ಉಪನಿಷತ್ತಿನ ಕಥೆಗಳು

ಯಜ್ಞವಲ್ಕ ಹಾಗೂ ಮೈತ್ರೇಯಿ ಬೃಹದಾರಣ್ಯಕೋಪನಿಷತ್ತೆಂಬುದೊಂದು ಪ್ರಮುಖವಾದ ಉಪನಿಷತ್ತು. ಅದರ ಕರ್ತೃ ಯಾಜ್ಞವಲ್ಕ್ಯ ಋಷಿಗಳು. ಯಾಜ್ಞವಲ್ಕ್ಯ ಮಹರ್ಷಿಗಳಿಗೆ ಇಬ್ಬರು ಪತ್ನಿಯರು. ಒಬ್ಬಳು ಮೈತ್ರೇಯಿ ಮತ್ತೊಬ್ಬಳು ಕಾತ್ಯಾಯಿನಿ ಅವರೊಂದಿಗೆ ಮಹರ್ಷಿಗಳು ಬಹಳಷ್ಟು ಕಾಲ ಸುಖ ಸಂಸಾರ ನಡೆಯಿಸಿಕೊಂಡಿದ್ದರು. ಸಾಂಸಾರಿಕ ಜೀವನದಲ್ಲಿ ಗಳಿಸಿದ್ದ. ಅಪಾರ ಸಂಪತ್ತನ್ನು ತ್ಯಜಿಸಿ ಸಂನ್ಯಾಸಿಯಾಗಿ ತಪಸ್ಸು ಮಾಡಲು ಮನೆ ಬಿಟ್ಟುಹೋಗುವ ನಿರ್ಣಯ ಮಾಡಿಕೊಂಡು ತಾವು ಆವರೆವಿಗೆ ಗಳಿಸಿದ್ದ ಸಮಷ್ಠಿ ಸಂಪತ್ತನ್ನೆಲ್ಲ ಎರಡು ಭಾಗವಾಗಿ ವಿಭಾಗಿಸಿ ತಮ್ಮ ಇಬ್ಬರು ಪತ್ನಿಯರನ್ನು ಕರೆದು ತಮ್ಮ ತಮ್ಮ ಭಾಗವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಅವರಲ್ಲಿ ಒಬ್ಬಳಾದ ಕಾತ್ಯಾಯಿನಿಯು ತನ್ನ ಭಾಗದ ಸಂಪತ್ತನ್ನು ತಾನು ತೆಗೆದುಕೊಂಡು ಹೋದಳು. ಇನ್ನು ಎರಡನೆಯ ಧರ್ಮಪತ್ನಿಯಾದ ಮೈತ್ರೇಯಿಯಾದರೋ ಹಾಗೆ ಮಾಡಲಿಲ್ಲ. ಆಕೆಯು ವಿಚಾರ ಪರಳಾಗಿದ್ದುದರಿಂದ ತನ್ನಲ್ಲಿಯೇ ಹೀಗೆ ಯೋಚಿಸಿಕೊಂಡಳು.
‘ತನ್ನ ಪತಿಯು ಇಷ್ಟೊಂದು ಅಪಾರವಾದ ಲೌಕಿಕ ಸಂಪತ್ತನ್ನು ಬಿಟ್ಟು ಹೋಗುತ್ತಿದ್ದಾರೆಂದರೆ ಇದರಿಂದ ಯಾವ ಮನಃ ಶಾಂತಿಯೂ ಇಲ್ಲವೆಂದೇ ತಾನೇ ಅರ್ಥ!? ತನ್ನ ಪತಿ ದೇವರಿಗೆ ಶಾಂತಿಯನ್ನು ನೀಡದಿದ್ದ ಈ ಲೌಕಿಕ ಸಂಪತ್ತು ಇನ್ನು ನನಗೆ ಹೇಗೆ ತಾನೇ ಶಾಂತಿಯನ್ನು ನೀಡೀತು? ಅವರಿಗೇ ಬೇಡವಾಗಿರುವ ಸಂಪತ್ತು ಇನ್ನು ನನಗಾದರೂ ಏಕೆ ಬೇಕು? ಅದು ನನಗೆ ಬೇಡವೇ ಬೇಡ!’ ವೆಂದು ತನ್ನಲ್ಲಿಯೇ ಅಲೋಚಿಸಿಕೊಂಡಳು. ಯಾಜ್ಞವಲ್ಕ್ಯರು ‘ಮೈತ್ರೇಯಿ! ನಾನೀಗ ಈ ಗೃಹಸ್ಥಾಶ್ರಮವನ್ನು ಬಿಡಲು ನಿಶ್ಚಯಿಸಿದ್ದೇನೆ. ಆದ್ದರಿಂದ ನಿನಗೂ ಕಾತ್ಯಾಯಿನಿಗೂ ಇರುವ ನನ್ನ ಸಂಬಂಧವನ್ನು ಪರಿಸಮಾಪ್ತಿಗೊಳಿಸಿಕೊಳ್ಳುವ ದೃಢ ಸಂಕಲ್ಪ ಮಾಡಿದ್ದೇನೆ. ನಿಮ್ಮಿಬ್ಬರ ಭಾವೀ ಭವಿಷ್ಯಕ್ಕಾಗಿ ನನ್ನ ಅಪಾರ ಲೌಕಿಕ ಸಂಪತ್ತನ್ನು ನಿಮ್ಮಿಬ್ಬರಿಗೂ ಸಮನಾಗಿ ಹಂಚಿಕೊಡುವ ವ್ಯವಸ್ಥೆ ಮಾಡಿದ್ದೇನೆ. ನಿನ್ನ ಭಾಗದ ಆಸ್ತಿಯನ್ನು ನೀನು ತೆಗೆದುಕೊಂಡು ಹೋಗು.’ ಮೈತ್ರೇಯಿ ‘ಹೇ ಭಗವಾನ್! ನೀವು ನನಗೆ ನೀಡ ಬಯಸಿರುವ ಧನ ಕನಕಗಳು ನನಗೆ ಅಮೃತತ್ವವನ್ನು ದಯಪಾಲಿಸುವುದೇ?
ಯಾಜ್ಞವಲ್ಕ್ಯರು ‘ಇಲ್ಲಿ ಉಪಕರಣಗಳ್ಳುಳ್ಳ ಜೀವಿತವು ಹೇಗಿರುವುದೋ ಹಾಗೆಯೇ ನಿನ್ನ ಜೀವಿತವೂ ಆಗುವುದು. ಆದರೆ ಧನದ ಮೂಲಕ ಅಮೃತತ್ವದ ಸಿದ್ಧಿಯು ಎಂದಿಗೂ ಆಗಲಾರದು. ಮೈತ್ರೇಯಿ ‘ಯಾವುದರಿಂದ ನಾನು ಅಮೃತಳಾಗುವುದಿಲ್ಲವೋ ಆ ಧನದಿಂದ ನನಗೆ ಪ್ರಯೋಜನವಾದರೂ ಏನು? ನೀವು ನನಗಾಗಿ ಕೊಡಬಯಸಿರುವ ಈ ನಶ್ವರ ಪ್ರಾಪಂಚಿಕ ಧನ ಸಂಪತ್ತನ್ನು ತೆಗೆದುಕೊಂಡು ನಾನೇನು ಮಾಡಲಿ? ಹೇ ಭಗವಾನ್ ನೀವು ಯಾವುದನ್ನು ಅರಿತುಕೊಂಡಿರುವಿರೋ ಅದನ್ನು ದಯಮಾಡಿ ನನಗೆ ಉಪದೇಶಿಸಿ, ನನ್ನನ್ನು ಉದ್ಧಾರ ಮಾಡಬೇಕು. ಯಾಜ್ಞವಲ್ಕ್ಯ ‘ಎಲೈ ಮೈತ್ರೇಯಿ! ಹಿಂದೆಯೂ ನೀನು ನನಗೆ ಪ್ರಿಯಳಾಗಿದ್ದೆ. ಈಗ ನನಗೆ ಪ್ರಿಯವಾದುದನ್ನೇ ಕುರಿತು ಮಾತನಾಡುತ್ತಿದ್ದೀಯೆ, ತುಂಬಾ ಸಂತೋಷ. ಬಾ ಕುಳಿತುಕೋ. ನಿನಗೆ ಬ್ರಹ್ಮವಿದ್ಯೆಯನ್ನು ವ್ಯಾಖ್ಯಾನ ಮಾಡುತ್ತೇನೆ. ಅದನ್ನೆಲ್ಲಾ ಏಕಾಗ್ರವಾಗಿ ಧ್ಯಾನಿಸಿ ಕೃತಕೃತ್ಯಳಾಗು. ಹೀಗೆಂದು ಬ್ರಹ್ಮವಿದ್ಯೆಯ ಅತ್ಯಂತ ಸೂಕ್ಷ್ಮವಾದ ಪ್ರವಚನವನ್ನು ಯಜ್ಞವಲ್ಕರು ಮೈತ್ರೇಯಿಗೆ ದಯಪಾಲಿಸಿದರು.