ಮಹಾಭಾರತ ಕಥೆಗಳು

ಶಿಬಿಯ ಕರುಣೆ ಪಂಚ ಪಾಂಡವರು ತೀರ್ಥ ಯಾತ್ರೆಗೆ ಹೋದಾಗ ಯಮುನೆಯೂ ಅದರ ಉಪನದಿಗಳೂ ಸಂಗಮವಾಗುವ ಸ್ಥಳಕ್ಕೆ ಬಂದರು. ಆಗ ಧರ್ಮರಾಜನಿಗೆ ಲೋಮಶ ಮುನಿಗಳು ಶಿಖಿಯ ಕಥೆಯನ್ನು ಹೇಳಿದರು. ಒಂದು ದಿನ ದೇವಲೋಕವಾಸಿಗಳಾದವರು ಭೂಲೋಕಕ್ಕೆ ಬಂದು ಶಿಬಿ ಚಕ್ರವರ್ತಿಯನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದರು. ಶಿಬಿಯು ಉಶೀನರ ಎಂಬ ಸ್ಥಳದಲ್ಲಿ ಯಾಗ ಮಾಡುತ್ತಿದ್ದನು. ಅಲ್ಲಿಗೆ ಇಂದ್ರನೂ ಅಗ್ನಿಯೂ ಬಂದರು. ಅಗ್ನಿಯು ಪಾರಿವಾಳದ ರೂಪವನ್ನೂ, ಇಂದ್ರನು ಗಿಡುಗದ ರೂಪವನ್ನೂ ಧರಿಸಿದರು. ಈ ಪಾರಿವಾಳವನ್ನು ಆ ಗಿಡುಗ ಅಟ್ಟಿಸಿಕೊಂಡು ಬಂದಿತು. ಗಿಡುಗದಿಂದ ತಪ್ಪಿಸಿಕೊಳ್ಳುವುದಕ್ಕೆ ಎಂಬಂತೆ ಪಾರಿವಾಳವು ಶಿಬಿಯ ಮಡಿಲಲ್ಲಿ ಬಂದು ಬಿದ್ದಿತು. ಭಯದಿಂದ ನಡುಗುವಂತೆ ನಟಿಸಿತು. ಆಗ ಗಿಡುಗವು ಶಿಬಿ ಚಕ್ರವರ್ತಿಯ ಬಳಿಗೆ ಬಂದು, ಹೇ ಚಕ್ರವರ್ತಿಯೇ, ಲೋಕವೇ ನಿನ್ನನ್ನು ಕರುಣಾಸಾಗರ ಎಂದು ಕೊಂಡಾಡುತ್ತದೆ. ಈಗ ನಾನು ತೀವ್ರವಾದ ಹಸಿವಿನಿಂದ ನರಳುತ್ತಿದ್ದೇನೆ. ಆದ್ದರಿಂದ ಈ ನಿನ್ನ ಮಡಿಲಲ್ಲಿರುವ ಪಾರಿವಾಳವನ್ನು ತಿಂದು ಹಸಿವನ್ನು ನೀಗಿಕೊಳ್ಳುತ್ತೇನೆ. ಆದ್ದರಿಂದ ನಿನ್ನ ಬಳಿ ಶರಣಾಗತನಾಗಿ ಬಂದ ಈ ಪಾರಿವಾಳವನ್ನು ರಕ್ಷಿಸಿ ಪುಣ್ಯ ಸಂಪಾದಿಸಲು ಯತ್ನಿಸಬೇಡ. ನನ್ನ ಆಹಾರವನ್ನು ನೀನು ಕಿತ್ತುಕೊಳ್ಳಬೇಡ’ ಎಂದಿತು. ಆಗ ಶಿಬಿಯು ‘ಹೇ ಗಿಡುಗವೇ ಈ ಪುಟ್ಟ ಹಕ್ಕಿ ಭಯದಿಂದ ನಡುಗುತ್ತಾ ಇದೆ. ಶರಣಾಗತನಾಗಿ ನನ್ನ ಬಳಿ ಬಂದ ಈ ಪಾರಿವಾಳನ್ನು ನಾನು ರಕ್ಷಿಸದೆ ಬಿಡುವುದು ಸರಿಯಲ್ಲ. ಶರಣಾಗತರನ್ನು ಕಾಪಾಡದೇ ಇರುವುದು ಹಸುವನ್ನು ಕೊಲ್ಲುವುದಕ್ಕೆ ಸಮಾನವಾದುದು. ಅಂತಹ ಪಾಪ ಮಾಡಿದವನಿಗೆ ಕ್ಷಮೆಯೇ ಇಲ್ಲ. ಕಾಲ ಕಾಲಕ್ಕೆ ಅವನಿರುವ ಸ್ಥಳದಲ್ಲಿ ಮಳೆ ಬೀಳುವುದಿಲ್ಲ ಪೈರು ಬೆಳೆಯುವುದಿಲ್ಲ. ಅವನು ಮಾಡುವ ಯಾಗವನ್ನು ದೇವತೆಗಳೂ ಸ್ವೀಕರಿಸುವುದಿಲ್ಲ. ಇಂತಹವನ ಪೂರ್ವಜರು ಸ್ವರ್ಗದಲ್ಲಿರಲು ಸಾಧ್ಯವಿಲ್ಲ’ ಎಂದನು.

ಆಗ ಆ ಗಿಡುಗವು ‘ಎಲೈ ರಾಜನೇ ಯಾವ ಜೀವಿಯೂ ಆಹಾರವಿಲ್ಲದೆ ಬದುಕಲಾರದು. ನನ್ನ ಹಸಿವನ್ನು ಹೋಗಲಾಡಿಸದಿದ್ದರೆ ಈಗ ನನ್ನ ಪ್ರಾಣವೇ ಹೋಗಿಬಿಡುತ್ತದೆ. ನಾನು ಸತ್ತರೆ ನನ್ನ ಕುಟುಂಬವೂ ನಾಶವಾಗಿಬಿಡುತ್ತದೆ. ಈ ಪಾರಿವಾಳವನ್ನು ನೀನು ಕಾಪಾಡಿದರೆ ಹಲವು ಪ್ರಾಣಗಳು ತೆಗೆದ ಪಾಪಕ್ಕೆ ಗುರಿಯಾಗುವೆ. ಹಲವರಿಗೆ ದುಃಖವನ್ನು ತರುವ ಕಾರ್ಯವು ಧರ್ಮವಾಗಲಾರದು. ಅದು ಕೆಟ್ಟ ಕಾರ್ಯ ಇನ್ನೊಂದು ಒಳ್ಳೆಯ ಕೆಲಸಕ್ಕೆ ವಿರೋಧವಿಲ್ಲದ್ದೇ ನಿಜವಾದ ಧರ್ಮ’ ಎಂದಿತು.

ಆಗ ಆ ಶಿಬಿಯು, ‘ಹೇ ಗಿಡುಗವೇ ನನ್ನ ಬಳಿ ಶರಣಾಗತರಾದವರನ್ನು ತಿರಸ್ಕರಿಸುವುದು ಹೇಗೆ ನ್ಯಾಯವಾದೀತು? ನಿನಗೆ ಈಗ ಬೇಕಾಗಿರುವುದು ಆಹಾರ ತಾನೇ? ನಿನಗೆ ಒಳ್ಳೆಯ ರಸವತ್ತಾದ ಊಟ ಸಿಗುವಂತೆ ನಾನು ಏರ್ಪಾಡು ಮಾಡುತ್ತೇನೆ’ ಎಂದನು. ಆಗ ಆ ಗಿಡುಗವು ನಾನು ಬೇರೆ ಯಾವ ಪ್ರಾಣಿಯ ಮಾಂಸವನ್ನು ತಿನ್ನಲಾರೆ. ಪ್ರಕೃತಿ ನನಗೆ ಸ್ವಾಭಾವಿಕವಾಗಿ ನೀಡಿದ ಆ ಪಾರಿವಾಳವನ್ನು ನನಗೆ ನೀಡಬೇಕು. ಗಿಡುಗವು ಪಾರಿವಾಳವನ್ನು ತಿನ್ನುವುದು ಪುರಾತನ ವಿಧಿ’ ಎಂದಿತು. ಆಗ ಶಿಬಿ ಚಕ್ರವರ್ತಿಯು, ‘ಹೇ ಹಕ್ಕಿಯೇ, ನಿನಗೆ ನಾಡು, ನಗರ ರಾಜನ ಪದವಿ, ಮುಂತಾಗಿ ನಿನಗೆ ಬೇಕಾದ್ದೆಲ್ಲವನ್ನು ನಾನು ಕೊಡಲು ಸಿದ್ಧವಾಗಿದ್ದೇನೆ. ಈ ಪಾರಿವಾಳವನ್ನು ಕಾಪಾಡಲು ನಾನು ನನ್ನ ಪ್ರಾಣವನ್ನೇ ಬೇಕಾದರೂ ನೀಡುತ್ತೇನೆ’ ಎಂದನು. ‘ರಾಜನೇ, ಈ ಪಾರಿವಾಳದ ಮೇಲೆ ನಿನಗೆ ಅಷ್ಟೊಂದು ಪ್ರೀತಿ ಇರುವುದಾದರೆ ಈ ಪಾರಿವಾಳದ ತೂಕದಷ್ಟು ನಿನ್ನ ದೇಹದ ಮಾಂಸವನ್ನು ಕೊಡು. ಹಾಗೆ ನೀನು ನೀಡಿದರೆ ನನಗೆ ಬೇಕಾದ್ದನ್ನು ಕೊಟ್ಟಂತಾಗುತ್ತದೆ ಎಂದಿತು ಗಿಡುಗ. ಇದರಿಂದ ನಿನಗೆ ಬಹು ದೊಡ್ಡ ಕೀರ್ತಿ ಏರ್ಪಡುತ್ತದೆ.

‘ಹೇ ಹದ್ದೇ! ನೀನು ಕೇಳಿದಂತೆ ತಕ್ಕಡಿಯ ಒಂದು ತಟ್ಟೆಯಲ್ಲಿ ಈ ಪಾರಿವಾಳವನ್ನೂ ಇನ್ನೊಂದು ತಟ್ಟೆಯಲ್ಲಿ ನನ್ನ ಮಾಂಸವನ್ನೂ ಇಟ್ಟು ಸಮನಾಗಿ ತೂಗಿ ನಿನಗೆ ಕೊಡುವೆ’ ಎಂದನು ಶಿಬಿ. ಅದೇ ರೀತಿ ತಕ್ಕಡಿಯು ತರಲ್ಪಟ್ಟಿತು. ಒಂದು ತಟ್ಟೆಯಲ್ಲಿ ಪಾರಿವಾಳವು ಕುಳಿತಿತು. ಇನ್ನೊಂದು ತಟ್ಟೆಯಲ್ಲಿ ತನ್ನ ದೇಹದಿಂದ ತುಂಡರಿಸಿದ ಮಾಂಸವನ್ನು ಶಿಬಿ ಇಟ್ಟನು. ಮಾಂಸಕ್ಕಿಂತ ಪಾರಿವಾಳದ ತೂಕ ಜಾಸ್ತಿಯಾಗಿದ್ದಿತು. ಮತ್ತೆ ಶಿಬಿ ಮಾಂಸವನ್ನು ಕತ್ತರಿಸಿಟ್ಟನು. ಆಗಲೂ ಪಾರಿವಾಳದ ತೂಕ ಅಧಿಕವಾಗಿದ್ದಿತು. ಹೀಗೇ ಇಷ್ಟು ಬಾರಿ ಇಟ್ಟರೂ ಪಾರಿವಾಳವೇ ಭಾರವಾಗಿದ್ದಿತು. ಕೊನೆಗೆ ಶಿಬಿ ಚಕ್ರವರ್ತಿ ತಾನೇ ಬಂದು ತಕ್ಕಡಿ ತಟ್ಟೆಯಲ್ಲಿ ಏರಿ ಕುಳಿತನು. ತಾನೇ ತನ್ನನ್ನು ಆ ಹದ್ದಿಗೆ ಆಹಾರವಾಗಿ ಒಪ್ಪಿಸಿಕೊಳ್ಳುವುದಕ್ಕೆ ಆ ಶಿಬಿಯು ಸ್ವಲ್ಪವೂ ಹಿಂಜರಿಯಲಿಲ್ಲ.

ಆ ಕೂಡಲೇ ಆ ಗಿಡುಗವು ‘ಸತ್ಯವನ್ನು ಮೀರದ ಓ ಚಕ್ರವರ್ತಿಯೇ, ನೀನು ಧರ್ಮವೇ ಮೂರ್ತಿವೆತ್ತವನಾಗಿದ್ದೀಯೆ. ನಾನು ಗಿಡುಗವಲ್ಲ, ಇಂದ್ರ. ಇದು ಪಾರಿವಾಳವಲ್ಲ ಇವನು ಅಗ್ನಿ. ನಿನ್ನ ಕರುಣಾಸಾಗರದ ಮನಸ್ಸನ್ನು ಪರೀಕ್ಷಿಸಿ ಅದನ್ನು ಲೋಕದವರೆಲ್ಲರೂ ಅರಿಯುವಂತೆ ಮಾಡಲು ನಾವು ಹೀಗೆ ಪಕ್ಷಿ ರೂಪದಲ್ಲಿ ಬಂದೆವು. ನಿನ್ನನ್ನೇ ನೀನು ತ್ಯಾಗ ಮಾಡಿದ ನಿನ್ನ ಉನ್ನತ ಗುಣವನ್ನು ಕಂಡು ಆಶ್ಚರ್ಯಚಕಿತರಾಗಿದ್ದೇವೆ. ಮನುಷ್ಯರಲ್ಲಿ ನೀನು ಅತಿ ಶ್ರೇಷ್ಠನಾದವನು. ನೀನು ಅಳಿವಿಲ್ಲದ ಕೀರ್ತಿಯನ್ನು ಹೊಂದಿ ಬಹುಕಾಲ ರಾಜ್ಯವಾಳುವೆ. ಸ್ವರ್ಗಲೋಕವು ನಿನಗಾಗಿ ಕಾದಿರುತ್ತದೆ. ಮೊದಲಿನಂತೆ ನಿನ್ನ ಶರೀರ ಗಾಯವಿಲ್ಲದೆ ಸುಂದರವಾಗಿ ಆಗಲಿ. ‘ಕಪೋತರಮಣ’ ಎಂಬ ಮಗನನ್ನು ನಿನ್ನ ಶರೀರದಿಂದಲೇ ಪಡೆಯುವೆ. ಅವನು ಬಹುದೊಡ್ಡ ವೀರನಾಗುತ್ತಾನೆ. ಅತಿ ಸುಂದರನಾದ ಅವನು ಮಹಾಕೀರ್ತಿವಂತನಾಗುತ್ತಾನೆ! ಎಂದು ಇಂದ್ರನು ಆಶೀರ್ವದಿಸಿದನು. ‘ಒಂದು ಪಾರಿವಾಳವನ್ನು ಕಾಪಾಡಲು ತನ್ನನ್ನೇ ಅರ್ಪಿಸಿದ ಶಿಬಿ’ ಎಂದು ಶಾಶ್ವತವಾದ ಕೀರ್ತಿಯನ್ನು ಶಿಬಿ ಪಡೆದನು.