ಸಾಧು ಸಂತರ ಕಥೆಗಳು

ಹೆಂಡತಿ ಕೃಪೆಯಿಂದ ತುಳಸೀದಾಸರು ರಾಮಾಯಣ ಬರೆದರು ಪತಿ ಪತ್ನಿಯರ ಪ್ರೇಮ ಅಗಾಧವಾದುದು. ರತ್ನಾವತಿಯನ್ನು ತುಳಸಿದಾಸರು ಮದುವೆಯಾದರು. ಹೆಂಡತಿಯ ಮೇಲೆ ಅವರಿಗೆ ಅಗಾಧ ಪ್ರೇಮ. ಆ ರತ್ನಾವತಿಯನ್ನು ಬಿಟ್ಟು ಅಗಲುತ್ತಿರಲಿಲ್ಲ. ಒಂದು ಸಾರಿ ರತ್ನಾವತಿಯು ತನ್ನ ಪತಿಗೆ ಹೇಳಿ ತವರು ಮನೆಗೆ ಹೋದಳು. ಆಕೆಯಲ್ಲಿಯೇ ಅಗಾಧವಾದ ಪ್ರೇಮ ಇಟ್ಟುಕೊಂಡಿರುವ ಪತಿಗೆ ನಿಲ್ಲಲಾಗಲಿಲ್ಲ. ಕೂಡಲೇ ರಾತ್ರಿಯಾದರೂ ಹೆಂಡತಿಯ ತವರು ಮನೆ ಕಡೆ ಹೊರಟ. ದಾರಿಯಲ್ಲಿ ಒಂದು ನದಿ ತುಂಬಿ ಹರಿಯುತ್ತಿದೆ. ಆಕೆಯ ಮೇಲಿನ ಮೋಹದಿಂದ ನದಿಯನ್ನು ಈಜಿ ದಾಟಿದ. ನೇರವಾಗಿ ಆಕೆಯ ಮಲಗುವ ಕೋಣೆಯ ಕಿಟಕಿ ತೆಗೆದಿತ್ತು. ನನಗಾಗಿ ಕಿಟಕಿ ತೆಗೆದಿದ್ದಾಳೆ ಎಂದು ನೋಡುತ್ತಾನೆ. ಒಂದು ಹಗ್ಗ ಇಳಿ ಬಿದ್ದಿದೆ. ನನಗಾಗಿ ನನ್ನ ಹೆಂಡತಿ ಹಗ್ಗ ಬಿಟ್ಟಿದ್ದಾಳೆಂದು ಆ ಹಗ್ಗ ಹಿಡಿದು ಎರಡನೇ ಮಹಡಿಗೆ ಹತ್ತಿದ. ಹೆಂಡತಿ ಮಲಗಿದ್ದಾಳೆ. ಒಳ ಹೊಕ್ಕ. ಆಕೆಗೆ ಎಚ್ಚರವಾಯಿತು. ತನ್ನ ಪತಿ ನನ್ನ ವ್ಯಾಮೋಹದಿಂದ ಬಂದಿರುವರೆಂದು ತಿಳಿದು ಆಕೆಗೆ ಬಹಳ ನೋವಾಯಿತು. ಆಗ ಅವನನ್ನು ಕುರಿತು ಹೇಳುತ್ತಾಳೆ ‘ನನ್ನ ಮೇಲಿರುವ ಈ ಮೋಹ, ಈ ಪ್ರೇಮ ಶ್ರೀರಾಮಚಂದ್ರನಲ್ಲಿದ್ದಿದ್ದರೆ ನೀವು ಸಾಕ್ಷಾತ್ ಶ್ರೀರಾಮಚಂದ್ರನೇ ಆಗುತ್ತಿದ್ದೀರಿ. ನೋಡಿ ನಿಮ್ಮ ವ್ಯಾಮೋಹ ಹಗ್ಗವೆಂದು ತಿಳಿದು ಹತ್ತಿದ್ದು ಹಗ್ಗವಲ್ಲ ಸರ್ಪ, ಈ ನಿಮ್ಮ ಪ್ರೇಮವನ್ನು ಶ್ರೀರಾಮನಲ್ಲಿಡಿ ಎಂಬ ಮಾತು ಅವನಿಗೆ ಶ್ರೀ ಗುರುವೇ ಹೇಳಿದಂತಾಯಿತು. ಅವನು ಆ ಕೂಡಲೇ ಆಕೆಯನ್ನು ಬಿಟ್ಟು ಹೊರಟುಹೋಗಿ ಜಗತ್ ಪ್ರಸಿದ್ಧಿ ತುಳಸಿದಾಸನಾಗಿ ರಾಮಾಯಣವನ್ನೇ ಬರೆದ. ಅದೇ ತುಳಸೀ ರಾಮಾಯಣವೆಂದು ಜಗತ್ಪ್ರಸಿದ್ಧವಾಗಿದೆ. ಇದೇ ರಾಮಚರಿತ ಮಾನಸವೆಂದು ಜಗತ್ಪ್ರಸಿದ್ಧವಾಗಿದೆ. ದೈವಿ ಸಂಪನ್ನಳಾದ ಸತಿ ಸಾಕ್ಷಾತ್ ಗುರು ಸ್ವರೂಪ. ಎಷ್ಟೋ ಜನ ಹೆಣ್ಣು ಮಕ್ಕಳು ತಮ್ಮ ಪತಿಯನ್ನು ಪರಮಾತ್ಮನ ಕಡೆ ತಿರುಗಿಸಿ ಲೋಕ ವಿಖ್ಯಾತರಾಗಿದ್ದಾರೆ.