ಭಾಗವತ ಕಥೆಗಳು

ದಕ್ಷ ಯಜ್ಞ ದಕ್ಷ ಪ್ರಜಾಪತಿಗೆ ಅನೇಕ ಹೆಣ್ಣು ಮಕ್ಕಳು; ಅವರೆಲ್ಲರೂ ಸುಂದರಿಯರೂ ಗುಣವತಿಯರೂ ಆಗಿದ್ದರು. ಆದರೆ ದಕ್ಷನಿಗೆ ಇದರಿಂದ ಸಮಾಧಾನವಾಗಲಿಲ್ಲ. ದೈವೀ ಶಕ್ತಿಯುಳ್ಳ ಒಬ್ಬಳು ಮಗಳು ಬೇಕೆಂದು ಅವನಿಗೆ ಆಸೆಯಾಯಿತು. ಅಂಥವಳನ್ನು ಪಡೆಯಲು ಅವನು ತಪಸ್ಸು ಮಾಡಿದ. ಬಹು ಕಾಲ ತಪಸ್ಸು ಮಾಡಿದ ಮೇಲೆ ಭಗವತಿ ಪ್ರತ್ಯಕ್ಷಳಾಗಿ “ನಿನ್ನ ತಪಸ್ಸಿಗೆ ಮೆಚ್ಚಿದೆ. ನಾನೇ ಸ್ವತಃ ನಿನ್ನ ಮಗಳಾಗಿ ಜನಿಸುತ್ತೇನೆ. ಅವಳ ಹೆಸರು ‘ಸತಿ’ ಎಂದು. ಸತಿಯ ಮೂಲಕ ನಾನು ದೈವೀ ಶಕ್ತಿಯ ಪ್ರಭಾವವನ್ನು ವಿಸ್ತರಿಸುವೆ” ಎಂದಳು.

ಈ ಮೂಲಕ ಭಗವತಿಯೇ ‘ಸತಿ’ಯಾಗಿ ದಕ್ಷ ದಂಪತಿಗಳ ಮಗಳಾಗಿ ಜನ್ಮವೆತ್ತಳು. ಅವಳಿಗೆ ಅಲೌಕಿಕ ಶಕ್ತಿ ಸಾಮಥ್ರ್ಯಗಳು ಇದ್ದವು. ಅವಳು ಮಾಡಿದ ಪವಾಡಗಳನ್ನೂ ಅಭಿನಯಿಸಿದ ದೃಶ್ಯಾವÀಳಿಗಳನ್ನೂ ಕಂಡು ಆ ದಂಪತಿಗಳೂ ದಂಗಾಗಿ ಹೋಗುತ್ತಿದ್ದರು. ಸತೀದೇವಿಯು ಬೆಳೆದು ದೊಡ್ಡವಳಾದಾಗ ತಂದೆ ದಕ್ಷನು ಅವಳ ಮದುವೆಯ ವಿಚಾರ ಮಾಡಿದ. ಈ ವಿಷಯದಲ್ಲಿ ಅವನು ಬ್ರಹ್ಮನ ಅಭಿಪ್ರಾಯ ಕೇಳಿದ. ಬ್ರಹ್ಮದೇವ ಹೇಳಿದ : “ಸತಿಯು ಮೂಲ ಶಕ್ತಿ ರೂಪಿಣಿಯಾದ ಭಗವತಿಯ ಅವತಾರ. ಅವಳಿಗೆ ತಕ್ಕವನು ಭಗವಾನ್ ಶಿವ. ಬೇರಾರೂ ಅವಳಿಗೆ ಗಂಡನಾಗಲು ತಕ್ಕವರಲ್ಲ” ಎಂದು ಹೇಳಿದ.

ಇದರಂತೆಯೇ ದಕ್ಷನು ಮಗಳು ಸತಿಯನ್ನು ಶಿವನಿಗೆ ಮದುವೆ ಮಾಡಿಕೊಟ್ಟನು. ನವ ದಂಪತಿಗಳು ಕೈಲಾಸದಲ್ಲಿ ಸುಖ-ಸಂತೋಷಗಳಿಂದ ಇದ್ದರು. ಇವನು ದಕ್ಷಪ್ರಜಾಪತಿಯ ಅಳಿಯನೇ ಆಗಿದ್ದರೂ ಸಹ ಒಂದು ದುರದೃಷ್ಟಕರ ಘಟನೆಯು ಅವರ ಸಂಬಂಧದಲ್ಲಿ ಹುಳಿ ಹಿಂಡಿತು. ಇದರಿಂದಾಗಿ ದಕ್ಷನು ಶಿವನನ್ನು ತನ್ನ ಶತ್ರುವಿನಂತೆಯೇ ಬಗೆದು ದ್ವೇಷಿಸತೊಡಗಿದ. ಅವರೊಳಗಿನ ದ್ವೇಷ-ಕ್ಲೇಷಗಳು ಬಹಳ ಗಾಢವಾಗಿದ್ದು ಯಾವುದೇ ರಾಜಿ ಮಾತುಕತೆಗೂ ಬಗ್ಗಲಿಲ್ಲ. ಅವರೊಳಗಿನ ಈ ಅಸಮಾಧಾನಕ್ಕೆ ಕಾರಣ ಒಂದು ಸಭೆಯಲ್ಲಿನ ಘಟನೆ. ಅದು ದೇವ-ದೇವರುಗಳ ಸಭೆಯಾಗಿತ್ತು. ಒಂದು ಕಡೆ ಶಿವನೂ ಅಲ್ಲಿ ಕೂತಿದ್ದ. ಅಲ್ಲಿಗೆ ದಕ್ಷ ಪ್ರಜಾಪತಿ ಬರುವುದು ಸ್ವಲ್ಪ ವಿಳಂಬವಾಯಿತು. ಅವನು ಬಂದಾಗ ಮಿಕ್ಕೆಲ್ಲರೂ ಎದ್ದು ನಿಂತು ಅವನನ್ನು ಗೌರವಿಸಿ ಸ್ವಾಗತಿಸಿದರು. ಆದರೆ ಶಿವನು ಮೇಲೇಳಲಿಲ್ಲ. ಅವನು ಮಾವನಿಗೆ ವಂದಿಸಲೂ ಇಲ್ಲ. ಇದರಿಂದ ದಕ್ಷನಿಗೆ ಅಪಮಾನವಾಯಿತು. ಈ ಅಪಮಾನಕ್ಕೆ ಪ್ರತೀಕಾರ ಮಾಡಬೇಕೆಂದು ಅವನು ಸಂದರ್ಭಕ್ಕಾಗಿ ಕಾಯುತ್ತಿದ್ದ. ಇದೇ ವೇಳೆ ಸತೀದೇವಿಯ ತಂದೆ ದಕ್ಷನು ಕನಖಲ ಎಂಬಲ್ಲಿ ನಿರೀಶ್ವರ ಎಂಬ ಯಜ್ಞವನ್ನು ಮಾಡಲು ತೊಡಗಿದನು. ಅವನು ಅದಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಮಿಕ್ಕೆಲ್ಲಾ ದೇವ-ದೇವತೆಗಳಿಗೂ ಋಷಿ-ಮುನಿಗಳಿಗೂ ಆಹ್ವಾನವನ್ನು ನೀಡಿದ್ದ. ಇದಕ್ಕೆ ಅವನಿಗೆ ಶಿವನ ಮೇಲೆ ಇದ್ದ ದ್ವೇಷವೇ ಕಾರಣವಾಗಿತ್ತು. ತನ್ನ ತಂದೆ ದೊಡ್ಡ ಸಮಾರಂಭವನ್ನು ಏರ್ಪಡಿಸಿದ್ದಾನೆ ಎಂಬ ಸುದ್ದಿಯನ್ನು ತಿಳಿದ ಸತೀದೇವಿಯು ಅದಕ್ಕೆ ತಾನೂ ಹೋಗಬೇಕೆಂದು ಬಯಸಿದಳು. ಸತಿಯು ಸ್ವಲ್ಪ ಹೊತ್ತು ಆಲೋಚನೆ ಮಾಡಿ, “ನನ್ನ ಎಲ್ಲಾ ಸೋದರಿಯರೂ ಅಲ್ಲಿಗೆ ಬರುತ್ತಾರೆ. ಅವರನ್ನೆಲ್ಲ ಕಾಣದೆ ಅನೇಕ ಕಾಲವಾಯಿತು. ಪ್ರಿಯಾ, ನಿನ್ನ ಅನುಮತಿಯೊಡನೆ ನಾನು ಅಲ್ಲಿಗೆ ಹೋಗುವೆ, ಅಕ್ಕತಂಗಿಯರನ್ನು ತಾಯಿ, ತಂದೆಯರನ್ನು ಭೇಟಿ ಮಾಡಿದಂತಾಯಿತು, ಯಜ್ಞದಲ್ಲೂ ಭಾಗವಹಿಸಿದಂತಾಯಿತು” ಎಂದಳು.

ಇದಕ್ಕೆ ಶಿವನು, “ಅಲ್ಲಿಗೆ ಹೋಗುವುದು ಬೇಡ” ಎಂದು ಸಲಹೆ ಮಾಡಿದ. “ಆಮಂತ್ರಣವಿಲ್ಲದೆ ಹೋಗುವುದು ಸರಿಯಲ್ಲ. ಅಲ್ಲಿ ಅವರು ನಿನಗೆ ಅಪಮಾನ ಮಾಡುವರು. “ಅದು ನನ್ನ ತಂದೆಯ ಮನೆ. ಅಲ್ಲಿನ ಸಮಾರಂಭಕ್ಕೆ ಹೋಗಲು ನನಗೆ ಯಾರ ಆಮಂತ್ರಣವೂ ಅಗತ್ಯವಿಲ್ಲ” ಎಂದು ಸತೀದೇವಿ ವಾದಿಸಿದಳು. ಶಿವನು ಸತೀದೇವಿಯ ಜತೆಗೆ ವೀರಭದ್ರನೆಂಬ ಅಂಗರಕ್ಷಕನನ್ನೂ ಕಳಿಸಿದ. ತಂದೆಯ ಮನೆಯಲ್ಲಿ ಸತೀದೇವಿಗೆ ಯಾವ ಸ್ವಾಗತವೂ ಸಿಗಲಿಲ್ಲ. ಅಲ್ಲಿ ಅವಳನ್ನು ಮಾತನಾಡಿಸುವವರೇ ಇರಲಿಲ್ಲ. ಇದೆಲ್ಲವೂ ಉದ್ದೇಶವಾಗಿ ಹೂಡಿರುವ ತಂತ್ರದಂತೆ ಸತಿಗೆ ಭಾಸವಾಯಿತು. ಅವಳ ಅಕ್ಕ-ತಂಗಿಯರೂ ಅವಳನ್ನು ನೋಡಿ ಗೇಲಿ ಮಾಡಿ ನಕ್ಕರು.

ಎಲ್ಲಾ ದೇವತೆಗಳ ಹೆಸರಲ್ಲೂ ಹವಿಸ್ಸು ಕೊಡುತ್ತಿದ್ದರು. ಆದರೆ ಶಿವನಿಗೆ ಮಾತ್ರ ಹವಿಸ್ಸು ಕೊಡುತ್ತಿರಲಿಲ್ಲ. ಸತಿಯು ತಂದೆಯನ್ನು ಕೇಳಿದಳು : “ಎಲ್ಲಾ ದೇವತೆಗಳಿಗೂ ಹವಿಸ್ಸು ಕೊಡುತ್ತಿದ್ದೀಯಾ, ಆದರೆ ಕೈಲಾಸನಾಥನಾದ ನನ್ನ ಗಂಡ ಶಿವನಿಗೇಕೆ ಹವಿರ್ಭಾಗವಿಲ್ಲ?” “ನಿನ್ನ ಗಂಡ ಒಬ್ಬ ದೇವನೆಂದೇ ನಾನು ಪರಿಗಣಿಸುವುದಿಲ್ಲ. ಆ ವಿದೂಷಕ ರುಂಡಮಾಲೆ ತೊಟ್ಟು, ಹಾವುಗಳನ್ನು ಸುತ್ತಿ ನಗ್ನನಾಗಿ ತಿರುಗುತ್ತಾನೆ, ಬೂದಿ ಬಡಕನವನು, ಅವನೊಬ್ಬ ಭೂತ, ಪ್ರೇತಗಳ ಯಜಮಾನ. ಅವನನ್ನು ದೇವನೆಂದು ಯಾರನ್ನುವರು, ಅವನಿಗೆ ಹವಿರ್ಭಾಗ ಇಲ್ಲ.”

ಇದನ್ನು ಕೇಳಿ ಸತೀದೇವಿ ಕೆರಳಿ ಕೆಂಡವಾದಳು. ಅವಳ ಕಣ್ಣುಗಳು ಕೋಪಾಗ್ನಿಯಿಂದ ಕೆಂಪಗಾದವು. ಅವಳು ಕೋಪದಿಂದ ಕುದಿಯುತ್ತ ಹೇಳಿದಳು: “ಇಂತಹಾ ದೈವನಿಂದೆಯನ್ನು ಮರುಮಾತಿಲ್ಲದೆ ಕೇಳುತ್ತಿರುವ, ಇಲ್ಲಿ ಸೇರಿರುವ ದೇವತೆಗಳೇ, ಋಷಿಗಳೇ, ಸಾಧು ಸಜ್ಜನರೇ ನಿಮಗೆ ಧಿಕ್ಕಾರವಿರಲಿ, ನನ್ನ ಪತಿಯ ಬಗ್ಗೆ ಇಂತಹ ಕೀಳು ಮಾತುಗಳನ್ನು ಕೇಳಿಯು ಹೇಗೆ ಸುಮ್ಮನಿದ್ದೀರಿ? ಹೀಗೆ ಹೇಳಿದವಳೇ ಸತೀದೇವಿಯು ಅಲ್ಲಿ ಉರಿಯುತ್ತಿರುವ ಭಾರೀ ಯಜ್ಞಕುಂಡಕ್ಕೆ ಜಿಗಿದಳು. ಅಲ್ಲಿ ಸೇರಿದವರೆಲ್ಲ ಆಘಾತಗೊಂಡು ನೋಡನೋಡುತ್ತಿದ್ದಂತೆಯೇ ಸತೀದೇವಿಯು ಇತರ ಹವಿಸ್ಸುಗಳ ಜತೆ ಬೆಂದು ಭಸ್ಮವಾದಳು. ಸತೀದೇವಿಯ ಅಂಗರಕ್ಷಕನಾದ ವೀರಭದ್ರನು ಕೋಪದಿಂದ ಕೆಂಡವಾಗಿದ್ದ. ಅವನು ರೋಷದಿಂದ ಅಬ್ಬರಿಸುತ್ತ ಯಜ್ಞಶಾಲೆಯನ್ನು ಧ್ವಂಸ ಮಾಡಲು ಪ್ರಾರಂಭಿಸಿದ. ಅವನು ತನ್ನ ಖಡ್ಗವನ್ನು ಹಿರಿದು ಕೆಲವರ ತಲೆಗಳನ್ನು ಕತ್ತರಿಸಿದ. ಅವನು ಯಾರು ಸಿಕ್ಕಿದರೂ ಅವರನ್ನು ತರಿಯುತ್ತ ಮುಂದಕ್ಕೆ ಧಾವಿಸುತ್ತಿದ್ದಂತೆ ದೇವ-ದೇವತೆಗಳೂ ಋಷಿ-ಮುನಿಗಳೂ ಪುರೋಹಿತರೂ ಭಯದಿಂದ ನಡುಗುತ್ತ ಪಲಾಯನ ಗೈದರು. ಸತೀ ದೇವಿಯು ಯಜ್ಞಕುಂಡಕ್ಕೆ ಆಹುತಿಯಾದ ಸುದ್ದಿಯನ್ನು ಕೇಳುತ್ತಲೇ ಶಿವನು ಕೋಪವೆಂಬ ಜ್ವಾಲಾಮುಖಿಯನ್ನು ಫೂತ್ಕರಿಸುತ್ತಿರುವ ಪರ್ವತದಂತೆ ಎದ್ದುನಿಂತ. ಅದೇ ಕೋಪದಲ್ಲಿ ಕನಖಲದತ್ತ ದೌಡಾಯಿಸಿದ.

ಅವನು ಕನಖಲವನ್ನು ತಲುಪಿ ಯಜ್ಞ ಕುಂಡದಲ್ಲಿ ಉರಿಯುತ್ತಿರುವ ತನ್ನ ಪತ್ನಿ ಸತೀದೇವಿಯ ದೇಹವನ್ನು ನೋಡಿ ಸ್ತಂಭೀಭೂತನಾದ. ಭ್ರಮಾಧೀನನಾದಂತೆ ಇದ್ದ ಶಿವನಿಗೆ ಏನನ್ನಿಸಿತೋ ಏನೋ ಅವನು ಹಠಾತ್ತನೆ ಯಜ್ಞಕುಂಡದಿಂದ ತನ್ನ ಹೆಂಡತಿಯ ಅರೆ ಸುಟ್ಟ ಶರೀರವನ್ನು ಹೊರತೆಗೆದು ಹೆಗಲಿಗೇರಿಸಿಕೊಂಡ. ನಂತರ ಅದೇ ಭಂಗಿಯಲ್ಲಿ ಸತೀದೇವಿಯ ಕಳೇಬರವನ್ನು ಹೊತ್ತುಕೊಂಡು ನಡೆಯತೊಡಗಿದ. ನಡೆಯುತ್ತಾ ನಡೆಯುತ್ತಾ ಎಲ್ಲೆಲ್ಲೋ ದಿಕ್ಕು-ದೆಸೆ ಇಲ್ಲದೆ ಅಲೆಯತೊಡಗಿದ.

ಸೃಷ್ಟಿಯಲ್ಲೆಲ್ಲ ಹಾಹಾಕಾರ ಉಂಟಾಯಿತು. ವಿಶ್ವದ ಅಂತ್ಯವೇ ಆಗಿಬಿಡುವುದೇನೋ ಎಂಬ ಭಯದ ಆ ಕ್ಷಣದಲ್ಲಿ ಮಹಾವಿಷ್ಣು ಒಂದು ಉಪಾಯವನ್ನು ಯೋಚಿಸಿದ. ಅವನು ತನ್ನ ಸುದರ್ಶನ ಚಕ್ರವನ್ನು ಬಿಟ್ಟ. ಅದು ಶಿವನು ಹೆಗಲಲ್ಲಿ ಹೇರಿದ ಸತೀದೇವಿಯ ಅರೆಸುಟ್ಟ ಕಳೇಬರವನ್ನು ಚಿಕ್ಕಚೂರುಗಳಾಗಿ ಕತ್ತರಿಸಲು ತೊಡಗಿತು. ಒಂದೊಂದು ತುಂಡು ಕತ್ತರಿಸಿ ಚೆಲ್ಲುತ್ತಾ ಇಡೀ ದೇಹವೇ ಹೀಗೆ ಬಿದ್ದು ಹೋದಾಗ ಶಿವನು ತನ್ನ ಭ್ರಮಾಲೋಕದಿಂದ ವಾಪಸು ಬಂದ. ಆಗ ಸೃಷ್ಟಿಯ ಚಲನೆ ಮತ್ತೆ ಆರಂಭವಾಯಿತು.

ಸತೀದೇವಿಯ ಶರೀರದ ಭಾಗಗಳು ಭೂಮಿಯಲ್ಲಿ 51 ಸ್ಥಳಗಳಲ್ಲಿ ಬಿದ್ದಿದ್ದವು. ಈ ಸ್ಥಳಗಳೆಲ್ಲವೂ ಶಕ್ತಿ ಸ್ವರೂಪಿಣಿಯ ಆರಾಧನಾ ಸ್ಥಳಗಳಾಗಿ ಹೆಸರಾಗಿ ಅಲ್ಲಿ ಮಂದಿರಗಳು ಎದ್ದವು. ಈ ರೀತಿ ಶಿವ-ಸತಿಯರ ಪ್ರೀತಿಯೆಂಬುದು ಅಷ್ಟೊಂದು ಅಮೋಘವೂ ಪ್ರಚಂಡವೂ ಆದುದಾಗಿತ್ತು.