ಭಾಗವತ ಕಥೆಗಳು

ಶ್ರೀ ಕೃಷ್ಣ ಸುಧಾಮನ (ಕುಚೇಲ) ಗಾಢವಾದ ಸ್ನೇಹ ಶ್ರೀ ಕೃಷ್ಣ ಮತ್ತು ಕುಚೇಲ ಒಟ್ಟಿಗೆ ಸಾಂದೀಪ ಮುನಿಯ ಹತ್ತಿರ ಉಜ್ಜಯಿನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಡಿಗೆ ಮಾಡಲು ಸೌದೆ ತರಲು ಅರಣ್ಯಕ್ಕೆ ಹೋದರು. ಕೃಷ್ಣ ಮರ ಹತ್ತಿ ಸೌದೆ ಕಡಿಯುತ್ತಿರುವಾಗ ಆಶ್ರಮದಲ್ಲಿ ಅಮ್ಮ ಕೊಟ್ಟ ಅವಲಕ್ಕಿಯನ್ನು ಎಲ್ಲಾ ಕುಚೇಲ ಒಬ್ಬನೆ ತಿಂದ. ಗುರುಕುಲ ವಾಸದಲ್ಲಿ ಮಾಡಿದ ಮೋಸ. ಇಬ್ಬರು ಗೃಹಸ್ಥಾಶ್ರಮ ಸ್ವೀಕರಿಸಿದರು. ಆದರೆ ಕುಚೇಲನಿಗೆ ಬಹಳ ಬಡತನ. ದೊರೆತ ಅಲ್ಪ ವಸ್ತುವಿನಿಂದಲೇ ಜೀವನ ಸಾಗಿಸುತ್ತಿದ್ದರು. ಸಂತಾನ ಮಾತ್ರ ಸಮೃದ್ಧಿಯಾಗಿತ್ತು. ಶ್ರೀ ಕೃಷ್ಣ ಅವನ ರಾಜಧಾನಿಯಲ್ಲಿ ರಾಜಭೋಗ ಅನುಭವಿಸುತ್ತಿದ್ದ. ಆದರೆ ಅವನ ಸ್ನೇಹಿತ ಕುಚೇಲ ಬಹಳ ಬಡವ, ವಾಸಕ್ಕೆ ಮನೆಯಿಲ್ಲ. ತಿನ್ನಲು ಅನ್ನವಿಲ್ಲ. ಮನೆ ತುಂಬ ಮಕ್ಕಳು ಕುಚೇಲನ ಹೆಂಡತಿ ಶ್ರೀ ಕೃಷ್ಣನನ್ನು ಕಂಡು ಬರಲು ಒತ್ತಾಯ ಮಾಡುತ್ತಿದ್ದಳು. ಒಂದು ಸಾರಿ ಕುಚೇಲ ತನ್ನ ಸ್ನೇಹಿತ ಶ್ರೀ ಕೃಷ್ಣನನ್ನು ಕಾಣಲು ಹೊರಟ. ಶ್ರೀ ಕೃಷ್ಣನು ಕುಚೇಲನನ್ನು ನಗರದ ಹೆಬ್ಬಾಗಿಲಿನಿಂದ ಪಲ್ಲಕ್ಕಿಯಲ್ಲಿ ಕರೆ ತಂದ. ಅವನನ್ನು ದ್ವಾರಕಾವತಿಯಲ್ಲಿ ತಾನೇ ಪಲ್ಲಕ್ಕಿ ಹೊತ್ತಿಕೊಂಡು ಅರಮನೆಯಲ್ಲಿಳಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಅವನಿಗೆ ಉಪಹಾರ ಮಾಡಿಸಿದ. ನನಗೆ ಏನು ತಂದಿದ್ದೀಯ ಕೊಡು ಎಂದು ಕೃಷ್ಣ ಕೇಳುತ್ತಾನೆ. ಅರಮನೆಯ ವೈಭವದಲ್ಲಿ ಹೆಂಡತಿ ಕೊಟ್ಟ ಅವಲಕ್ಕಿ ಹಳೆಬಟ್ಟೆಯಲ್ಲಿ ಕಟ್ಟಿದ್ದನ್ನು ತೆಗೆಯಲು ಅಂಜಿಕೆ ಆಯಿತು. ಆಗ ಕೃಷ್ಣನೇ ಬಗಲಲ್ಲಿರುವ ಅವಲಕ್ಕಿ ಗಂಟನ್ನು ಎಳೆದ.

ಆ ಅವಲಕ್ಕಿ ಅರಮನೆಯ ತುಂಬಾ ಚೆಲ್ಲಿತು. ಶ್ರೀ ಕೃಷ್ಣನೆ ಆ ಅವಲಕ್ಕಿಯನ್ನು ಆರಿಸಿಕೊಂಡು ತಿಂದು ಬಹಳ ಚೆನ್ನಾಗಿದೆ ಎಂದು ತೇಗಿದ. ಕುಚೇಲ ತಾನು ಬಂದಿರುವ ಉದ್ದೇಶವನ್ನೇ ಮರೆತ. ದರಿದ್ರನಾದರೂ ಮತ್ತೊಬ್ಬರನ್ನು ಬೇಡುವುದು ಅವನಿಗೆ ಹಿಡಿಸುತ್ತಿರಲಿಲ್ಲ. ಕುಚೇಲ ತನ್ನ ಊರಿನ ಕಡೆ ಸಂತೋಷದಿಂದ ಹೊರಟ. ಶ್ರೀ ಕೃಷ್ಣನು ಏನೂ ಕೊಡಲಿಲ್ಲ. ಕುಚೇಲ ಏನನ್ನು ಕೇಳಲಿಲ್ಲ. ಕುಚೇಲ ತನ್ನ ಮನೆ ಹತ್ತಿರ ಹೋಗುತ್ತಾನೆ. ಅವನ ಗುಡಿಸಲು ಪತ್ತೆ ಇಲ್ಲ. ಆಶ್ಚರ್ಯವಾಯಿತು. ಆ ಸ್ಥಳದಲ್ಲಿ ಅರಮನೆಯಿದೆ. ಒಳಗಿನಿಂದ ಕುಚೇಲನ ಹೆಂಡತಿ ರೇಷ್ಮೆ ಸೀರೆ ಧರಿಸಿ ಪತಿಯ ಪಾದ ತೊಳೆಯಲು ಬಂದಳು. ಇವೆಲ್ಲಾ ಅವನಿಗೆ ಆಶ್ಚರ್ಯ.

ಹಿಂದೆ ವಿದ್ಯಾಭ್ಯಾಸದ ಕಾಲದಲ್ಲಿ ಸಾಂದೀಪ ಮುನಿ ಆಶÀ್ರಮದಲ್ಲಿ ಕಟ್ಟಿಗೆ ತರಲು ಹೋದಾಗ ಶ್ರೀ ಕೃಷ್ಣನಿಗೆ ಕೊಡದೆ ಅವಲಕ್ಕಿ ತಿಂದಿದ್ದರಿಂದ ಕುಚೇಲನಿಗೆ ದರಿದ್ರ ಬಂದಿತ್ತು. ಆ ಅವಲಕ್ಕಿಯನ್ನು ತನ್ನ ಹರಕು ಬಟ್ಟೆಯಲ್ಲಿ ಕಟ್ಟಿಕೊಂಡು ಶ್ರೀ ಕೃಷ್ಣನಿಗೆ ಕೊಟ್ಟಿದ್ದು ಅವನು ಹಿಂದೆ ತಿಂದ ಅವಲಕ್ಕಿಯ ಪಾಪ ನಿವಾರಣೆ ಆಯಿತು. ಆಗ ಕುಚೇಲನೂ ತೃಪ್ತಿ ಹೊಂದಿದ. ಯಾರ ವಸ್ತುವನ್ನು ಕದಿಯಬಾರದು. ಕದ್ದರೆ ಆ ಪಾಪವನ್ನು ಜೀವನದಲ್ಲಿ ಬಹುದಿವಸ ಅನುಭವಿಸಬೇಕಾಗುತ್ತದೆ. ನೀನು ಎಷ್ಟು ಕೊಡುತ್ತೀಯೋ ಅದರ ಹತ್ತರಷ್ಟು ನಿನಗೆ ಬರುತ್ತದೆ. ಕೊಡುವುದರಲ್ಲಿ ಶಾಂತಿ-ಸುಖ-ಆನಂದ ಇದೆ. ಮತ್ತೊಬ್ಬರ ವಸ್ತುವನ್ನು ಪಡೆಯುವುದರಲ್ಲ್ಲಿ ದುಃಖ ಅಶಾಂತಿ ಇರುತ್ತದೆ.