ಉಪನಿಷತ್ತಿನ ಕಥೆಗಳು

ಯಾಜ್ಞವಲ್ಕ್ಯ ಹಾಗೂ ಮೈತ್ರೇಯಿ- ಸಂವಾದ ಭಾರತದ ಪಾರಮಾರ್ಥಿಕ ಚಿಂತನೆಯಲ್ಲಿ ಋಷಿ-ಮುನಿಯವರ ಪಾತ್ರ ಅತ್ಯದ್ಭುತ. ಇವರಲ್ಲಿ ಪುರುಷರೇ ಅಲ್ಲ, ಸ್ತ್ರೀಯರೂ ಅಸಾಮಾನ್ಯರೆನಿಸಿದ್ದರು. ಗಾರ್ಗಿ, ಮೈತ್ರೇಯಿ, ಕಾತ್ಯಾಯನಿಯ ಅಂತಹ ಬ್ರಹ್ಮಜ್ಞಾನಿಗಳೂ ಸಾಮಾನ್ಯರಲ್ಲ.
ಇವರಲ್ಲಿ ಮೈತ್ರೇಯಿಯ ಬ್ರಹ್ಮಜ್ಞಾನದ ಗರಿಮೆ ಗಣನೀಯವಾದುದು. ಭಾರತೀಯ ಮಹಿಳೆಯರೂ ಪುರುಷರಂತೆ ಆತ್ಮಜ್ಞಾನ ವಿಚಾರದಲ್ಲಿ ಹಿಂದಿಲ್ಲ ಎಂಬುದನ್ನು ತಮ್ಮ ಅಲೌಕಿಕ ಅದ್ಭುತ ಪ್ರತಿಭೆಯಿಂದ ತೋರಿಸಿಕೊಟ್ಟಿದ್ದಾರೆ.
ಮೈತ್ರೇಯಿ, ಗಾರ್ಗಿ ಇಬ್ಬರೂ ಬ್ರಹ್ಮಜ್ಞಾನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದ್ದ ಯಾಜ್ಞವಲ್ಕ್ಯರ ಶಿಷ್ಯೆಯರೇ. ಇವರಲ್ಲಿ ಮೈತ್ರೇಯಿ ಬ್ರಹ್ಮಜ್ಞಾನದಲ್ಲಿ ಪರಿಪಕ್ವತೆಯನ್ನು ಪಡೆಯುವ ಸಲುವಾಗಿಯೇ ಅವರಿಗೆ ನಿಷ್ಠಾವಂತ ಸೇವೆಯಲ್ಲಿದ್ದು, ಅವರ ಬ್ರಹ್ಮಜ್ಞಾನದ ತಪಶ್ಶಕ್ತಿಯನ್ನು ಶ್ರೀವೃದ್ದಿಗೊಳಿಸತೊಡಗಿದರು.
ಮೈತ್ರೇಯಿಯನ್ನು ಪತ್ನಿಯ ರೂಪದಲ್ಲಿ ಪಡೆಯುವ ಪೂರ್ವದಲ್ಲಿಯೇ ಕಾತ್ಯಾಯನಿಯನ್ನು ಪತ್ನಿಯಾಗಿ ಪರಿಗ್ರಹಿಸಿದ್ದರು. ಈರ್ವರೂ ಪತ್ನಿಯರೂ ತಮ್ಮ ಪತಿಯೊಂದಿಗೆ ಅವರ ತಪ-ಜಪಗಳಿಗೆ ಯಾವ ಅಡ್ಡಿ-ಆತಂಕವೂ ಉಂಟಾಗದಂತೆ ನೋಡಿಕೊಳ್ಳುತ್ತಿದ್ದರು. ಅದರಲ್ಲೂ ಮೈತ್ರೇಯಿ ತನ್ನ ಅಕ್ಕನಿಗಿಂತಲೂ ಈ ನಿಟ್ಟಿನಲ್ಲಿ ಒಂದು ಕೈ ಮೇಲೆ ಎನಿಸಿದ್ದಳು. ಕಾತ್ಯಾಯನಿ ಲೌಕಿಕ ಸುಖಗಳಲ್ಲಿಯೂ ಲುಪ್ತಳಾಗಿದ್ದಳು. ಆದರೆ ಮೈತ್ರೇಯಿ ಅಲೌಕಿಕ ಸುಖದಲ್ಲಿಯೇ ಮೈಮರೆತಿದ್ದಳು.
ಕಾಲಕ್ರಮದಲ್ಲಿ ಯಾಜ್ಞವಲ್ಕ್ಯರು ವಯಸ್ಸಾದಂತೆ ಗೃಹಸ್ಥಾಶ್ರಮವನ್ನು ಸಂಪೂರ್ಣವಾಗಿ ತೊರೆದು, ಸಂನ್ಯಾಸಾಶ್ರಮವನ್ನು ಸ್ವೀಕರಿಸಲು ನಿರತರಾದರು. ತಮ್ಮ ಮಾನಸಿಕ ವಿಚಾರವನ್ನು ಈರ್ವರು ಪತ್ನಿಯರಿಗೂ ವ್ಯಕ್ತಗೊಳಿಸುತ್ತಾ, ಅವರು ಹೇಳಿದರು:
“ನಾನೀಗ ಸಂನ್ಯಾಸಾಶ್ರಮದಲ್ಲಿಯೇ ಉಳಿದಿರುವ ಜೀವನದ ದಿನಗಳನ್ನು ಸದ್ವಿನಿಯೋಗಿಸಿಕೊಳ್ಳಲು ಬಯಸುತ್ತಿದ್ದೇನೆ. ನಿಮಗೆ ನನ್ನಿಂದ ದೂರ ಆದರೂ, ಏನೊಂದೂ ತೊಂದರೆ ಆಗದಿರಲೆಂದು, ನನ್ನಲ್ಲಿರುವ ಸಕಲ ಲೌಕಿಕ ಸಂಪತ್ತನ್ನೂ ಸಮವಾಗಿ ಹಂಚುತ್ತಿದ್ದೇನೆ. ನೀವಿಬ್ಬರೂ ಅದನ್ನು ಪಡೆದು, ನನ್ನ ಗೈರು ಹಾಜರಿಯಲ್ಲಿ ಮುಂದೆಯೂ ಅಕ್ಕ-ತಂಗಿಯರಂತೆ ಅನ್ಯೋನ್ಯತೆಯಿಂದ ಬಾಳುವಿರೆಂದು ಬಯಸಿದ್ದೇನೆ.”
ಕಾತ್ಯಾಯನಿ ಸಾಮಾನ್ಯ ಗೃಹಸ್ಥೆಯಂತೆ ಪತಿಯ ಮಾತುಗಳನ್ನು ಪರಿಪೂರ್ಣ ಮನದೊಂದಿಗೆ ಅನುಮೋದಿಸಿದಳು. ಆದರೆ ಮೈತ್ರೇಯಿಯಂತಹ ಬ್ರಹ್ಮಜ್ಞಾನ ಪಿಪಾಸುವಿಗೆ ಪತಿಯ ಮಾತುಗಳು ಪ್ರಿಯವೆನಿಸಲಿಲ್ಲ. ಅವಳು ವಾದಿಸುತ್ತಾ ಪ್ರಾರ್ಥಿಸಿ ಕೊಂಡಳು:
“ಭಗವಾನ್, ತಮ್ಮ ಯಾವುದೇ ಉದ್ದೇಶದ ದಾರಿಯಲ್ಲೂ ನಾನು ಅಡ್ಡ ನಿಲ್ಲುವವಳಲ್ಲ. ಆದರೆ ಈ ಲೌಕಿಕ ಸಂಪತ್ತು ನನಗೆ ಯಾವ ಸಂತೋಷವನ್ನೂ ನೀಡದು. ಇದು ಸಾಂಸಾರಿಕ ಬಂಧನವನ್ನು ಹೆಚ್ಚಿಸುತ್ತದೆ. ಅದರ ಸಲುವಾಗಿಯೇ ತಾನೇ, ನೀವೂ ಸಹ ಈಗ ಗೃಹಸ್ಥಾಶ್ರಮದಿಂದ ವಾನಪ್ರಸ್ತಾಶ್ರಮಕ್ಕೆ ಕಾಲಿಡಲು ಬಯಸುತ್ತಿರುವುದು? ನೀವು ನಮಗೆ ಕರುಣಿಸುತ್ತಿರುವ ಐಶ್ವರ್ಯವು ನಮಗೆ ಶಾಶ್ವತ ಸಂತೋಷವನ್ನು ನೀಡುತ್ತದೆಯೇ? ಈ ಕ್ಷಣಿಕ ಐಸಿರಿಯಿಂದ ನಮಗೆ ಅಮರತ್ವವು ಪ್ರಾಪ್ತವಾಗುವುದೇ? ಅದನ್ನು ಮೊದಲು ತಿಳಿಸಿ.”
ಯಜ್ಞವಲ್ಕ್ಯರು ತಮ್ಮ ಮಡದಿಯ ವಿವೇಕದ ದೂರಾಲೋಚನೆಯ ಮಾತುಗಳನ್ನು ಆಲಿಸಿ, ಆನಂದ ತುಂದಿಲರಾದರು. ಅವರು ಹೇಳಿದರು:
“ಮೈತ್ರೇಯಿ, ನಿನ್ನ ಮುಂದಿನ ಜೀವನ ಸುಖಮಯವೆನಿಸಲು ನಾನು ಹಂಚುತ್ತಿರುವ ಧನದಿಂದ ಪ್ರಾಪ್ತವಾಗದು.”
ಮೈತ್ರೀಯಿ ಅತಿ ವಿನಯದಿಂದ ಕೇಳಿಕೊಂಡಳು:
“ಸ್ವಾಮಿ, ಹಾಗಿದ್ದಲ್ಲಿ ನನಗೆ ಈ ನಶ್ವರ ಸಂಪತ್ತು, ನಶ್ವರ ದೇಹ ಬೇಡ; ಕೃಪೆ ಮಾಡಿ ಆತ್ಮಜ್ಞಾನ ಹಾಗೂ ಅಲೌಕಿಕ ಆನಂದವನ್ನು ನೀಡುವ ಬಹ್ಮಜ್ಞಾನವನ್ನೇ ಪಡೆಯಲು ನಿಮ್ಮೊಂದಿಗೆ ಬರಲು ಅನುಮತಿ ನೀಡಿ.”
ವಿಧಿ ಇಲ್ಲದೆ ಯಾಜ್ಞವಲ್ಕ್ಯರು ಮೈತ್ರೇಯಿಯನ್ನೂ ತಮ್ಮೊಂದಿಗೆ ಕೊಂಡೊಯ್ದರು. ಈರ್ವರೂ ಬ್ರಹ್ಮನನ್ನು ಕುರಿತು ಜೀವನದಲ್ಲಿ ಉಳಿದ ಕಾಲಾವಧಿಯಲ್ಲಿ ದೀರ್ಘ ತಪಸ್ಸಾನ್ನು ಆಚರಿಸುವುದರಲ್ಲಿಯೇ ಮುಳುಗಿದರು. ತನ್ನ ಪತಿಯೊಂದಿಗೆ ಮೈತ್ರೇಯಿ ತಾನೂ ಕೂಡ ಆತ್ಮೋದ್ಧಾರ ಮಾಡಿಕೊಂಡಳು.