂಕುಷವಾಗಿ ಬೋಧಿಸಿದರು. ರಾಮಕೃಷ್ಣರೂ ಆ ಬಗ್ಗೆ ತುಂಬಾ ಚಿಂತನ-ಮಂಥನ ನಡೆಸುತ್ತಾ, ಗುರುಗಳ ಮಾತನ್ನೇ ಆಲಿಸುತ್ತಾ ಕುಳಿತಿದ್ದರು.
“ವತ್ಸಾ ನಡಿ, ಬೇಗ ಸ್ನಾನ ಮಾಡಿಕೊಂಡು ಬರೋಣ” ಎಂದು ಹೇಳುತ್ತಾ, ಕಮಂಡಲವನ್ನು ಕೈಗೆ ತೆಗೆದುಕೊಂಡು, ತೋತಾಪುರಿ ಅವರು ಎದ್ದು, ನದಿಯ ಕಡೆ ನಿಧಾನವಾಗಿ ಹೆಜ್ಜೆ ಹಾಕಿದರು. ರಾಮಕೃಷ್ಣರೂ ಅವರ ಹಿಂದೆಯೇ ಅವರು ಆತ್ಮಶುದ್ಧಿಯ ಬಗ್ಗೆ ಹೇಳಿದ್ದ ವಿಚಾರವನ್ನೇ ಮೆಲುಕು ಹಾಕುತ್ತಾ ಬಂದರು. ಇಬ್ಬರೂ ನದಿಯ ತೀರವನ್ನು ತಲುಪಿದರು. ಎಂದಿನಂತೆ ತೋತಾಪುರಿ ಅವರು ಕಮಂಡಲವನ್ನು ಹುಣಸೆಹಣ್ಣು, ಮಣ್ಣಿನಿಂದ ಉಜ್ಜುತ್ತಾ, ತೊಳೆಯ ತೊಡಗಿದರು. ರಾಮಕೃಷ್ಣರಿಗೆ ಇದನ್ನು ನೋಡುತ್ತಿದ್ದಂತೆ ತಲೆಯಲ್ಲಿ ಒಂದು ವಿಚಾರ ಥಟ್ಟನೆ ಹೊಳೆಯಿತು. ಕೂಡಲೇ ಅವರು ಗುರುಗಳಾದ ತೋತಾಪುರಿ ಅವರನ್ನು ಕೇಳಿದರು :
“ಗುರುಗಳೇ, ನೀವು ದಿನವೂ ಕಮಂಡಲವನ್ನು ಹೀಗೆ ಉಜ್ಜಿ ತೊಳೆಯುವುದರ ಉದ್ದೇಶ?” ಗುರುಗಳು ಕಮಂಡಲವನ್ನು ಉಜ್ಜುತ್ತಾ, ರಾಮಕೃಷ್ಣರ ಕಡೆಯೇ ನೋಡುತ್ತಾ ಹೇಳಿದರು : “ಶುದ್ಧಿಗೊಳಿಸುವ ಸಲುವಾಗಿ, ಪರಿಶುದ್ಧತೆ ಜೀವನದ ಪ್ರತಿ ಹಂತದಲ್ಲಿಯೂ ಪ್ರಮುಖ ಅಲ್ಲವಾ?” ಗುರುಗಳ ಮಾತನ್ನು ಮತ್ತೆ ಚಿಂತನ-ಮಂಥನದಲ್ಲಿ ರಾಮಕೃಷ್ಣರು ಕೆಲಕಾಲ ತೊಡಗಿಸಿ ಕೇಳಿದರು: “ಅದೇನೋ ಸರಿ, ಆದರೆ ಈ ಭೌತಿಕ ವಸ್ತುವಾದ ಈ ಕಮಂಡಲವನ್ನೇ ತಿಕ್ಕುತ್ತಾ ಕೂಡುವ ಬದಲು ನಮ್ಮ ಅಂತರಂಗವನ್ನೇ ಹೀಗೆ ಶುದ್ಧೀಗೊಳಿಸಿಕೊಂಡರೆ? ಆತ್ಮಶುದ್ಧಿಯನ್ನೇ ನಾವು ಪಡೆದರೆ ಈ ಭೌತಿಕ ಶುದ್ಧಿಯ ಅವಶ್ಯಕತೆಯೇ ಇರುವುದಿಲ್ಲ ಅಲ್ಲವೇ?”. ಗುರುಗಳು ಶಿಷ್ಯನ ಮಾತುಗಳನ್ನು ಕೇಳಿ ಅವಾಕ್ಕಾದರು. ಆನಂದದಿಂದ ಪ್ರಫುಲ್ಲಿತರಾದರು. ಅವರಿಗೆ ಶಿಷ್ಯನ ಮಾತು ನೂರಕ್ಕೆ ನೂರರಷ್ಟೂ ನಿಜ ಅನ್ನಿಸಿತು. ಕೂಡಲೇ ಕೈ ತೊಳೆದುಕೊಂಡು, ರಾಮಕೃಷ್ಣರ ಪಾದಗಳಿಗೆರಗಿ ಹೇಳಿದರು :“ವತ್ಸಾ, ಈಗ ನೀನೇ ನನಗೆ ಗುರು ಆದೆ. ನಾನೇ ಧನ್ಯ, ಧನ್ಯ!” ಅವರ ಕಣ್ಣುಗಳಿಂದ ಆನಂದಭಾಷ್ಪ ಮೂಡಿ, ಹನಿಗಳು ಉದುರತೊಡಗಿದವು.