ನೀತಿ ಕಥೆಗಳು

ವಿದ್ವಾನ್ ಸರ್ವತ್ರ ಪೂಜ್ಯತೇ ನಮ್ಮ ಮೈಸೂರು ರಾಜ್ಯದಲ್ಲಿ ಹಿಂದಿನ ರಾಜರಾದ ನಲ್ಮಡಿ ಕೃಷ್ಣರಾಜ ಒಡೆಯರು ಒಂದು ಸಾರಿ ಜರ್ಮನಿ ದೇಶಕ್ಕೆ ಹೋಗಿದ್ದರು. ಜರ್ಮನ್ ದೇಶದಲ್ಲಿ ಸಂಸ್ಕೃತವು ಈಗಲೂ ಯಥೇಚ್ಚವಾಗಿ ಬಳಕೆಯಲ್ಲಿದೆ. ಅಲ್ಲಿಯ ಪಂಡಿತರೆಲ್ಲರೂ ಇವರನ್ನು ಕಾಣಲು ಬಂದರು. ಇವರನ್ನು ಪರಿಚಯ ಮಾಡಿಕೊಳ್ಳುತ್ತ, ನೀವು ಯಾವ ಊರಿನ ರಾಜರು? ಎಂದು ಕೇಳಿದರು. ಅದಕ್ಕೆ ಮಹಾರಾಜರು ನಮ್ಮದು ಮೈಸೂರು ರಾಜ್ಯ ಎಂದರು. ಅದಕ್ಕೆ ಮೈಸೂರು ರಾಜ್ಯ ಎಲ್ಲಿದೆ? ಭಾರತದ ಯಾವ ಭಾಗದಲ್ಲಿದೆ? ಎಂದು ಕೇಳಿದಾಗ, ಮಹಾರಾಜರು ತಮ್ಮ ರಾಜ್ಯವನ್ನು ಪರಿಚಯ ಮಾಡಿಕೊಡುತ್ತಾ, ಕಿಷ್ಕಿಂಧವೆಂದೂ, ವಿಜಯನಗರವೆಂದೂ, ಹಂಪಿ ಎಂದೂ, ದಕ್ಷಿಣ ಭಾರತ ಎಂದೂ ಹೇಳಿದರು. ಆದರೆ ಈ ವಿವರಣೆಯಿಂದ ಆ ಪಂಡಿತರಿಗೆ ಮೈಸೂರು ಪರಿಚಯ ಆಗಲೇ ಇಲ್ಲ. ಅದರಲ್ಲಿ ಒಬ್ಬ ಜರ್ಮನ್ ಪಂಡಿತನು “ಚಾಣಕ್ಯನ ಅರ್ಥಶಾಸ್ತ್ರಕ್ಕೆ ಭಾಷ್ಯವನ್ನು ಬರೆದ ರಾಮಸ್ವಾಮಿ ಊರೇ ನಿಮ್ಮದು? ಎಂದರು. ಹೌದು ಎಂದರು ಮಹಾರಾಜರು. ಆಗ ಮಹಾರಾಜರಿಗೆ ಆಶ್ಚರ್ಯವಾಯಿತು. ಜರ್ಮನ್ ಯಾತ್ರೆ ಮುಗಿಸಿಕೊಂಡು ವಾಪಸ್ ಮೈಸೂರಿಗೆ ಬಂದರು. ನೇರವಾಗಿ ರಾಮಸ್ವಾಮಿಯ ಮನೆಯನ್ನು ಹುಡುಕಿಕೊಂಡು ಹೊರಟರು. ಅವರಿಗೆ ಮನೆಯಿಲ್ಲ, ಸಣ್ಣದಾದ ಮುರಿದು ಹರಿದ ಚಿಕ್ಕ ಹೆಂಚಿನ ಮನೆ, ಹಾಸಿಗೆ,ಹೊದಿಕೆ ಯಾವುದೂ ಇಲ್ಲ. ಆಗ ಮಹಾರಾಜರು ರಾಮಸ್ವಾಮಿಯನ್ನು ಬಾಚಿ ತಬ್ಬಿಕೊಂಡು “ನಾನು ಮೈಸೂರಿಗೆ ಮಾತ್ರ ರಾಜ. ನೀನು ಇಡೀ ಪ್ರಪಂಚಕ್ಕೆ ರಾಜ” ನಿನ್ನಂತಹ ವಿದ್ಯಾವಂತನನ್ನು ಪಡೆದ ಮೈಸೂರೇ ಪವಿತ್ರವಾಗಿ ಹೋಯಿತು ಎಂದರು. ಆದ್ದರಿಂದ “ವಿದ್ವಾನ್ ಸರ್ವತ್ರ ಪೂಜ್ಯತೇ” ಅಂದರೆ ವಿದ್ವಾಂಸರು ಸರ್ವತ್ರ ಪೂಜನೀಯನೂ, ವಿದ್ಯೆಯು ಎಲ್ಲೆಲ್ಲಿಯೂ ಪೂಜ್ಯತೆಯನ್ನು ಉಂಟು ಮಾಡುತ್ತದೆ.