ನೀತಿ ಕಥೆಗಳು

ರಾಜ ಭರ್ತೃಹರಿಯ ಕಥೆ - ಹೊಸದು ಹಿಂದೆ ಉಜ್ಜಯಿನಿಯ ರಾಜ್ಯವನ್ನು ಆಳುತ್ತಿದ್ದ ರಾಜಾ ಭರ್ತೃಹರಿ, ಗಂಧರ್ವಸೇನನ ಮಗ. ಗಂಧರ್ವಸೇನನಿಗೆಇಬ್ಬರು ಹೆಂಡತಿಯರು. ಮೊದಲ ಹೆಂಡತಿ ಮಗನೇ ರಾಜಾ ಭರ್ತೃಹರಿ, ಎರಡನೇ ಹೆಂಡತಿಯ ಮಗ ರಾಜಾ ವಿಕ್ರಮಾದಿತ್ಯ. ತಂದೆಯ ನಂತರ ಭರ್ತೃಹರಿಯೇ ರಾಜನಾದ, ಇವನದು ವಿಲಾಸಿ ಜೀವನ. ಅವನ ಹೆಂಡತಿ ಅನಂಗಸೇನೆ ತುಂಬಾ ಸುಂದರವಾಗಿದ್ದಳು. ಅವಳಲ್ಲಿ ಅವನಿಗೆ ಮಧುರವಾದ ಮೋಹ ,ಅವಳೇ ಅವನಿಗೆ ಸರ್ವಸ್ವ. ಒಂದು ದಿನ ಒಬ್ಬ ಮಹಾತಪಸ್ವಿ ಒಂದು ವಿಶಿಷ್ಟವಾದ ಹಣ್ಣನ್ನು ರಾಜಾ ಭರ್ತೃಹರಿಗೆ ಕೊಟ್ಟು ಇದನ್ನು ನೀನೇ ತಿನ್ನು ಯಾರಿಗೂ ಕೊಡಬೇಡ, ಇದನ್ನು ತಿಂದವರು ಚಿರಂಜೀವಿಯಾಗಿ ಬಾಳುತ್ತಾರೆ ಎಂದನು. ಭರ್ತೃಹರಿ ಯೋಚನೆ ಮಾಡಿ "ನಾನು ತಿಂದು ದೀರ್ಘಾಯುಷ್ಯನಾದರೆ ನನ್ನ ಪ್ರೀತಿಯ ಅನಂಗಸೇನೆ ನನ್ನ ಕಣ್ಣೆದುರೇ ಸತ್ತು, ನಾನು ಬದುಕಿದರೆ ನನ್ನದು ಬರಡು ಜೀವನವಾಗುತ್ತದೆ" ಎಂದು, ಆಕೆಯೇ ಇದನ್ನು ತಿನ್ನಲಿ ಎಂದು ಮೋಹದಿಂದ ಹಣ್ಣನ್ನು ಕೊಟ್ಟು ನೀನು ತಿಂದು ಬಹುದಿವಸ ಬದುಕು ಎಂದು ಪ್ರೇಮದಿಂದ ಹೇಳಿದನು.

ಅನಂಗಸೇನೆಯು ಅಶ್ವಶಾಲೆಯ ಮುಖಂಡ ಚಂದ್ರಚೂಡನನ್ನು ಪ್ರೇಮಿಸುತ್ತಿದ್ದಳು ಇವಳು ಯೋಚನೆ ಮಾಡಿ, "ತನ್ನ ಪ್ರಿಯಕರ ಕುದುರೆ ಕಾಯುವವನು ತನ್ನ ಕಣ್ಣೆದುರೇ ಸತ್ತು ನಾನು ಉಳಿದರೆ ನನ್ನದು ಬರಡು ಜೀವನವಾಗುತ್ತದೆ ಆದ್ದರಿಂದ ಅವನೇ ತಿಂದು ಚಿರಂಜೀವಿ ಆಗಲಿ" ಎಂದು ಹಣ್ಣನ್ನು ತನ್ನ ಪ್ರಿಯಕರನಾದ ಚಂದ್ರಚೂಡನಿಗೆ ಕೊಟ್ಟು,ಈ ಹಣ್ಣನ್ನು ತಿಂದವರು ಚಿರಂಜೀವಿ ಆಗುತ್ತಾರೆ, ಆದ್ದರಿಂದ ಇದನ್ನು ನೀನೇ ತಿನ್ನು ಎಂದು ಹೇಳಿಕೊಟ್ಟಳು.

ಅಶ್ವಶಾಲೆ ಮುಖಂಡ ಚಂದ್ರಚೂಡನಿಗೆ ಒಬ್ಬ ವೇಶ್ಯೆ ರೂಪಲೇಖ ಎಂಬುವಳ ಸಂಗವಿತ್ತು. ಅವನು ಹಣ್ಣನ್ನು ಅವಳಿಗೆ ಕೊಡುತ್ತಾ ಇದನ್ನು ನೀನು ತಿಂದು ದೀರ್ಘಾಯುಷ್ಯವಂತಳಾಗು ಎಂದು ಹೇಳಿಕೊಟ್ಟನು. ಆ ವೇಶ್ಯೆಯು ತನ್ನ ಮನದಲ್ಲಿ ಯೋಚಿಸಿ "ನಾನಾದರೂ ಮೈಮಾರಿ ಕೊಳ್ಳುವವಳು ನನಗೇಕೆ ಬೇಕು ಈ ಚಿರಂಜೀವಿತನ, ಅದೇ ನಮ್ಮ ರಾಜನಿಗೆ ಕೊಟ್ಟರೆ ಅವರು ದೀರ್ಘಾಯುಷ್ಯವಂತರಾಗಿ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ರಾಜ್ಯವು ಸುಭಿಕ್ಷವಾಗಿರುತ್ತದೆ" ಎಂದರಿತು ಅ ಹಣ್ಣನ್ನು ತಂದು ರಾಜ ಭರ್ತೃಹರಿಗೆ ಕೊಟ್ಟು, ರಾಜನ್!! ಈ ಹಣ್ಣನ್ನು ತಿಂದು ಬಹು ದಿವಸ ಬಾಳಿ ಪ್ರಜೆಗಳನ್ನು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹೇಳಿದಳು.

ರಾಜನು ಆ ಹಣ್ಣನ್ನುತಿರುಗಿಸಿ ನೋಡುತ್ತಾನೆ, ಅವನಿಗೆ ಬಹಳ ಆಶ್ಚರ್ಯ!! ಈ ಹಣ್ಣನ್ನು ಮಹಾತಪಸ್ವಿ ತನಗೆ ಕೊಟ್ಟಿದ್ದು ನಾನಿದನ್ನು ನನ್ನ ಮೋಹದ ಹೆಂಡತಿಗೆ ಕೊಟ್ಟಿದ್ದೆ, ಇದು ವೇಶ್ಯೆ ಕೈಗೆ ಹೇಗೆ ಬಂದಿತು, ಎಂದು ವಿಚಾರಣೆ ಮಾಡಲು ಸೈನಿಕರಿಗೆ ಆದೇಶಿಸಿದನು. ಆಗ ರಾಜನ ಪ್ರೀತಿಯ ಮಡದಿ ಅನಂಗಸೇನೆಯು ನಿಜವನ್ನು ಹೇಳಲೇಬೇಕಾಯಿತು. ನಾನು ಇದನ್ನು ನನ್ನ ಪ್ರೇಮಿಯಾದ ಕುದುರೆ ಪರಿಚಾರಕ ಚಂದ್ರಚೂಡನಿಗೆ ಕೊಟ್ಟಿದ್ದೆ. ಅವನೊಂದಿಗೆ ಪ್ರೇಮಸಂಬಂಧವಿರುವುದನ್ನು ಒಪ್ಪಿಕೊಂಡಳು. ಅವನನ್ನು ಕರೆಸಿ ವಿಚಾರಣೆ ಮಾಡಿದಾಗ ಅವನಿಗೆ ವೇಶ್ಯೆ ರೂಪಲೇಖಳ ಮೇಲೆ ಇರುವ ವ್ಯಾಮೋಹದಿಂದ ಈ ಹಣ್ಣನ್ನು ಆಕೆಗೆ ಕೊಟ್ಟೆನೆಂದು ಹೇಳಿದ. ಇದೆಲ್ಲವನ್ನು ನೋಡಿ ರಾಜನಿಗೆ ತುಂಬಾ ದುಃಖವಾಯಿತು, ನಾನು ನನ್ನ ಹೆಂಡತಿ ಅನಂಗಸೇನೆಯನ್ನು ಎಷ್ಟೊಂದು ಪ್ರೀತಿಸುತ್ತಿದ್ದೆ; ಆದರೆ ಅವಳು ಇನ್ನೊಬ್ಬನನ್ನು ಪ್ರೀತಿ ಮಾಡುತ್ತಿದ್ದಾಳೆ. "ಈ ಸಂಸಾರವನ್ನು ಸುಖಕರವಾಗಿದೆ ಅನ್ಕೊಂಡಿದ್ದೆ ಆದರೆ ಇದು ದು:ಖ ಬರಿತ ಸಂಸಾರ" ಎಂದು ಅರಿತು, ಕೂಡಲೇ ರಾಜ ಭರ್ತೃಹರಿ ತನ್ನ ಪದವಿ, ರಾಜ್ಯ ಎಲ್ಲವನ್ನೂ ತ್ಯಾಗಮಾಡಿ ತಪಸ್ವಿಗೆ ಹೊರಟು ಹೋದ. ಆ ಮಹಾತ್ಮನೆ ಮುಂದೆ ಪ್ರಸಿದ್ಧವಾದ ಜ್ಞಾನಶತಕ ವನ್ನು ರಚನೆ ಮಾಡಿದ. ಈಗಲೂ ಉಜ್ಜಯಿನಿಯ ಹೊರವಲಯದಲ್ಲಿ ರಾಜಭರ್ತೃಹರಿ ತಪಸ್ಸು ಮಾಡಿದ ಗುಹೆ ಇಂದಿಗೂ ಇದೆ, ಆದ್ದರಿಂದ ಭಕ್ತ ಮಹಾಶಯರೇ; ವ್ಯಾಮೋಹ ಹಾಗೂ ಸ್ವಾರ್ಥದಿಂದ ತುಂಬಿದ ಈ ಸಂಸಾರದಲ್ಲಿ ದುಃಖವನ್ನು ಅನುಭವಿಸಿಕೊಂಡು ದೇವರನ್ನು ಮರೆತು ಇರುವುದಕ್ಕಿಂತ, ಇದೇ ಪ್ರೀತಿ-ಪ್ರೇಮವನ್ನು ಭಗವಂತನ ಮೇಲೆ ಇಟ್ಟರೆ ನಮ್ಮ ಜನ್ಮಸಾರ್ಥಕವಾಗುವುದು.

ಹರಿ ಓಂ ತತ್ಸತ್