ಭಾಗವತ ಕಥೆಗಳು

ಕಂಸವಧೆ ಕಾಳಿಂಗ ಮರ್ಧನದ ನಂತರ ಕೃಷ್ಣನ ಕೀರ್ತಿ ಬೃಂದಾವನದಲ್ಲೇ ಅಲ್ಲ, ಸುತ್ತಮುತ್ತಲ ಪ್ರದೇಶದಲ್ಲೂ ವ್ಯಾಪಿಸಿತು. ವಿಚಾರ ಮಥsÀುರೆಯ ರಾಜನಾದ ಕಂಸನ ಕಿವಿಗೂ ಬಿತ್ತು. ಅವನೇ ಅಶರೀರವಾಣಿ ಹೇಳಿದ ತನ್ನ ಶತ್ರು ಏಕೆ ಆಗಿರಬಾರದು? ಎಂಬ ಶಂಕೆಯೂ ಬಲಗೊಳ್ಳತೊಡಗಿತು. ಬಾಲಕೃಷ್ಣನ ಲೀಲೆಗಳಿಂದ ಲೋಲುಪರೆನಿಸಿದ್ದ ಗ್ವಾಲ-ಬಾಲ-ಬಾಲೆಯರಂತೂ ಅವನೊಂದಿಗೆ ಇರಲು ಸದಾ ಮುಗಿಬೀಳುತ್ತಿದ್ದರು. ಬಾಲ-ಬಾಲೆಯರೇ ಅಲ್ಲ, ಯುವಕಯುವತಿಯರೂ, ಅದರಲ್ಲೂ ವಿವಾಹಿತ ಯುವತಿಯರೂ ಕೃಷ್ಣನೊಂದಿಗೆ ವಿಹರಿಸಲು, ವಿನೋದವಾಗಿ ಕಾಲ ಕಳೆಯಲು ತುಂಬಾ ಅಪೇಕ್ಷಿಸುತ್ತಿದ್ದರು. ಕೃಷ್ಣನಿಲ್ಲದ ಅವರ ಜೀವನವೇ ಅವರೆಲ್ಲರಿಗೂ ನೀರಸವೆನಿಸಿತ್ತು. ಕಡುಬೇಸರದ ಬೇಗುದಿಯಲ್ಲಿ ಮುಳುಗಿಸುತ್ತಿತ್ತು. ಒಂದು ಬಾರಿ ನಾರದ ಮಹರ್ಷಿಗಳು ಕಂಸನ ಬಳಿಗೆ ಬಂದರು. ಅವನೊಂದಿಗೆ ಕಾಲಹರಣ ಮಾಡುತ್ತಿದ್ದ ಸಮಯದಲ್ಲಿ ಕೃಷ್ಣ ಬಲರಾಮರ ಬಗ್ಗೆಯೂ ಸಲ್ಲಾಪಿಸುತ್ತಾ, ಕೃಷ್ಣನೇ ಕಂಸನ ವೈರಿ ಹಾಗೂ ಮೃತ್ಯುವಿಗೆ ಕಾರಣಪುರುಷ ಎಂಬುದನ್ನೂ ಸೂಕ್ಷ್ಮವಾಗಿ ತಿಳಿಸಿದರು.

ಈಗಂತೂ ಕಂಸನ ಮುಂದೆ ಮೃತ್ಯುದೇವತೆಯೇ ನರ್ತಿಸುತ್ತಿರುವಂತೆ ಕಂಡುಬಂತು. ಹೇಗಾದರೂ ಮಾಡಿ ಅವರೀರ್ವರನ್ನೂ ಆದಷ್ಟು ಬೇಗ ಕೊನೆಗಾಣಿಸಲು ತವಕಗೊಂಡನು. ಕಂಸನ ಬಳಿ ಕೇಶಿ ಎಂಬ ರಕ್ಕಸ ಮಿತ್ರನಿದ್ದ. ಅಸಹಾಯಶೂರ ಎಂದು ಪರಿಗಣಿಸಲ್ಪಟ್ಟಿದ್ದ. ಕಂಸನಿಗೆ ತುಂಬಾ ಆಪ್ತನೂ ಆಗಿದ್ದ. ಕೃಷ್ಣನನ್ನು ಕೊಂದು ಬರಲು ಅವನನ್ನು ಬೃಂದಾವನಕ್ಕೆ ಕಳುಹಿಸಿದ. ಹಾಗೂ ಕೃಷ್ಣ ಹತನಾಗದಿದ್ದರೆ ಮಥsÀುರೆಗೇ ಉಪಾಯಾಂತರದಿಂದ ಕೃಷ್ಣಬಲರಾಮರನ್ನು ಕರೆಯಿಸಿ, ಚಾಣೂರ-ಮುಷ್ಟಿಕರೆಂಬ ಜಗಜ್ಜಟ್ಟಿಗಳೊಡನೆ ಮಲ್ಲಯುದ್ಧ ಮಾಡಿಸಿ ಕೊನೆಗೊಳಿಸಲು ಸ್ವತಃ ಗೋಪ್ಯವಾಗಿಯೇ ಯೋಜನೆ ಹಾಕಿಕೊಂಡ. ಕೇಶಿ ರಕ್ಕಸನೂ ಕೃಷ್ಣನಿಂದ ಕೊಲ್ಲಲ್ಪಟ್ಟ ಸುದ್ದಿ, ಕಂಸನ ಕಿವಿಗಳಲ್ಲಿ ಕಾದ ಸೀಸ ಬಿದ್ದಂತೆ ಬಿತ್ತು. ಇನ್ನು ತಡಮಾಡಿದರೆ ತನ್ನ ಸರ್ವನಾಶ ಆಗುವುದೆಂದು ಪರಿಗಣಿಸಿ, ಕೂಡಲೇ ಅಕ್ರೂರ ಎಂಬುವನನ್ನು ಬೃಂದಾವನದಿಂದ ಗೋಕುಲಕ್ಕೆ ಹೇಗಾದರೂ ಮಾಡಿ ಕರೆತರಲು ಕಳುಹಿಸಿಕೊಟ್ಟ. ಅಕ್ರೂರನಿಗೆ ಮೊದಲಿಂದಲೂ ಕೃಷ್ಣನನ್ನು ಸಂದರ್ಶಿಸುವ ಮನದಾಸೆ. ಈಗ ಈ ರೀತಿ ಆದರೂ ಫಲಿಸಿದುದನ್ನು ಕಂಡು, ಆನಂದದಿಂದಲೇ ಬೃಂದಾವನಕ್ಕೆ ಹೊರಟು ನಿಂತ. ಅಕ್ರೂರ ಬ್ರಹ್ಮಜ್ಞಾನಿ. ಅವನಿಗೆ ಕೆಲವೇ ದಿನಗಳಲ್ಲಿ ಕಂಸನು ಕೃಷ್ಣನಿಂದ ಕೊಲ್ಲಲ್ಪಡುವನೆಂಬ ವಿಷಯವೂ ಅರಿವಾಗಿತ್ತು. ಕಂಸನಿಗೆ ಕೊನೆಗಾಲ ಸಮೀಪಿಸುತ್ತಿರುವುದೆಂದೇ ಬಗೆದು ಬೃಂದಾವನಕ್ಕೆ ಬಂದ. ಬೃಂದಾವನದ ಹೆಬ್ಬಾಗಿಲಿನ ಬಳಿ ಕೃಷ್ಣನ ಹೆಜ್ಜೆಗಳನ್ನು ಗುರುತಿಸಿ, ಅವನು ತನ್ನ ಕೈಗಳಿಂದ ಸ್ಪರ್ಶಿಸಿ, ಭಕ್ತಿಯಿಂದ ನಮಿಸಿದ. ನಂದಯಶೋದೆಯರ ಮನೆಯಲ್ಲಿ ಈ ಬ್ರಹ್ಮಜ್ಞಾನಿಗೆ ಅತ್ಯಪೂರ್ವ ರೀತಿಯ ಆದರದ ಸ್ವಾಗತ ಲಭಿಸಿತು. ಆತಿಥ್ಯ ಸೇವೆಯೂ ನಡೆಯಿತು.

ಊಟೋಪಚಾರದ ನಂತರ ಮಥsÀುರೆಯಲ್ಲಿ ನಡೆಯಲಿರುವ ಬಿಲ್ಲುಹಬ್ಬಕ್ಕೆ ಕೃಷ್ಣ ಬಲರಾಮರನ್ನು ಕಂಸಾಸುರನು ಆಹ್ವಾನಿಸಿರುವ ವಿಷಯವನ್ನು ತಿಳಿಸಿದ. ವಿಷಯ ತಿಳಿಯುತ್ತಿದ್ದಂತೆ ನಂದ-ಯಶೋಧೆಯರಿಗೆ ಅವರ ಮೇಲೆ ಬರಸಿಡಿಲೆರಗಿದಂತೆ ಭಾಸವಾಯಿತು. ಅವರಿಗಿಂತಲೂ ಅತೀವತರದ ದುಃಖ ಗೋಪ-ಗೋಪಿಯರಿಗಾಯಿತು. ಅದರಲ್ಲೂ ಕೃಷ್ಣನ ಪ್ರೇಯಸಿ, ರಾಧಾಗಂತೂ ಸಾವೇ ಸಂಭವಿಸುತ್ತಿರುವಂತೆ ತೋರಿತು. ಅವರೆಲ್ಲರಿಗೂ ಅಕ್ರೂರ ತನ್ನ ಬ್ರಹ್ಮಜ್ಞಾನದಿಂದ ಕೃಷ್ಣನನ್ನು ಕೆಲ ದಿನಗಳವರೆಗೆ ಮರೆತಿರಲು ಸಾಧ್ಯ ಆಗುವ ರೀತಿಯಲ್ಲಿ ಏನೇನೋ ಉಪದೇಶಿಸಿದ. ಆದರೆ ಅವರ ವಿರಹ ದುಃಖವನ್ನು ಹೋಗಲಾಡಿಸಲು ಅವನಿಂದ ಸಾಧ್ಯ ಆಗಲಿಲ್ಲ.

ಕಂಸನ ರಾಜಾಜ್ಞೆಯನ್ನು ಉಲ್ಲಂಘಿಸಿದರೆ ಬೃಂದಾವನದಲ್ಲಿ ಇರುವವರೆಲ್ಲರಿಗೂ ಕೇಡು ತಪ್ಪದು, ಎಂಬ ವಿಷಯವನ್ನು ಗ್ರಹಿಸಿದ್ದ ನಂದಗೋಪ ಒಲ್ಲದ ಮನದಿಂದಲೇ ಕೃಷ್ಣಬಲರಾಮರನ್ನು ಅಕ್ರೂರನೊಂದಿಗೆ ಕಳುಹಿಸಿಕೊಡಲು ಒಪ್ಪಲೇಬೇಕಾಯಿತು. ಅವರೆಲ್ಲರನ್ನೂ ತನ್ನ ಮುಗ್ಧ ಹಾಗೂ ಸಮಯೋಚಿತ ಮಾತುಗಳಿಂದ ಸಮಾಧಾನಪಡಿಸುತ್ತಾ ಕೃಷ್ಣ ಬಲರಾಮರು ಬೃಂದಾವನದಿಂದ ಮಥsÀುರೆಗೆ ಪ್ರಯಾಣ ಬೆಳೆಸಿದರು. ಕೃಷ್ಣನು ತಮ್ಮನ್ನು ಅಗಲಿ ಹೋಗುತ್ತಿರುವುದನ್ನು ಕಂಡು, ಎಲ್ಲರೂ ಕಣ್ಣೀರ ಕೋಡಿ ಹರಿಸತೊಡಗಿದರು. ಮೃತ್ಯುದೇವತೆಯಂತೆ ಈ ಅಕ್ರೂರ ಯಾಕೆ ಬಂದನೋ! ಎಂದು ಅವನನ್ನು ಮನಸಾರೆ ಬಯ್ಯತೊಡಗಿದರು. ಮತ್ತೆ ಕೃಷ್ಣನನ್ನು ಕಾಣುವ ಭಾಗ್ಯ ನಿಜಕ್ಕೂ ತಮಗಿದೆಯೇ?! ಎಂದು ಕನವರಿಸತೊಡಗಿದರು. ಅಂತೂ ರಥದಲ್ಲಿ ಕುಳ್ಳಿರಿಸಿಕೊಂಡು, ಅಕ್ರೂರ ಅವರೀರ್ವರೊಂದಿಗೆ ಮಥsÀುರಾನಗರದ ಕಡೆ ಪ್ರಯಾಣ ಬೆಳೆಸಿದ. ರಥವು ಕಣ್ಮರೆ ಆಗುವವರೆಗೂ, ರೆಪ್ಪೆ ಹೊಡೆಯದೆ, ವಿವಶರಾಗಿ ನೋಡುತ್ತಿದ್ದ. ಆನಂತರ ಭಾರದ ವ್ಯಥಿತ ಹೃದಯದೊಂದಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಮರಳಿದರು.

ರಥ ಮಥsÀುರಾನಗರದ ಹೆಬ್ಬಾಗಿಲ ಬಳಿ ಬಂತು. ಅಕ್ರೂರನು ಕೃಷ್ಣ ಬಲರಾಮರೊಂದಿಗೆ ಇಳಿಯುತ್ತಿದ್ದಂತೆ, ಮಥsÀುರೆಯ ಪುರಜನರು ಅವರನ್ನು ಮುತ್ತಿದರು. ಜಯಘೋಷ ಮಾಡಿದರು. ಸುಮಂಗಲೆಯರು ಶುಭಸೂಚಕ ರೀತಿಯಲ್ಲಿ ಆರತಿ ಬೆಳಗಿದರು. ಜನಜಂಗುಳಿಯಲ್ಲಿ ಮುಂದೆ ಮುಂದೆ ಬರುತ್ತಿದ್ದಂತೆ ಸುಧಾಮ ಎಂಬ ಮಾಲೆಗಾರ ಅವರನ್ನು ತಮ್ಮ ಮನೆಗೆ ಕರೆದೊಯ್ದು, ಆದರದ ಆತಿಥ್ಯ ನೀಡಿದ. ಅಲ್ಲಿಗೆ ಒಬ್ಬಳು ಕುಬ್ಜೆ ಆನಂದದಿಂದ ಬಂದು, ಅವರಿಗೆ ಶ್ರದ್ಧೆ ಭಕ್ತಿಯಿಂದ ನಮಸ್ಕರಿಸಿದಳು. ಕೃಷ್ಣ ಅವಳ ಗೂನು ಬೆನ್ನಿನ ಮೇಲೆ ಕೈ ಆಡಿಸುತ್ತಿದ್ದಂತೆ ಅವಳ ಗೂನು ಮಾಯವಾಯಿತು. ಅವಳಿಗಾದ ಆನಂದ ಅಷ್ಟಿಷ್ಟಲ್ಲ. ಕೃಷ್ಣಬಲರಾಮರನ್ನು ಕಂಸನ ಆಜ್ಞೆಯಂತೆ ಒಂದು ಸುಸಜ್ಜಿತ ಬಿಡಾರದಲ್ಲಿ ಬಿಡಲಾಯಿತು. ಅಂದುರಾತ್ರಿ ಕಂಸ ಸಾಕಷ್ಟು ಮಂದಿ ಮಲ್ಲರನ್ನೂ, ಹುಡುಗರನ್ನೂ ಬಿಡಾರದೊಳಗೆ ಅಣ್ಣತಮ್ಮಂದಿರೀರ್ವರನ್ನು ಕೊನೆಗಾಣಿಸಲು ಬಿಟ್ಟ. ಆದರೇ ಕೆಲವೇ ಕ್ಷಣದಲ್ಲಿ ಅವರೆಲ್ಲರೂ ಕೃಷ್ಣಬಲರಾಮರಿಂದ ಹತರಾದ ಸುದ್ದಿ ಬಂತು.

ಕಂಸನಿಗೆ ನಿದ್ದೆಯೇ ಬರಲಿಲ್ಲ. ಮರುದಿನ ಕೃಷ್ಣಬಲರಾಮರನ್ನು ತನ್ನ ಒಡ್ಡೋಲಗಕ್ಕೆ ಕರೆಸಿದ. ಅವರು ಬರುತ್ತಿದ್ದಂತೆ ಕುವಲಯಾ ಪೀಡ ಎಂಬ ಮದ್ದಾನೆಯನ್ನು ಅವರ ಮೇಲೆ ಬಿಡಿಸಿದ. ಕೃಷ್ಣ ಬಲರಾಮರು ಮಾವಟಿಗರನ್ನು ಸದೆಬಡಿದರು. ಆನೆಯ ಸೊಂಡಲನ್ನೇ ಕತ್ತರಿಸಿಹಾಕಿದರು. ಅದು ಘೀಳಿಡುತ್ತಾ ಕೆಳಗುರುಳಿ ಸತ್ತುಬಿದ್ದಿತು. ಈಗ ಕಂಸನ ಆಜ್ಞೆಯಂತೆ ಚಾಣೂರ-ಮುಷ್ಟಿಕರೆಂಬ ಮಲ್ಲರು ಈರ್ವರನ್ನೂ ಮಲ್ಲಯುದ್ಧಕ್ಕೆ ಆಹ್ವಾನಿಸಿದರು. ಒಂದೊಂದೇ ಗುದ್ದಿಗೆ ಕೃಷ್ಣಬಲರಾಮರಿಂದ ಅವರು ಬಾಯಲ್ಲಿ ರಕ್ತ ಕಾರುತ್ತಾ ಸತ್ತು ಬಿದ್ದರು. “ಅವರಿಬ್ಬರನ್ನೂ ಕೊಲ್ಲಿರಿ” ಎಂದು ಮೃತ್ಯುಭೀತಿಯಿಂದ ಕಂಸ ಅಬ್ಬರಿಸಿದ. ಕೃಷ್ಣ ಒಂದೇ ನೆಗೆತಕ್ಕೆ ಕಂಸನು ಕುಳಿತಿದ್ದ ಸಿಂಹಾಸನದ ಮೇಲೆ ಸಿಂಹದ ಮರಿಯಂತೆ ಹಾರಿದ. ಕಂಸನ ತಲೆಗೆ ಗುದ್ದಿದ. ಕಂಸ ಪ್ರಜ್ಞಾಹೀನನಾದ. ಅವನ ಕರುಳನ್ನು ಬೊಗೆದೆಸೆದ. ಅವನನ್ನು ರಕ್ಷಿಸಲು ಬಂದ ಸೋದರರನ್ನು ಬಲರಾಮ ಕೊಂದು ಹಾಕಿದ. ಸೆರೆಮನೆಯಲ್ಲಿದ್ದ ಉಗ್ರಸೇನ ಮಹಾರಾಜನನ್ನು ಬಿಡುಗಡೆ ಮಾಡಿ ಕೃಷ್ಣನೇ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಎಲ್ಲರ ಪ್ರಶಂಸೆ ಹಾಗೂ ಹಾರೈಕೆಯ ಹರ್ಷದೊಂದಿಗೆ ಕೃಷ್ಣಬಲರಾಮರು ಬೃಂದಾವನಕ್ಕೆ ಹಿಂದಿರುಗಿದರು.