ಶ್ರೀನಿವಾಸನು ಹೆಂಡತಿ ಕೃಪೆಯಿಂದ ಪುರಂದರದಾಸನಾದನು
ಶ್ರೀನಿವಾಸನು ಒಬ್ಬ ವ್ಯಾಪಾರಿ. ಯಾರಿಗೂ ಒಂದು ಬಿಡಿಗಾಸು ದಾನ ಕೊಟ್ಟವನಲ್ಲ. ಹೀಗಾಗಿ ದೊಡ್ಡ ಶ್ರೀಮಂತನಾಗಿದ್ದ. ಅವನ ಪೂರ್ವಜನ್ಮದ ಪುಣ್ಯದಿಂದ ಅವನ ಹೆಂಡತಿ ಸಾಧ್ವಿ. ಅವಳ ಹೆಸರು ಸರಸ್ವತಿ, ಪತಿ ಜಿಪುಣ, ಪತ್ನಿ ತ್ಯಾಗಿ ಹೀಗೆ ನಡೆಯಿತು ಅವರ ಸಂಸಾರ. ಪೂರ್ವ ಜನ್ಮದ ಪುಣ್ಯದಿಂದ ಒಂದು ದಿವಸ ಅವನ ಅಂಗಡಿಗೆ ಒಬ್ಬ ಬಡ ಬ್ರಾಹ್ಮಣ, ಮಗನ ಉಪನಯನಕ್ಕೆ ಭಿಕ್ಷೆ ಬೇಡಲು ಬಂದ. ಯಾರಿಗೂ ಒಂದು ಕಾಸು ಕೊಟ್ಟವನಲ್ಲ. ಶ್ರೀನಿವಾಸ ಮುಂದಿನ ತಿಂಗಳು ಬಾ ಎಂದ. ಆ ಬ್ರಾಹ್ಮಣ ಒಂದು ತಿಂಗಳು ಬಿಟ್ಟು ಬಂದ. ಇನ್ನು ಒಂದು ತಿಂಗಳು ಬಿಟ್ಟು ಬಾ ಎಂದ. ಆ ಬ್ರಾಹ್ಮಣ ಹಾಗೇ ಮಾಡಿದ. ಹೀಗೆ 2-4 ಬಾರಿ ಓಡಾಡಿಸಿದ. ಕೊನೆಗೆ ಎಲ್ಲಿಯೋ ಬಿದ್ದಿದ್ದ ಒಂದು ಒಡಕು ಕಾಸು ಕೊಟ್ಟ.
ಆ ಬ್ರಾಹ್ಮಣ ಭಿಕ್ಷೆ ಬೇಡಲು ಬಂದವನಲ್ಲ. ಪ್ರಪಂಚದ ಜನರಿಗೆ ಇವನನ್ನು ಪರಿಚಯ ಮಾಡಿಸಲು ಬಂದವನು. ಆ ಬ್ರಾಹ್ಮಣ ನೇರವಾಗಿ ಅವರ ಮನೆಗೆ ಹೋದ. ಅವನ ಹೆಂಡತಿ ಸರಸ್ವತಿ ಸಾಕ್ಷಾತ್ ಸರಸ್ವತಿಯೇ. ಅವಳನ್ನು ಅಮ್ಮ ನನ್ನ ಮಗನ ಉಪನಯನ ಏನಾದರೂ ಸಹಾಯ ಮಾಡಿ ಎಂದು ಬೇಡಿದ.
ಆಕೆ ಯೋಚಿಸಿದಳು. ಏನು ಕೊಡುವುದು? ಪತಿಯ ಹೆದರಿಕೆ. ಆಕೆಯು ಯೋಚಿಸಿ ತನ್ನ ತವರು ಮನೆಯವರು ತನ್ನ ವಿವಾಹ ಕಾಲದಲ್ಲಿ ಕೊಟ್ಟ ಮೂಗುತಿಯನ್ನು ಆ ಬ್ರಾಹ್ಮಣನಿಗೆ ಕೊಟ್ಟು ನಿನ್ನ ಮಗನ ಉಪನಯನ ಮಾಡಿಕೊ ಎಂದಳು. ಆ ಬ್ರಾಹ್ಮಣನು ಸಂತೋಷದಿಂದ ಆ ಮೂಗುತಿಯನ್ನು ಶ್ರೀನಿವಾಸನ ಬಂಗಾರದ ಅಂಗಡಿಗೆ ತೆಗೆದುಕೊಂಡು ಹೋಗಿ ಅದನ್ನು ಅಡವಿಟ್ಟು ಹಣ ಕೇಳಿದನು. ಶ್ರೀನಿವಾಸ ನೋಡುತ್ತಾನೆ. ದಿನವೂ ತನ್ನ ಹೆಂಡತಿಯ ಮೂಗಿನಲ್ಲಿದ್ದ ಮೂಗುತಿ ಆಗಿದೆ. ಆಗ ಶ್ರೀನಿವಾಸನು ಆ ಮೂಗುತಿಯನ್ನು ಕಾಗದದಲ್ಲಿ ಸುತ್ತಿ ಅದನ್ನು ಒಂದು ಸಣ್ಣ ಪೆಟ್ಟಿಗೆಯಲ್ಲಿ ಹಾಕಿ, ಅದಕ್ಕೆ ಬೀಗ ಹಾಕಿ ಅದನ್ನು ಮತ್ತೊಂದು ದೊಡ್ಡ ಪೆಟ್ಟಿಗೆಯಲ್ಲಿ ಹಾಕಿ ಅದಕ್ಕೂ ಬೀಗ ಹಾಕಿ, ಮನೆಗೆ ಹೋಗಿ ಬರುತ್ತೇನೆಂದು ಮನೆಗೆ ಹೋದನು. ತನ್ನ ಹೆಂಡತಿಯನ್ನು ಅಬ್ಬರಿಸಿ ಕರೆದ. ಆಕೆ ಹೆದರಿದಳು. ತನ್ನನ್ನು ಹೊಡೆಯುತ್ತಾನೆ, ಬಡಿಯುತ್ತಾನೆ. ಭಗವಂತ ನಿನ್ನ ಪಾದವನ್ನು ಸೇರಿಸಿಕೊ ಎಂದು ಒಂದು ಕಪ್ಪಿನಲ್ಲಿ ವಿಷ ಹಾಕಿಕೊಂಡು ಕುಡಿಯಲು ಮೇಲೆ ಎತ್ತುತ್ತಾಳೆ.
ಅದರಲ್ಲಿ ‘ಟಡ್’ ಎಂಬ ಶಬ್ದವಾಯಿತು. ಕೈ ಕೆಳಗಿಳಿಸಿ ನೋಡುತ್ತಾಳೆ. ತನ್ನ ಮೂಗುತಿಯೇ ಆಗಿದೆ. ಅದನ್ನು ತೆಗೆದುಕೊಂಡು ತನ್ನ ಪತಿಗೆ ಕೊಡುತ್ತಾಳೆ. ಅವನಿಗೆ ಆಶ್ಚರ್ಯ, ಪರಮಾಶ್ಚರ್ಯ ಕೂಡಲೇ ಅಂಗಡಿಗೆ ಓಡುತ್ತಾನೆ. ಆ ಬ್ರಾಹ್ಮಣ ಅಲ್ಲಿಲ್ಲ. ಬೀಗ ತೆಗೆದು ನೋಡುತ್ತಾನೆ. ಆದರೆ ಆ ಮೂಗುತಿ ಇಲ್ಲವೆ ಇಲ್ಲ. ಅವನಿಗೆ ಮಹದಾಶ್ಚರ್ಯವಾಯಿತು. ಅಯ್ಯೋ! ನನ್ನ ಹೆಂಡತಿ ಅದೆಂಥ ಅದೃಷ್ಟವಂತೆ. ಆ ಬ್ರಾಹ್ಮಣನಿಲ್ಲ. ಅವಳೇ ನನ್ನ ಗುರು, ಅವಳೇ ನನ್ನ ದೇವರು. ಅವಳೇ ನನಗೆ ಈ ಸರ್ವಸ್ವವನ್ನು ಬಿಡುವಂತೆ ಮಾಡಿದವಳು. ಅಂತಹ ಭಾಗ್ಯವಂತಳು. ನನ್ನನ್ನು ದೇವರ ಕಡೆ ಮುಖ ಮಾಡಿದ ನನ್ನ ಗುರು ಎಂದು ಆ ಕೂಡಲೇ ಆ ಶ್ರೀನಿವಾಸನು ಮನೆ-ಮಠ-ಐಶ್ವರ್ಯ ಎಲ್ಲವನ್ನು ತ್ಯಾಗ ಮಾಡಿ, ಸನ್ಯಾಸಿಯಾಗಿ ಪುರಂದರ ದಾಸನಾದನು. ದಾಸ ಸಾಹಿತ್ಯದಲ್ಲಿ ಅಗ್ರಗಣ್ಯ. ಸಾವಿರಾರು ಕವನಗಳನ್ನು ರಚಿಸಿದನು. ಸನ್ಯಾಸಿ ಆದನು. ಅಂತಹ ಜಿಪುಣನನ್ನು ಸನ್ಯಾಸಿ ಮಾಡಿದ ಆ ಮಹಾಸತಿ ಸರಸ್ವತಿ ಎಂತಹ ಭಾಗ್ಯವಂತಳು. ಎಂತಹ ಆದರ್ಶಸತಿ, ಎಂತಹ ಆದರ್ಶ ಗುರು, ಅವಳು ನಿಜವಾಗಿ ಸರಸ್ವತಿಯೇ. ಇಂತಹ ಘನ ಗಾಂಭೀರ್ಯ ನಮ್ಮೆಲ್ಲ ಹೆಣ್ಣು ಮಕ್ಕಳಲ್ಲಿ ಉಕ್ಕಿ ಹರಿಯಲಿ.