ಅಂಬರೀಶ
ಭಾರತದಲ್ಲಿ ಧರ್ಮಶಾಸ್ತ್ರವನ್ನು ಸೃಷ್ಠಿಸಿದ ಮಹಾನ್ ಸಾರ್ವಭೌಮ, ಮನು ಚಕ್ರವರ್ತಿ, ವೈವಸ್ವತ ಮನು ಎಂದು ಅಂದಿನಿಂದ ಇಂದಿನವರೆಗೂ ವಿಖ್ಯಾತನೆನಿಸಿದ್ದಾನೆ. ಈತನ ಮೊಮ್ಮಗನೇ ಅಂಬರೀಶ. ಭರತಖಂಡದ ಪುರಾಣ ಕಥೆಗಳಲ್ಲಿ ಪರಮ ಭಾಗವತೋತ್ತಮ ಎಂದು ಹೆಸರು ಪಡೆದವನು.
ರಾಜಧರ್ಮದ ಸನ್ಮಾರ್ಗವನ್ನು ಸ್ಪಷ್ಟರೂಪದಲ್ಲಿ ಅರ್ಥಮಾಡಿಕೊಂಡಿದ್ದವನು. ವಿಷ್ಣು ಪರಮಾತ್ಮನ ಪರಮಭಕ್ತ. ರಾಜರ್ಷಿ ಎನಿಸಿಕೊಳ್ಳಲು ಇವನಲ್ಲಿ ಸಂಪೂರ್ಣ ಅರ್ಹತೆ ಇತ್ತು. ಶ್ರೀಹರಿಯ ಧ್ಯಾನದಲ್ಲಿ ಅನವರತವೂ ಇದ್ದರೂ, ಪ್ರಜಾಪಾಲನೆಯಲ್ಲಿ ಕಿಂಚಿತ್ತೂ ಚ್ಯುತಿ ಉಂಟಾಗದ ರೀತಿಯಲ್ಲಿ ರಾಜ್ಯಭಾರ ನಡೆಸುತ್ತಿದ್ದವನು. ಆದ್ದರಿಂದಲೇ ಈತನ ಆಡಳಿತದ ಕಾಲ ಸುಭಿಕ್ಷಕಾಲ ಎನಿಸಿತ್ತು. ಮುನಿಜನರೆಲ್ಲರ ಗೌರವಾದರ ಹಾಗೂ ಮನ್ನಣೆಯನ್ನು ಗಳಿಸಿದ್ದವನು. ತನ್ನ ಭಕ್ತನಾದ ಈತನ ನೆರವಿಗಾಗಿ ಭಕ್ತರ ಭಕ್ತ ಎನಿಸಿದ, ವೈಕುಂಠ ಪತಿ ಎನಿಸಿದ ವಿಷ್ಣು ಪರಮಾತ್ಮನು ಅಂಬರೀಶ ರಾಜನಿಗೆ ತನ್ನ ಸುದರ್ಶನ ಚಕ್ರವನ್ನೇ ಆತ್ಮರಕ್ಷಣೆಯ ರೂಪದಲ್ಲಿ ನೀಡಿದ್ದ.
ಅಂಬರೀಶ ದೈವಭಕ್ತನೂ ಹೌದು, ಮಹಾಶೂರಾಗ್ರಣಿಯೂ ಹೌದು. ತನ್ನ ಆಡಳಿತದ ಅವಧಿಯಲ್ಲಿ ಸಾಕಷ್ಟು ಯಾಗಗಳನ್ನು ನಿರ್ವಿಘ್ನವಾಗಿ ಮಾಡಿ ಮುಗಿಸಿದ್ದ. ಈತನಿಗೆ ಏಕಾದಶಿ ವ್ರತದ ಆಚರಣೆಯ ಬಗ್ಗೆ ಅತಿ ಆಸಕ್ತಿ ಹಾಗೂ ನಿಷ್ಠೆ-ನಿಯಮಗಳಿಂದಲೇ ಈ ವ್ರತವನ್ನು ನಿರ್ವಿಘ್ನವಾಗಿ ಮಾಡಿ ಮುಗಿಸುತ್ತಿದ್ದ. ಈ ವ್ರತದ ಮಹಿಮೆಯಿಂದ ತಾನೇ ಅಲ್ಲದೆ, ತನ್ನ ಪ್ರಜೆಗಳೂ ಸಹ ಮುಕ್ತಿ ಪದವಿಯನ್ನು ಪಡೆಯುವರೆಂಬ ಧಾರ್ಮಿಕ ನಂಬಿಕೆ, ಈ ರಾಜನದು. ಒಂದು ಬಾರಿ ಅಂಬರೀಶ ಮಹಾರಾಜನು ಏಕಾದಶಿ ವ್ರತವನ್ನು ಸಾಂಗೋಪಾಂಗವಾಗಿ ಪೂರೈಸಿ, ಮರುದಿನ ಅಂದರೆ ದ್ವಾದಶಿಯ ಪ್ರಾತಃಕಾಲ ಪಾರಣೆ (ಊಟ)ಗಾಗಿ ಸಿದ್ಧಗೊಳಿಸುತ್ತಿದ್ದ ಸಮಯದಲ್ಲಿ, “ಕೋಪ”ದ ಪುನರಾವತಾರ ಎನಿಸಿದ ದೂರ್ವಾಸ ಮಹರ್ಷಿಗಳು ಅಲ್ಲಿಗೆ ಆಗಮಿಸಿದರು. ಅವರನ್ನು ಮಹಾರಾಜ ಗೌರವಾದರದಿಂದ ಬರಮಾಡಿಕೊಂಡು ಭಕ್ತಿ ಹಾಗೂ ನಿಷ್ಠೆಯಿಂದ ಪಾದಗಳನ್ನು ತೊಳೆದ. ಅತಿಥಿ ಸತ್ಕಾರವನ್ನು ಸ್ವೀಕರಿಸಲು ವಿನಯದೊಂದಿಗೆ ಪ್ರಾರ್ಥಿಸಿದ. ದೂರ್ವಾಸ ಮುನಿಗಳು ತಮ್ಮ ಸ್ನಾನಾದಿಗಳನ್ನು ಬೇಗ ಮುಗಿಸಿ, ಮರಳಿ ಬರಲು ಆಶ್ವಾಸನೆ ನೀಡುತ್ತಾ, ಯಮುನಾ ನದಿಗೆ ತೆರಳಿದರು.
ಹಿಂದಿನ ದಿನ ಉಪವಾಸವಿದ್ದು ತೀರಾ ನಿಶ್ಯಕ್ತನಾಗಿದ್ದ ರಾಜನಿಗೆ, ಪಾರಣೆಯ ಹೊತ್ತು ಮೀರುತ್ತಿದ್ದು, ಸಕಾಲಕ್ಕೆ ತನ್ನ ಭಕ್ತಬಾಂಧವರೊಂದಿಗೆ ಪಾರಣೆ ಮಾಡಿ ಮುಗಿಸದಿದ್ದರೆ, ವ್ರತಭಂಗ ಆಗುವ ಭಯವೂ ಉಂಟಾಗತೊಡಗಿತು. ಆದರೆ ದೂರ್ವಾಸರನ್ನು ಬಿಟ್ಟು, ಪಾರಣೆ ಮಾಡುವಂತೆಯೂ ಇಲ್ಲ. ಉಭಯಸಂಕಟದಲ್ಲಿ ತೊಳಲಾಡುತ್ತಾ, ಪರಿಹಾರಕ್ಕಾಗಿ ವ್ರತದ ಸಮಯದಲ್ಲಿ ನೆರೆದಿದ್ದ ಬ್ರಾಹ್ಮಣೋತ್ತಮರ ಸಲಹೆ ಕೇಳಿದ.
ಅವರೆಲ್ಲರೂ ಪಾರಣೆಯ ಸಮಯದಲ್ಲಿ, ಇಂತಹ ಸಂದರ್ಭ ಸಂಭವಿಸಿದಾಗ ಕೇವಲ ನೀರು ಕುಡಿದು, ಆನಂತರ ಸಾವಕಾಶವಾಗಿ ಪಾರಣೆಯ ಕಾರ್ಯವನ್ನು ಮುಗಿಸಬಹುದೆಂದು ಸಲಹೆ ನೀಡಿದರು. ವಿಪ್ರೋತ್ತಮರ ಮಾತನ್ನು ವೇದಕ್ಕೆ ಸಮಾನವೆಂದು ಪರಿಗಣಿಸಿದ್ದ ಅಂಬರೀಶ ಮಹಾರಾಜ ಅದರಂತೆ ಜಲಪಾನ ಮಾಡಿ, ದೂರ್ವಾಸರು ಸ್ನಾನಾದಿಗಳನ್ನು ಮುಗಿಸಿ, ಮರಳಿ ಹಿಂದಿರುಗುವುದಕ್ಕಾಗಿಯೇ ಎದುರು ಕಾಯುತ್ತಾ ಕುಳಿತ. ಹಿಂದಿರುಗಿದ ದೂರ್ವಾಸರಿಗೆ ಮಹಾರಾಜನ ಜಲಪಾನದ ಸುದ್ದಿ ತಿಳಿಯಿತು. ಮಹಾರಾಜನ ಬಗ್ಗೆ ಕೆಂಡ ಮಂಡಲ ಆದರು. ಕಣ್ಣುಗಳಲ್ಲಿ ಕಿರಿಕಾರುತ್ತಾ, ಅಬ್ಬರಿಸಿದರು:
“ಮಹಾರಾಜ, ಅತಿಥಿಯು ಹಸಿದಿರುವಾಗ ಈ ರೀತಿ ಪಾರಣೆ ಮಾಡುವುದು ಯಾವ ರಾಜಧರ್ಮ? ನಿನ್ನಂತಹ ವಿಷ್ಣುಭಕ್ತನಿಗೆ ಈ ರೀತಿಯ ಕೃತ್ಯ ಸಮಂಜಸವೇ? ಇಂತಹ ದುರಹಂಕಾರಕ್ಕೆ ತಕ್ಕ ಶಿಕ್ಷೆಯನ್ನು ನಾನು ವಿಧಿಸಲೇಬೇಕು” ಅನ್ನುತ್ತಾ ಕ್ರೋಧದ ಪರಮಾವತಾರವನ್ನು ತಾಳಿ, ಸಮ್ಮುಖದಲ್ಲಿ ನಿಂತಿದ್ದ ಅಂಬರೀಶನನ್ನು ಕಾಲಿನಿಂದ ಒದೆದು ನೂಕಿದರು. ತಮ್ಮ ಜಟೆಯನ್ನು ಕಿತ್ತೆಸೆದರು. ಆ ಕೂಡಲೇ ಕೃತ್ಯೆ ಎಂಬ ಹೆಸರಿನ ವಿಕರಾಳ ರೂಪಿಣಿ ಕಾಣಿಸಿಕೊಂಡಳು. ದೂರ್ವಾಸರು ಅಂಬರೀಶನನ್ನು ಕೊಂದು ಮುಗಿಸಲು ಅವಳಿಗೆ ಆಜ್ಞಾಪಿಸಿದರು. ದಿಕ್ಕರಿಯದಂತಾದ ಅಂಬರೀಶ ಮನದಲ್ಲಿಯೇ ತನ್ನ ಆರಾಧ್ಯದೇವನಾದ ವಿಷ್ಣು ಪರಮಾತ್ಮನನ್ನು ಶ್ರದ್ಧೆಭಕ್ತಿಯಿಂದ ಪ್ರಾರ್ಥಿಸತೊಡಗಿದ.
ಭಕ್ತಪರಾಧೀನ ಎನಿಸಿದ ಶ್ರೀಹರಿಯು ತನ್ನ ಭಕ್ತನ ಮೊರೆಯನ್ನು ಆಲಿಸಿ, ಅವನ ರಕ್ಷಣೆಗಾಗಿ ತನ್ನ ಚಕ್ರಕ್ಕೆ ಆಜ್ಞೆ ನೀಡಿದ. ಕೂಡಲೇ ಅದು ಗಿರ್ರನೆ ತಿರುಗುತ್ತಾ ಕೃತ್ಯೆಯ ಕಡೆ ಧಾವಿಸಿತು. ಅವಳ ಕುತ್ತಿಗೆಯನ್ನು ನೆರೆದಿದ್ದವರೆಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದಂತೆ ಕತ್ತರಿಸಿಹಾಕಿತು. ಭೀಕರ ಚೀತ್ಕಾರದೊಂದಿಗೆ ಅವಳ ದೇಹ ಕೆಳಗುರುಳಿತು.
ಅಷ್ಟಕ್ಕೆ ಚಕ್ರ ಸುಮ್ಮನಾಗಲಿಲ್ಲ. ಎಂದಿನಂತೆ ಗಿರ್ರನೆ ತಿರುಗುತ್ತಾ ದೂರ್ವಾಸ ಮುನಿಯ ಕಡೆ ಧಾವಿಸಿತು. ಬೆಚ್ಚಿ-ಬೆದರಿದ ಮುನಿ ಭಯ ಹಾಗೂ ಗಾಬರಿಯೊಂದಿಗೆ ಓಡೋಡುತ್ತಾ, ಬ್ರಹ್ಮನ ಬಳಿಗೆ ಬಂದರು. ಬ್ರಹ್ಮನ ಅಭಯ ದೊರೆಯದೆ, ಪರಮೇಶ್ವರನ ಬಳಿಗೆ ಧಾವಿಸಿದರು. ಅಲ್ಲೂ ಏನೂ ರಕ್ಷಣೆ ದೊರೆಯದೆ, ವೈಕುಂಠದಲ್ಲಿದ್ದ ವಿಷ್ಣು ಪರಮಾತ್ಮನ ಬಳಿಗೆ ಏದುಸಿರು ಬಿಡುತ್ತಾ ಬಂದರು. ಪರಮಾತ್ಮನ ಪಾದಾರವಿಂದಗಳ ಮೇಲೆ ಅಡ್ಡಬಿದ್ದು, ‘ತ್ರಾಹಿ, ತ್ರಾಹಿ’ ಅನ್ನುತ್ತಾ ಆಲಾಪಿಸತೊಡಗಿದರು.
ಶ್ರೀಹರಿಯಾದ ವಿಷ್ಣು ಮುನಿಯನ್ನು ಸಮಾಧಾನಪಡಿಸುತ್ತಾ ಏನೂ ತಿಳಿಯದವನಂತೆ ನಟಿಸುತ್ತಾ ಹೇಳಿದ:
“ಭಕ್ತಪರಾಧೀನ ನಾನು. ನನ್ನ ಭಕ್ತನಿಗೆ ತೊಂದರೆ ಸಂಭವಿಸಿದಾಗ ರಕ್ಷಣೆಯ ಭಾರ ಮಾತ್ರ ನನ್ನದು. ಈಗ ನೀನು ಎಸಗಿರುವ ಮಹಾಪರಾಧಕ್ಕಾಗಿ, ಅಂಬರೀಶನ ಬಳಿಗೇ ತೆರಳು. ಆತನಲ್ಲಿ ಕ್ಷಮೆ ಯಾಚಿಸು” ಅನ್ನುತ್ತಿದ್ದಂತೆ ದೂರದಲ್ಲಿ ಚಕ್ರ ಗಿರ್ರನೆ ತಿರುಗುತ್ತಾ ಬರುತ್ತಿರುವುದು ಗೋಚರಿಸಿತು. “ಸತ್ತೆನೋ-ಕೆಟ್ಟೆನೋ!” ಎಂದು ಕೂಗಿಡುತ್ತಾ, ಹಾವಿನ ಹೆಜ್ಜೆಯೊಂದಿಗೆ ದೂರ್ವಾಸ ಮುನಿ ಅಂಬರೀಶ ಮಹಾರಾಜನ ಬಳಿಗೆ ಧಾವಿಸಿ ಬಂದ. ಅವನ ಪಾದಗಳ ಮೇಲೆ ಬಿದ್ದು ಉರುಳಾಡುತ್ತಾ ಎದ್ದು ನಿಂತ. ರಕ್ಷಣೆಗಾಗಿ ಗೋಗರೆದ. ಶರಣಾಗತರನ್ನು ರಕ್ಷಿಸುವುದು ರಾಜನ ಧರ್ಮ ತಾನೇ?
ಕೂಡಲೇ ದೂರ್ವಾಸಮುನಿಯನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಿಕೊಂಡು ಸ್ವತಃ ರಭಸದಿಂದ ತಿರುಗುವ ಶಬ್ದದೊಂದಿಗೆ ಬರುತ್ತಿದ್ದ ಚಕ್ರದ ಎದುರು ಕೈ ಜೋಡಿಸಿಕೊಂಡು ಶಿರಒಡ್ಡಿದ.
ವಿಷ್ಣುಚಕ್ರ ಈಗ ಸ್ತಬ್ಧ ರೀತಿಯಿಂದ ಹಾಗೆಯೇ ನಿಂತಿತು. ಅರೆಕ್ಷಣದ ನಂತರ ವಿಷ್ಣುಪರಮಾತ್ಮನ ಬಳಿಗೇ ಹಿಂದಿರುಗಿತು.
ಈಗ ದೂರ್ವಾಸರಿಗೆ ವಿಷ್ಣುಭಕ್ತನ ಮಹಿಮೆಯ ಅರಿವಾಯಿತು. ನೆಮ್ಮದಿಯ ಉಸಿರು ಬಿಡುತ್ತಾ, ಪ್ರಾಣಭಯದಿಂದ ಪಾರಾದವನಂತೆ ಅಂಬರೀಶ ಮಹಾರಾಜನ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾ, ಮುಖದ ಮೇಲೆ ಸುರಿಯುತ್ತಿದ್ದ ಬೆವರು ಹನಿಗಳನ್ನು ಒರೆಸಿಕೊಂಡರು. ತಮ್ಮ ಅವಿವೇಕದ ನಡವಳಿಕೆಗಾಗಿ ನಾಚುತ್ತಾ, ಅಂಬರೀಶ ರಾಜನ ಆತಿಥ್ಯವನ್ನು ಪ್ರೀತ್ಯಾದರದೊಂದಿಗೆ ಸ್ವೀಕರಿಸಿ, ರಾಜನನ್ನು ಮನಸಾರೆ ಹಾರೈಸುತ್ತಾ, ತಮ್ಮ ದಾರಿ ಹಿಡಿದರು.