ನೀತಿ ಕಥೆಗಳು

ಕಳಂಕಿತ ಆಹಾರ - ಮನಸ್ಸಿನ ಪರಿಣಾಮ - ಹೊಸದು ಒಬ್ಬ ಸಾಧು, ಗೃಹಸ್ಥನ ಮನೆಗೆ ಊಟಕ್ಕೆ ಹೋದರು, ಅವರು ಭಕ್ತಿಯಿಂದ ಸಾಧುಗಳಿಗೆ ಉಪಚಾರ ಮಾಡಿ ಊಟ ಬಡಿಸಿದರು. ಹಾಲು ಅನ್ನ ಊಟ ಮಾಡಿ ಸಾಧು ಮಲಗಿದರು, ಸರಿಯಾಗಿ ನಿದ್ರೆ ಬರಲಿಲ್ಲ. ಬೆಳಿಗ್ಗೆ ಆ ಮನೆಯಲ್ಲಿ ಎಲ್ಲರೂ ಎಚ್ಚರಗೊಳ್ಳುವ ಮೊದಲೇ ಸೀದಾ ಹಸುವಿನ ಕೊಠಡಿಗೆ ಹೋಗಿ ಅದನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಹೊಡೆದುಕೊಂಡು ಹೋದರು. ಅಷ್ಟೊತ್ತಿಗೆ ಸೂರ್ಯೋದಯವಾಯಿತು. ಅಲ್ಲಿ ಒಂದು ಹಳ್ಳ, ಸಾಧು ಹಸುವನ್ನು ಅಲ್ಲಿಯೇ ಮರದಲ್ಲಿ ಕಟ್ಟಿ ಸ್ಥಾನಕ್ಕೆ ಹೋದರು. ಸ್ಥಾನ ಮಾಡುವಾಗ ಅವರಿಗೆ ಒಂದು ಜಿಜ್ಞಾಸೆ ಉಂಟಾಯಿತು "ನಾನು ಏಕೆ! ಹಸುವನ್ನು ಕಳ್ಳತನದಿಂದ ಹೊಡೆದುಕೊಂಡು ಬಂದೆ ನಾನು ವೈರಾಗ್ಯ ಪುರುಷನಾಗಿ ನನಗೇಕೆ ಈ ದುರ್ಬುದ್ಧಿ ಬಂದಿತು". ಎಂದುಕೊಂಡು ಛೇ!! ನಾನೆಂತಹ ಕೆಟ್ಟ ಕೆಲಸವನ್ನು ಮಾಡಿದ್ದೇನೆ ಅಂದುಕೊಂಡು, ಹಸುವನ್ನು ವಾಪಸ್ಸು ಗೃಹಸ್ಥರ ಮನೆಗೆ ಹೊಡೆದುಕೊಂಡು ಬರುವಾಗ, ಗೃಹಸ್ಥರ ಮನೆಯಲ್ಲಿ ಯಜಮಾನ ಬೆಳಿಗ್ಗೆ ಎದ್ದು ಹಸುವಿನ ಕೊಠಡಿಯಲ್ಲಿ ನೋಡಿ, ಸಾಧು ಇಲ್ಲ,!! ಹಸು ಇಲ್ಲ!!! ಹಾಗಾದರೆ ಹಸುವನ್ನು ಸಾಧುಗಳೇ ಕರೆದುಕೊಂಡು ಹೋಗಿದ್ದಾರೆ, ಆದರೆ ಅದರ ಕರುವನ್ನು ಇಲ್ಲಿಯೇ ಬಿಟ್ಟಿದ್ದಾರಲ್ಲ, ಕರುವು ಇಲ್ಲದೆ ಹಸುವು ಹಾಲು ಕೊಡುವುದಿಲ್ಲ ಆದ್ದರಿಂದ ಸಾಧುಗಳಿಗೆ ಹಸುವಿನಿಂದ ಏನು ಉಪಯೋಗವಾಗುವುದಿಲ್ಲ ಎಂದುಕೊಂಡು ಕರುವನ್ನು ಒಡೆದುಕೊಂಡು ಸಾಧುವಿನ ಬಳಿಗೆ ಹೋಗುತ್ತಿರುವಾಗ, ಸಾಧುಗಳು ಮತ್ತು ಯಜಮಾನ ಇಬ್ಬರೂ ಸಂಧಿಸಿದರು. ಸ್ವಾಮಿ ಕರುವನ್ನು ಹೊಡೆದುಕೊಂಡು ಹೋಗಿರಿ ಎಂದು ಯಜಮಾನ ಹೇಳಿದರೆ, ಸಾಧುಗಳು ನಾನು ಹಸು ಹೊಡೆದು ಕೊಂಡು ಬಂದಿದ್ದು ಅಪರಾಧವಾಯಿತು ಮನ್ನಿಸಿರಿ ಎಂದು ಹೇಳಿ, ಇಬ್ಬರೂ ವಾಪಸ್ಸು ಮನೆಗೆ ಬಂದರು.

ಮನೆಯಲ್ಲಿ ಸಾಧುಗಳು ನನಗೇಕೆ ಕಳ್ಳತನದ ಬುದ್ಧಿ ಬಂತು? ನಾನು ತಿಂದ ಆಹಾರದಲ್ಲಿ ದೋಷವಿರ ಬಹುದೇನೋ!! ಎಂದು ಅಡುಗೆ ಮಾಡಿದ ಗೃಹಿಣಿಯನ್ನು ಕೇಳಿದರು. ಅದಕ್ಕೆ ಸ್ವಾಮಿ!! ದಿನವೂ ಅಡುಗೆ ಮಾಡುವಂತೆ ಮಾಡಿದೆ ಆದರೆ ಅಕ್ಕಿಯನ್ನು ಅಂಗಡಿಯಿಂದ ತರಿಸಿದೆ ಎಂದಳು, ತಂದವರು ಯಾರು? ಆಳು. ಆಳನ್ನು ಕೇಳುತ್ತಾರೆ ಅಕ್ಕಿಯನ್ನು ಹೇಗೆ ತಂದೆ? ಸ್ವಾಮಿ ಅಂಗಡಿಯವರು ಒಳಗೆ ಹೋಗಿದ್ದರು ಕೈಚೀಲದಲ್ಲಿ ಅಕ್ಕಿಯನ್ನು ತುಂಬಿಕೊಂಡು ಬಂದೆ ಎಂದ. ನೋಡಿ ಹೀಗೆ ಕಳ್ಳತನದಿಂದ ತಂದ ಅಕ್ಕಿಯಿಂದ ಮಾಡಿದ ಅನ್ನ ತಿಂದು ನನಗೆ ಕಳ್ಳತನ ಮಾಡುವ ಬುದ್ಧಿ ಬಂದಿತು, ಎಂದು ಸಾಧು ಹೇಳಿದಾಗ, ಹಾಗಾದರೆ ನಾವು ನಿಮ್ಮಂತೆಯೇ ಅದೇ ಅಕ್ಕಿಯ ಅನ್ನವನ್ನು ಊಟ ಮಾಡಿದೆವೆಲ್ಲಾ!! ನಮಗೆ ಏಕೆ ಕಳ್ಳತನ ಬುದ್ಧಿ ಬರಲಿಲ್ಲ ಎಂದ ಯಜಮಾನ. ಅದಕ್ಕೆ ಸಾಧುಗಳು "ಕಪ್ಪು ಗೋಡೆಯಮೇಲೆ ಇಟ್ಟ ಕಪ್ಪುಚುಕ್ಕಿ ಕಾಣುವುದೇ ಇಲ್ಲ ಆದರೆ ಬಿಳಿ ಗೋಡೆ ಮೇಲೆ ಒಂದು ಕಪ್ಪು ಚುಕ್ಕಿ ಇದ್ದರೆ ಅದು ಎದ್ದು ಕಾಣುತ್ತದೆ" ಹಾಗೆಯೇ ನೀವು ಕಪ್ಪು ಗೋಡೆ ಇದ್ದಂತೆ ಅದರಲ್ಲಿ ಕಪ್ಪುಚುಕ್ಕೆಯು ಯಾವ ರೀತಿ ಕಾಣುವುದಿಲ್ಲವೋ ಹಾಗೆಯೇ ಕೆಟ್ಟ ಬುದ್ಧಿಯು ನಿಮಗೆ ಗೋಚರವಾಗುವುದಿಲ್ಲ. ಆದರೆ ನನ್ನ ಮನಸ್ಸು ಬಿಳಿ ಗೋಡೆ ಇದ್ದಂತೆ ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗೋಚರವಾಗುತ್ತದೆ.

ಆದ್ದರಿಂದಲೇ "ನಾವು ತಿನ್ನುವ ಆಹಾರ ಪದಾರ್ಥ ಶುದ್ಧವಾಗಿರಬೇಕು. ಆಹಾರ ತಯಾರಿಸುವರು ಶುದ್ಧವಾಗಿರಬೇಕು". ದುರ್ಯೋಧನನ ಅನ್ನವನ್ನು ತಿಂದು, ಭೀಷ್ಮ ದ್ರೋಣ ಕೃಪಾಚಾರ್ಯರು, ಧರ್ಮಾ - ಧರ್ಮವನ್ನು ವಿವೇಚನೆ ಮಾಡುವ ಶಕ್ತಿಯೂ ನಷ್ಟವಾಗಿ ದ್ರೌಪದಿ ವಸ್ತ್ರಾಪಹರಣ ವಾಗುತ್ತಿದ್ದರೂ ಸಹ ಸುಮ್ಮನಿದ್ದರು. ಅರ್ಜುನ ಹೊಡೆದ ಬಾಣದಿಂದ ಭೀಷ್ಮನ ದೇಹದಿಂದ ರಕ್ತವೆಲ್ಲ ಹೋದ ಮೇಲೆ ವಿವೇಚನೆ ಬಂದು ಪಾಂಡವರನ್ನು ಕೂರಿಸಿಕೊಂಡು ವಿಷ್ಣು ಸಹಸ್ರನಾಮ ವನ್ನು ಬೋಧಿಸಿದರು.

ನೀತಿ: ಆತ್ಮೀಯರೇ ನಾವು ತಿನ್ನುವ ಆಹಾರದಲ್ಲಿ ಯಾವ ರೀತಿಯ ಕಳಂಕವೂ ಇರಬಾರದು, ಒಂದು ಪಕ್ಷ ಇದ್ದರೂ ಸಹ, ಅದನ್ನು ಭಗವಂತನಿಗೆ ಸಮರ್ಪಣೆ ಮಾಡಿ ಸೇವಿಸಿದರೆ ಅದರಿಂದ ಯಾವ ಕಳಂಕವೂ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ.