ಮಹಾಭಾರತ ಕಥೆಗಳು

ದುರ್ಯೋಧನನ ಅಂತಕರಣ ಶುದ್ಧಿ ಕುರುಕ್ಷೇತ್ರ ರಣರಂಗ, ಪಾಂಡವರು ಐದು ಜನ. ಉಳಿದಿದ್ದು ಮಾತ್ರ ದುರ್ಯೋಧನ ತೊಡೆ ಮುರಿದು ನರಳುತ್ತಾ ಬಿದ್ದಿದ್ದಾನೆ. ಶ್ರೀಕೃಷ್ಣನು ಇವನು ನನ್ನಿಂದ ಸಾಯುತ್ತಾನೆ. ಇವನಿಗೇನಾದರೂ ಉಪಕಾರ ಮಾಡಬೇಕೆಂದು ಶ್ರೀಕೃಷ್ಣ ಒಬ್ಬನೇ ಬಂದು ನರಳುತ್ತಾ ಬಿದ್ದಿರುವ ದುರ್ಯೋಧನನ ಮುಂದೆ ನಿಲ್ಲುತ್ತಾನೆ. ದುರ್ಯೋಧನ ಶ್ರೀಕೃಷ್ಣನನ್ನು ನೋಡಿದ. ದುರ್ಯೋಧನನ ಅಂತಃಕರಣ ಶುದ್ಧವಾಯಿತು. ತೊಡೆ ಮುರಿದ ನೋವು ಇಲ್ಲ. ಸೋತ ಸಂಕಟ ಇಲ್ಲ. ಎಲ್ಲರನ್ನು ಕಳೆದುಕೊಂಡ ದುಃಖ ಇಲ್ಲ. ಶ್ರೀಕೃಷ್ಣನನ್ನು ನೋಡಿದ ಆ ನೋಟ ಎಲ್ಲರಿಗೂ ಸಿಕ್ಕುವುದಿಲ್ಲ. ನೋವಿಲ್ಲದ ನೋಟ. ‘ದುರ್ಯೋಧನ ನೀನು ಸಾಯುತ್ತೀಯ. ಏನಾದರೂ ವರವನ್ನು ಬೇಡು ಕೊಡುತ್ತೇನೆ. ನೀನು ಧರ್ಮಹೀನನಾಗಿ ಪಾಂಡವರ ಮೇಲೆ ವೈರ ಮಾಡಿಕೊಂಡು ಎರಡೂ ಕಡೆ ನಷ್ಟವಾಯಿತು’ ಎಂದ ಶ್ರೀಕೃಷ್ಣ. ಆಗ ದುರ್ಯೋಧನನಿಗೆ ಅಂತಃಕರಣ ಶುದ್ಧಿಯಾಯಿತು. ನೋವು ನಿವಾರಣೆ ಆಯಿತು. ರಾಜ್ಯ ಕಳೆದುಕೊಂಡಿದ್ದು ಮರೆತುಹೋಯಿತು. ಆಗ ದುರ್ಯೋಧನ ಹೇಳುತ್ತಾನೆ.
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಂ ಜಾನಾಮಿ ಅಧರ್ಮಂ ನ ಚ ಮೇ ನಿವೃತ್ತಿಂ |
ನೇ ಕೇ ಪಿ ದೇವೇನ ಹೃದಿಸ್ಥಿತೇನ ಯಥಾ ಕರೋತಿ ತಥಾ ಕರೋಮಿ ||

ಭಗವಂತ ನನಗೆ ಧರ್ಮ ಗೊತ್ತಿದೆ. ಆದರೆ ಆಚರಣೆ ಮಾಡಲಾಗಲಿಲ್ಲ. ಪಾಂಡವರನ್ನು ನೋಯಿಸುವುದು, ದ್ರೌಪದಿ ವಸ್ತ್ರಾಪಹರಣ ಮಾಡುವುದು ಅಧರ್ಮ ಎಂಬುದು ತಿಳಿದಿದೆ. ಆದರೆ ಅದನ್ನು ಬಿಡಲಾಗಲಿಲ್ಲ. ಏಕೆಂದರೆ ಯಾವುದೋ ಒಂದು ದೇವತೆಯು ನನ್ನ ಹೃದಯದಲ್ಲಿ ಕುಳಿತು ಹಾಗೆ ಮಾಡಿಸಿತು ಅಷ್ಟೆ. ನಾನು ಮಾಡಿದವನಲ್ಲ. ಆ ದೇವತೆ ಮತ್ತಾರೂ ಅಲ್ಲ ಆ ದೇವತೆ ನೀನೆ. ಆ ಪಾಪ ಪುಣ್ಯ ನನಗೆ ಸಂಬಂಧವಿಲ್ಲ. ಆ ಪಾಪ ಪುಣ್ಯ ಎಲ್ಲಾ ನಿನ್ನದೇ ಎಂದು ಆ ಪಾಪದಿಂದ ನಿವೃತ್ತಿ ಹೊಂದಿದನು.
ನಿಜವಾಗಿ ನೋಡಿದರೆ ಯಾವ ಪಾಪ ಪುಣ್ಯವು ನಮ್ಮದಲ್ಲ. ನಾವು ಮಾಡುವವರಲ್ಲ. ಯಾರೋ ದೇವತೆ ಮಾಡಿಸುತ್ತದೆ. ಹೀಗೆ ನಾವು ಏನನ್ನಾದರೂ ಮಾಡುವಾಗ ಎಲ್ಲವನ್ನೂ ಪರಮಾತ್ಮನೆ ಮಾಡುತ್ತಾನೆ, ನನಗೆ ಸಂಬಂಧವಿಲ್ಲ ಎಂದರೆ ಆ ಪಾಪ ನಿನಗೆ ಬರುವುದಿಲ್ಲ. ಆದ್ದರಿಂದ ಎಲ್ಲವನ್ನು ಭಗವಂತನ ಮೇಲೆ ಹಾಕುವ ಭಕ್ತರಾದರೆ ನೀವು ಮುಕ್ತರಾಗುತ್ತೀರ. ಸ್ವಪ್ನದಲ್ಲಿ ಮಾಡಿದ ಪಾಪ ಸ್ವಪ್ನ ಇರುವವರೆಗೆ ಮಾತ್ರ ಇರುತ್ತದೆ. ಸ್ವಪ್ನ ಹೋದ ಮೇಲೆ ಆ ಪಾಪ ಪುಣ್ಯ ಯಾವುದು ಇಲ್ಲ. ಹಾಗೆಯೇ ಜಗತ್ತಿನಲ್ಲಿ ಮಾಡಿದ ಪಾಪವಾಗಲೀ, ಪುಣ್ಯವಾಗಲೀ ಸ್ವಪ್ನಕ್ಕೋದರೆ ಅಲ್ಲಿ ಏನೂ ಇಲ್ಲ. ಸುಷುಪ್ತಿಗೆ ಹೋದರೆ ಯಾವುದು ಇಲ್ಲ. ಹೀಗೆ ನಮ್ಮ ತಿಳುವಳಿಕೆಯಿಂದಲೇ ಈ ಮಿಥ್ಯವಾದ ಪಾಪಪುಣ್ಯಗಳು ಇಲ್ಲವೇ ಇಲ್ಲ. ಆದರೆ ನಮ್ಮ ತಿಳುವಳಿಕೆ ದೃಢವಾಗಿರಬೇಕು.