ಉಪನಿಷತ್ತಿನ ಕಥೆಗಳು

ಇಂದ್ರನಿಗೆ ಉಮಾದೇವಿಯಿಂದ ಬ್ರಹ್ಮವಿದ್ಯೆ ಬೋಧೆ ಸಾಮವೇದದ ಕೇನೋಪನಿಷತ್ತಿನ ಒಂದು ಕಥೆ. ಒಂದು ಸಾರಿ ದೇವತೆಗಳಿಗೂ ರಾಕ್ಷಸರಿಗೂ ಭಾರಿಯಾದ ಯುದ್ಧವು ಆಗುತ್ತದೆ. ರಾಕ್ಷಸರು ಬಹಳ ಪ್ರತಾಪಶಾಲಿಗಳು. ಅವರೆಲ್ಲರೂ ದೇವಲೋಕಕ್ಕೆ ಲಗ್ಗೆ ಇಟ್ಟರು. ಆಗ ದೇವತೆಗಳೆಲ್ಲರೂ ಸೇರಿ ಪರಮಾತ್ಮನ ಧ್ಯಾನವನ್ನು ಮಾಡಿ ಮಂಗಳಾಚರಣೆಯನ್ನು ಮಾಡಿ ಪರಮಾತ್ಮನ ಮುಂದೆ ನಿಂತು ನಮ್ಮೆಲ್ಲರ ಪರವಾಗಿ ಯುದ್ಧ ಮಾಡಿ ನಮಗೆ ಜಯ ತಂದುಕೊಡಲಿ, ಎಂದು ಪರಮಾತ್ಮನನ್ನು ಮಂತ್ರ ಶಕ್ತಿಯ ಮೂಲಕ ಬೇಡಿ ರಾಕ್ಷಸರ ಮೇಲೆ ಯುದ್ಧಕ್ಕೆ ಹೋದರು. ಆಗ ದೇವತೆಗಳಿಗೆ ಜಯವಾಯಿತು. ರಾಕ್ಷಸರು ಓಡಿ ಹೋದರು.
ದೇವತೆಗಳೆಲ್ಲಾ ಸೇರಿ ತಮ್ಮ ಗೆಲುವಿಗೆ ಕಾರಣರಾದವರನ್ನು ಸಾಂತ್ವನ ಮಾಡುವುದಕ್ಕಾಗಿ ಸಭೆಯನ್ನು ಮಾಡಿದರು. ಇಂದ್ರನು ಅಧ್ಯಕ್ಶ. ಪಕ್ಕದಲ್ಲಿ, ಅಗ್ನಿ, ವಾಯು, ಯಮ, ನೈರುತ್ಯ ಎಲ್ಲರೂ ಕುಳಿತ್ತಿದ್ದಾರೆ. ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ಎಲ್ಲರೂ ಅವರಿಗೆ ಪುಷ್ಪ ಮಾಲೆ ಹಾಕುತ್ತಿದ್ದಾರೆ. ಆಗ ಆ ದೇವತೆಗಳಿಗೆಲ್ಲಾ ಅನಂದವೋ ಅನಂದ. ಯುದ್ಧ ಆಗುವವರೆಗೂ ಸಾಕ್ಷಾತ್ ಪರಮಾತ್ಮನೆ ನಮಗೆ ಜಯ ತಂದು ಕೊಡಬೇಕೆಂದು ಪ್ರಾರ್ಥನೆ ಮಾಡುತ್ತಿದ್ದರು. ಜಯ ಆದ ಮೇಲೆ ನಾವೇ ಯುದ್ಧ ಮಾಡಿದೆವೆಂದು, ನಾವೇ ಜಯಿಸಿದೆವೆಂದು ಅಹಂಕಾರ ಪಟ್ಟರು. ಎಲ್ಲರ ಅಹಂಕಾರವನ್ನು ಬಿಡಿಸುವ ದೇವತೆಗಳಿಗೆ ಅಹಂಕಾರ ಬಂದರೆ ಜಗತ್ತೆಲ್ಲವೂ ಧರ್ಮ ಭ್ರಷ್ಟವಾಗಿ ಹೋಗುತ್ತೆಂದು ತಿಳಿದು ಆ ಪರಮಾತ್ಮನೆ ಇವರಿಗೆ ಬುದ್ಧಿ ಕಲಿಸಲು ಅವರ ಸಭೆಯ ಮುಂದೆ ಬಹಳ ಎತ್ತರವಾದ ಆಕಾಶದವರೆಗೂ ಬೆಳೆದ “ಯಕ್ಷನಾಗಿ”ಎಲ್ಲರೂ ಹೆದರುವಂತೆ ನಿಂತುಕೊಂಡನು. ದೇವತೆಗಳೆಲ್ಲ್ಲಾ ಅದನ್ನು ನೋಡಿ ಪರಮಾತ್ಮನೆಂದು ಗುರುತಿಸಲಾಗದೆ, ಅಹಂಕಾರ ಇರುವುದರಿಂದ ಆ ರಾಕ್ಷಸರೇ ಬೇರೆ ವೇಷದಿಂದ ಬಂದಿದ್ದಾರೆಂದು ಎಲ್ಲರಿಗೂ ಹೆದರಿಕೆ ಹುಟ್ಟಿತು. ಯಾರಿಗೆ ಹೆದರಿಕೆ ಹುಟ್ಟಿದರೂ ಅದು ಅಹಂಕಾರದಿಂದಲೇ ಹುಟ್ಟಬೇಕು. ಯಾರು ನಿರಹಂಕಾರಿಯೋ ಅವನಿಗೆ ಅಭಯವೇ ಸೇನಾಧಿಪತಿ ಎಂದು ಗೀತೆಯು ದೈವೀ ಸಂಪತ್ತಿನಲ್ಲಿ ಹೇಳಲಾಗಿದೆ.
ಅಗ ಇಂದ್ರನು ವಾಯುವನ್ನು ಮಾತನಾಡಿಸಿ ಅದು ಏನು ನೋಡಿ ಬಾ ಎಂದು ಕಳಿಸಿಕೊಟ್ಟನು. ವಾಯು ಹೆದರಿಕೊಂಡು ಇಲ್ಲಿಯವರೆಗೆ ಹೊಗಳಿಸಿಕೊಂಡವನಾದ್ದರಿಂದ ಆ ಹೊಗಳಿಕೆಗಾಗಿ ಆ “ಯಕ್ಷನ” ಹತ್ತಿರ ಹೋದ. ಅವನಿಗೆ ಮಾತನಾಡಿಸುವ ಧೈರ್ಯವಾಗಲಿ ಸ್ಥೈರ್ಯವಾಗಲಿ ಯಾವುದೂ ಇಲ್ಲ. ಆಗ ಯಕ್ಷನೇ ದೂರದಲ್ಲಿರುವ ಆ ವಾಯುವನ್ನು ಕುರಿತು ನೀನು ಯಾರು? ಎಂದು ಕೇಳಿತು. ಆಗ ವಾಯು ಸ್ವಲ್ಪ ಧೈರ್ಯದಿಂದ ನಾನು ವಾಯು ಎಂದನು. “ನಿನ್ನಲ್ಲಿ ಏನು ಶಕ್ತಿಯಿದೆ” ಎಂದು ಕೇಳಿತು.. ಆಗ ವಾಯುವಿಗೆ ಇನ್ನೂ ಧೈರ್ಯ ಬಂದಿತು. ನಾನು ಒಂದೇ ಒಂದು ಕ್ಷಣದಲ್ಲಿ ಈ ಸರ್ವ ಜಗತ್ತನ್ನೇ ಹಾರಿಸಬಲ್ಲೆ ಎಂದ. ಹೋ.. ಹೋ.. ನೀನು ಅಷ್ಟೊಂದು ಶಕ್ತಿವಂತನೇ ಎಂದು ಯಕ್ಷನು “ಒಂದು ಹುಲ್ಲುಕಡ್ಡಿಯನ್ನು ಮುಂದೆ ಹಾಕಿ ಅದನ್ನು ಹಾರಿಸಲು ಹಾರಿಸು ಎಂದು ಹೇಳಿ ವಾಯುವಿಗೆ ಕೊಟ್ಟಂತಹ ಶಕ್ತಿಯನ್ನೇ ಭಗವಂತನು ಹಿಂದಕ್ಕೆ ತೆಗೆದುಕೊಂಡನು. ವಾಯುವಿಗೆ ಹುಲ್ಲುಕಡ್ಡಿಯನ್ನು ಅಲುಗಾಡಿಸಲೂ ಆಗಲಿಲ್ಲ.. ಆಗ ವಾಯು ತನ್ನ ಸ್ಥಳದಲ್ಲಿ ಹೋಗಿ ಕುಳಿತುಕೊಂಡನು. ಆಗ ಇಂದ್ರನು ಅಗ್ನಿಯನ್ನು ಕಳಿಸಿಕೊಟ್ಟ. ಅಗ್ನಿಯು ಹೋದನು. ನೀನು ಯಾರೆಂದು ಯಕ್ಷ ಕೇಳಿತು. ನಾನು ಅಗ್ನಿ, ನಿನ್ನಲ್ಲಿ ಯಾವ ಶಕ್ತಿಯಿದೆ ಎಂದು ಕೇಳಿತು. ಆಗ ಅಗ್ನಿಯು ಈ ಜಗತ್ತನ್ನೆಲ್ಲಾ ಒಂದೇ ಒಂದು ಕ್ಷಣದಲ್ಲಿ ಸುಟ್ಟು ಹಾಕಬಲ್ಲೆ ಎಂದನು. ಆಗ ಯಕ್ಷನು ಒಂದು ಹುಲ್ಲು ಕಡ್ಡಿಯನ್ನು ಹಾಗಿ ಈ ಹುಲ್ಲು ಕಡ್ಡಿಯನ್ನು ಸುಡು ಎಂದ. ಅಗ್ನಿಗೆ ಕೊಟ್ಟಂತಹ ದಹನ ಶಕ್ತಿಯನ್ನೇ ವಾಪಸ್ಸು ಪಡೆದ. ಅಗ್ನಿಗೆ ಆ ಹುಲ್ಲು ಕಡ್ಡಿಯನ್ನು ಸುಡಲು ಆಗಲಿಲ್ಲ. ಅಗ ಇಂದ್ರನಿಗೆ ಅಹಂಕಾರ ಇಳಿಯಿತು. ಅವನು ಯಕ್ಷವೇಷ ಧಾರಿಯಾದ ಪರಮಾತ್ಮನಿಗೆ ನಮಸ್ಕಾರ ಮಾಡಿದನು. ಆಗ ಯಕ್ಷ ಸ್ವರೂಪ ಹೋಗಿ ಉಮಾ (ಹೈಮಾವತಿ) ದೇವಿಯಾದಳು. ಆಕೆಯು ಇಂದ್ರಾದಿ ದೇವತೆಗಳಿಗೆಲ್ಲಾ ಬ್ರಹ್ಮಜ್ಞಾನವನ್ನು ಬೋಧಿಸಿದಳು.
ಎಲ್ಲಿ ಅಹಂಕಾರವಿರುತ್ತದೆಯೋ ಅಲ್ಲಿ ವಿದ್ಯೆಯು ದೊರೆಯಲಾರದು. “ವಿದ್ಯಾ ದದಾತಿ ವಿನಯೆ” ವಿದ್ಯೆಯು ವಿನಯವನ್ನು ತಂದುಕೊಡುತ್ತದೆ. “ವಿದ್ಯಾತುರಾಣಾಂ ನಸುಖಂ ನನಿದ್ರಾ” ವಿದ್ಯೆಯನ್ನು ಬಯಸುವವನು ಸುಖವನ್ನು, ನಿದ್ದೆಯನ್ನು ಬಯಸಬಾರದು ಎಂದು ಶಾಸ್ತ್ರ ಪುರಾಣಗಳಲ್ಲಿ ಹೇಳಿದೆ.