ಮಾರ್ಕಂಡೇಯನು ಚಿರಂಜೀವಿಯಾದ
ಮೃಖಂಡು ಮುನಿ ಹೆಂಡತಿ ಮರುಧ್ವತಿ ತಮ್ಮ ಮಗ ಮಾರ್ಕಂಡೇಯನು ಅಲ್ಪಾಯುಷ್ಯದವನೆಂದು ಅರಣ್ಯದಲ್ಲಿ ತಪಸ್ಸು ಮಾಡುತ್ತಿದ್ದರು. ಒಂದು ಸಾರಿ ಒಬ್ಬ ಹಸ್ತ ಸಾಮುದ್ರಿಕೆ ಬಲ್ಲವನು ಅರಣ್ಯದ ಆ ದಾರಿಯಲ್ಲಿ ಹೋಗುತ್ತಿದ್ದ. ದಾರಿಯಲ್ಲಿ ಮಾರ್ಕಂಡೇಯನು ಆಡುತ್ತಿದ್ದ. ಅವನನ್ನು ನೋಡಿ ಕೈ ಪರೀಕ್ಷಿಸಿ ಆ ಮಗು ಇನ್ನು ಕೇವಲ ಆರು ತಿಂಗಳು ಮಾತ್ರ ಬದುಕಿರುತ್ತದೆ. ಇವನಿಗೆ ಉಪನಯನ ಮಾಡಿಸಿರಿ ಎಂದು ಹೇಳಿ ಹೋದನು. ತಂದೆ ಮೃಖಂಡು ಮುನಿಯು ಆ ಮಗುವಿಗೆ ಉಪನಯನ ಮಾಡಿದನು. ಉಪ-ಎಂದರೆ ಮತ್ತೊಂದು ನಯನ ಎಂದರೆ ಕಣ್ಣು. ಮತ್ತೊಂದು ಕಣ್ಣು ಯಾವುದು? ಈಗಿರುವ ಎರಡು ಕಣ್ಣುಗಳು ಮಿಥ್ಯಾಭೂತವಾದ ಮಾಯೆಯಿಂದಾದ ಜಗತ್ತನ್ನು ನೋಡುವ ಕಣ್ಣುಗಳು. ಮತ್ತೊಂದು ಕಣ್ಣು ಯಾವುದು? ಎಲ್ಲೆಲ್ಲಿಯೂ ಬ್ರಹ್ಮಮಯವೇ. ಎಲ್ಲಾ ಕಡೆ ಪರಮಾತ್ಮನನ್ನು ಕಾಣುವಂತಹ ಕಣ್ಣೆ ಸತ್ಯವಾದ ಕಣ್ಣು. ಅಂತಹ ಎಲ್ಲೆಲ್ಲಿಯೂ ಪರಮಾತ್ಮನನ್ನು ನೋಡುವ ಕಣ್ಣನ್ನು ಕೊಡುವುದೇ ಉಪನಯನ. ಇದನ್ನು ಬ್ರಹ್ಮೋಪದೇಶವೆಂದು ಕರೆಯುತ್ತಾರೆ. ಹಾಗೆ ಮಾರ್ಕಂಡೇಯನಿಗೆ ಉಪನಯನ ಆಯಿತು. ಆ ಉಪನಯನ ಪ್ರಭಾವದಿಂದ ಎಲ್ಲೆಲ್ಲಿಯೂ ಬ್ರಹ್ಮನನ್ನು ನೋಡುತ್ತಿದ್ದ. ಅವನ ಕಣ್ಣಿಗೆ ಎಲ್ಲೆಲ್ಲಿಯೂ ಬ್ರಹ್ಮವೆ. ಒಂದು ಸಾರಿ ಇವರ ಆಶ್ರಮದ ಮುಂದೆ ಸನಕಾದಿ ಬ್ರಹ್ಮಮಾನಸ ಪುತ್ರರು ಬಂದರು. ಆ ಹುಡುಗ ಮಾರ್ಕಂಡೇಯ ಆ ಬ್ರಹ್ಮ ಮಾನಸ ಪುತ್ರರಿಗೆ ನಮಸ್ಕರಿಸಿದ. ಅವರೆಲ್ಲರೂ ‘ಆಯುಷ್ಯವಾನ್ ಭವ’ ಆಯುಷ್ಯವಂತನಾಗು ಎಂದು ಆಶೀರ್ವದಿಸಿದರು. ಅದರಲ್ಲಿ ವಶಿಷ್ಠರು ‘ಅಯ್ಯೋ! ಇವನಿಗೆ ಇನ್ನು ಸ್ವಲ್ಪ ದಿವಸ ಇವನ ದೇಹ ಇರುತ್ತದೆ. ಇಂತಹವನಿಗೆ ‘ಆಯುಷ್ಯವಾನ್ ಭವ’ ಆಯುಷ್ಯವಂತನಾಗು ಎಂದೆವಲ್ಲ ತಪ್ಪಾಯಿತು’ ಎಂದು ಬ್ರಹ್ಮದೇವನನ್ನು ಬೇಡಿಕೊಂಡರು. ಬ್ರಹ್ಮನು ವಿಷ್ಣುವನ್ನು, ವಿಷ್ಣುವು ಮಹೇಶ್ವರನನ್ನು ಬೇಡಿದರು. ಮೂರು ಜನ ತ್ರಿಮೂರ್ತಿಗಳೂ ಆಗಮಿಸಿದರು. ಅವರಿಗೂ ಮಾರ್ಕಂಡೇಯನು ನಮಸ್ಕರಿಸಿದ. ಆಗ ಆ ತ್ರಿಮೂರ್ತಿಗಳು ‘ಚಿರಂಜೀವಿ ಭವ’ ಚಿರಂಜೀವಿಯೇ ಆಗು ಎಂದು ಆಶೀರ್ವದಿಸಿದರು. ಹೀಗೆ ಸ್ವಲ್ಪ ದಿವಸ ಇರುವ ಮಾರ್ಕಂಡೇಯನು ಚಿರಂಜೀವಿಯಾದ. ಇದೆಲ್ಲಾ ಅವನು ಮಾಡಿದ ಪುಣ್ಯದ ಫಲ ಎಲ್ಲೆಲ್ಲಿಯೂ ಪರಮಾತ್ಮನನ್ನು ನೋಡಿದ ಶೈಲಿ. ಯಮನು ಅವನನ್ನು ಕರೆದುಕೊಂಡು ಹೋಗಲು ಪಾಶ ಹಾಕಿದರೂ ಅವನನ್ನು ಪರಮಾತ್ಮನೇ ರಕ್ಷಿಸಿದ, ಚಿರಂಜೀವಿಯಾದ!