ಉಪನಿಷತ್ತಿನ ಕಥೆಗಳು

ಪ್ರಾಣವಿದ್ಯೆಯ ಕಥೆ ಒಂದು ಸಾರಿ ಇಂದ್ರಿಯಗಳು ಮನಸ್ಸು ಬುದ್ಧಿ ತಮ್ಮ ತಮ್ಮ ಶ್ರೇಷ್ಠತ್ವ ವಿಷಯದಲ್ಲಿ ನಾನು ಶ್ರೇಷ್ಠನು, ನಾನು ಶ್ರೇಷ್ಠನು ಎಂದು ವಾದ ಮಾಡಿದವು. ಆ ಇಂದ್ರಿಯಗಳು ಸೇರಿ ಪ್ರಜಾಪತಿಗೆ ಹೇಳಿದವು. ಭಗವಂತನೇ! ನಮ್ಮಲ್ಲಿ ಯಾರು ಶ್ರೇಷ್ಠರು? ಎಂದು ಕೇಳಿದವು, ಆಗ ಪ್ರಜಾಪತಿಯು ಹೇಳುತ್ತಾನೆ. ನಿಮ್ಮಲ್ಲಿ ಯಾವುದು ಉತ್ಕ್ರಮಿಸಿದರೆ (ತೊರೆದು ಹೋದರೆ) ಈ ಶರೀರವು ಅಮಂಗಲವಾಗುವುದೋ, ಹೆಣವಾಗಿ ಕಾಣುವುದೋ, ಮುಟ್ಟದಂತೆ ಅಶುಚಿಯಾಗುವುದೋ ಅವನೇ ಶ್ರೇಷ್ಠನೆಂದು ಹೇಳಬಹುದು. ಅದಕ್ಕಾಗಿ ಪ್ರಜಾಪತಿಯು ಈಗಲೇ ಇವರು ದು:ಖ ಪಡಬಾರದು. ಅವರೇ ಅವರ ಶಕ್ತಿಯನ್ನು ತಿಳಿದುಕೊಳ್ಳಲಿ ಎಂದು ಹೇಳಿದನು.
ಯಾರು ಈ ಶರೀರದಿಂದ ಒಂದು ವರ್ಷ ಹೊರಗಿದ್ದು ತನ್ನ ಕೆಲಸವನ್ನು ಬಿಟ್ಟು ಇದ್ದರೆ ಈ ಶರೀರವು ಅಮಂಗಲವಾದಾಗ ಆ ಬಿಟ್ಟು ಹೋದವನು ಶ್ರೇಷ್ಠನಾದವನೆಂದು ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿರಿ, ಅವರವರ ಶ್ರೇಷ್ಠತೆಯನ್ನು ಕನಿಷ್ಟತೆಯನ್ನು ಮೊದಲೇ ಹೇಳಿದರೆಅಷ್ಟು ಸ್ವಾರಸ್ಯವಾಗಿರುವುದಿಲ್ಲ. ಮಕ್ಕಳಲ್ಲಿ ಸ್ಪರ್ಧೆ ಬರುವಂತೆ ಹೀಗೆ ಮಾಡುವ ಪದ್ಧತಿ ಇರುತ್ತದೆ.
ತಂದೆಯಾದ ಪ್ರಜಾಪತಿಯೂ ಪ್ರಾಣಗಳನ್ನು ಕುರಿತು ಹೀಗೆ ಹೇಳಿದ್ದನ್ನು ಕೇಳಿ ಮೊದಲು ವಾಕ್ ಅಂದರೆ ವಾಣಿ ಈ ಶರೀರವನ್ನು ಬಿಟ್ಟು ಉತ್ಕ್ರಾಂತವಾಯಿತು. ಅದು ಹಾಗೆ ಒಂದು ವರ್ಷ ಹೊರಗಿದ್ದು ನಂತರ ಬಂದು ಹೇಳಿತು, ನಾನು ಇಲ್ಲದೆ ಜೀವಿಸಲು ನಿಮಗೆ ಹೇಗೆ ಸಾಧ್ಯವಾಯಿತು? ನೀವು ಹೇಗೆ ಬದುಕಿಕೊಂಡಿದ್ದೀರಿ? ನೀವು ಬದುಕುವುದಕ್ಕೆ ಯಾವ ಶಕ್ತಿ ನಿಮ್ಮಲ್ಲಿತ್ತು?
ಅವೆಲ್ಲಾ ಹೀಗೆ ಹೇಳಿದವು. ಹೇಗೆ ಕೆಲವರು ಮೂಕರು ಹೇಗೆ ಲೋಕದಲ್ಲಿ ಮಾತನಾಡದೆ ಚಕ್ಷುವಿನಿಂದ ಕಾಣುತ್ತಾ ಶ್ರೋತ್ರದಿಂದ ಕೇಳುತ್ತಾ ಮನಸ್ಸಿನಿಂದ ಚಿಂತಿಸುತ್ತಾ ಹೀಗೆ ಎಲ್ಲಾ ಕರಣ-ವ್ಯಾಪಾರಗಳನ್ನು ಮಾಡುತ್ತಾ ನಾವು ಬದುಕಿದ್ದವು ಎಂದವು.
ಆಗ ವಾಣಿಯೂ ದೇಹದಲ್ಲಿ ನಾನು ಶ್ರೇಷ್ಟನಲ್ಲ ಎಂಬುದನ್ನು ತಿಳಿದು ಆ ವಾಕ್ಕ್ ದೇಹವನ್ನು ಪ್ರವೇಶ ಮಾಡಿ ತನ್ನ ಕರ್ತವ್ಯದಲ್ಲಿ ತೊಡಗಿಕೊಂಡಿತು. ನಂತರ ಎರಡನೆಯದಾಗಿ ಚಕ್ಷುಸ್ಸು ಉತ್ಕ್ರಾಂತವಾಯಿತು. ಒಂದು ವರ್ಷ ಹೊರಗೆ ಹೋಗಿ ಹಿಂದಿರುಗಿ ಬಂದು ನಾನಿಲ್ಲದೆ ಜೀವಿಸಲು ನೀವು ಹೇಗೆ ಶಕ್ತರಾಗಿದ್ದಿರಿ? ಎಂದು ಕೇಳಿತು. ಹೇಗೆ ಕುರುಡರು ಕಣ್ಣು ಇಲ್ಲದೆ ಯಾವ ವಸ್ತುವನ್ನು ನೋಡದೆ ಪ್ರಾಣದಿಂದ ಜೀವಿಸುತ್ತಾ ವಾಕ್ಕಿನಿಂದ ಮಾತನಾಡುತ್ತಾ ಕಿವಿಯಿಂದ ಕೇಳುತ್ತಾ ಮನಸ್ಸಿನಿಂದ ಯೋಚಿಸುತ್ತಾ ಇರುವವೋ ಹಾಗೆ ನಾವು ಜೀವಿಸಿದ್ದೆವು. ಆಗ ಕಣ್ಣಿಗೆ ನಾಚಿಕೆಯಾಗಿ ಶರೀರವನ್ನು ಪ್ರವೇಶಮಾಡಿತು. ತನ್ನ ಕೆಲಸದಲ್ಲಿ ತೊಡಗಿಕೊಂಡಿತು.
ನಂತರ ಶ್ರೋತ್ರೀಂದ್ರಿಯವು ಕಿವಿಯು ಈ ಶರೀರವನ್ನು ಬಿಟ್ಟು ಒಂದು ವರ್ಷ ಹೊರಗಿದ್ದು ಬಂದು ಹೇಳಿತು. ನಾನಿಲ್ಲದೆ ನೀವೆಲ್ಲರೂ ಜೀವಿಸಲು ಹೇಗೆ ಶಕ್ತರಾದಿರಿ? ಆಗ ಉಳಿದವು ಹೇಳುತ್ತವೆ. ಹೇಗೆ ಜಗತ್ತಿನಲ್ಲಿ ಕಿವುಡರು ಯಾವ ಮಾತನ್ನು ಶಬ್ದವನ್ನು ಕೇಳದೆ ಪ್ರಾಣದಿಂದ ಜೀವಿಸುತ್ತಾ ವಾಕ್ಕಿನಿಂದ ಮಾತನಾಡುತ್ತಾ ಕಣ್ಣಿನಿಂದ ನೋಡುತ್ತಾ ಮನಸ್ಸಿನಿಂದ ಯೋಚನೆ ಮಾಡುತ್ತಾ ಹೇಗೆ ಇರುವವರೋ ಹಾಗೆ ನಾವು ಜೀವಿಸಿದ್ದೆವು. ಆಗ ಕಿವಿಯೂ ನಾಚಿಕೆ ಪಟ್ಟುಕೊಂಡು ನಾನು ಶ್ರೇಷ್ಟನಲ್ಲವೆಂದು ತಿಳಿದು ಯಥಾಪ್ರಕಾರವಾಗಿ ದೇಹವನ್ನು ಪ್ರವೇಶಿಸಿತು.
ನಂತರ ಮನಸ್ಸು ಉತ್ಕ್ರಮಿಸಿತು. ಅದು ಒಂದು ವರ್ಷ ಹೊರಗಿದ್ದು ಹಿಂದಿರುಗಿ ಬಂದು ನಾನು ಇಲ್ಲದೆ ನೀವು ಹೇಗೆ ಜೀವಿಸಿದ್ದೀರಿ? ನಾನಿಲ್ಲದೆ ಜೀವಿಸಲು ನೀವು ಹೇಗೆ ಶಕ್ತರಾದಿರಿ? ಎಂದಿತು. ಆಗ ಎಲ್ಲಾ ಪ್ರಾಣಗಳು ಹೇಳುತ್ತವೆ. ಹೇಗೆ ಮಕ್ಕಳು ಪ್ರಬಲವಾದ ಮನಸ್ಸು ಇಲ್ಲದವರಾಗಿ ಮನಸ್ಸಿಲ್ಲದೆ ಹುಚ್ಚನಂತಾಗಿ ಪ್ರಾಣದಿಂದ ಜೀವಿಸುತ್ತಾ ವಾಕ್ಕಿನಿಂದ ಮಾತನಾಡುತ್ತಾ, ಕಣ್ಣಿನಿಂದ ನೋಡುತ್ತಾ ಕಿವಿಯಿಂದ ಕೇಳುತ್ತಾ ಹೇಗೆ ಇರುವರೋ ನಾವು ಹಾಗೆ ಜೀವಿಸಿದ್ದೆವು. ಆಗ ಮನಸ್ಸು ನಾಚಿಕೆಪಟ್ಟು ಶರೀರವನ್ನು ಪ್ರವೇಶ ಮಾಡಿ ತನ್ನ ಕಾರ್ಯದಲ್ಲಿ ತೊಡಗಿತು. ಅನಂತರ ಪ್ರಾಣವು ಉತ್ಕ್ರಮಿಸಲು ಅಥವಾ ಶರೀರವನ್ನು ಬಿಟ್ಟು ಹೋಗಲು ಸಿದ್ಧವಾಯಿತು. ಆಗ ಎಲ್ಲಾ ಇಂದ್ರಿಯಗಳು ಒಂದು ಕ್ಷಣ ನಡುಗಿದವು ಮತ್ತು ವಿಲವಿಲ ಒದ್ದಾಡತೊಡಗಿದವು. ಆಯಾಯ ಇಂದ್ರಿಯಗಳು ತಮ್ಮ ತಮ್ಮ ಸ್ಥಾನದಲ್ಲಿರಲು ಅಶಕ್ತರಾದರು. ಆ ಮುಖ್ಯ ಪ್ರಾಣನ ಬಳಿಗೆ ಎಲ್ಲವೂ ಬಂದು ಒಟ್ಟಿಗೆ ಸೇರಿ ಹೀಗೆ ನಮಸ್ಕಾರ ಮಾಡಿ ಹೇಳಿದವು.
ಎಲೈ ಪ್ರಾಣ ಭಗವಂತನೇ ನೀನು ನಮ್ಮಗಳಿಗೆ ಒಡೆಯನಾಗಿ ಇದ್ದುಕೊಂಡಿರು, ಏಕೆಂದರೆ ನೀನೆ ನಮಗೆಲ್ಲಾ ಶ್ರೇಷ್ಠನಾಗಿರುವೆ. ಈ ದೇಹದಿಂದ ನೀನು ಉತ್ಕ್ರಾಂತನಾಗಬೇಡ ಎಂದು ಹೇಳಿದವು.