ಉಪನಿಷತ್ತಿನ ಕಥೆಗಳು

ಯಾಜ್ಞವಲ್ಕ್ಯ ತುಂಬಾ ಹಿಂದೆ ಬ್ರಹ್ಮರಾತ ಎಂಬ ಋಷಿ ಇದ್ದರು. ಅವರ ಹೆಂಡತಿ ಸುನಂದಾದೇವಿ. ಪತಿಗೆ ತಕ್ಕ ಸತಿ ಎನಿಸಿದ್ದರು. ದಂಪತಿಗಳ ಜೀವನ ಅನ್ಯೋನ್ಯವಾಗಿದ್ದರೂ, ಮಕ್ಕಳಿಲ್ಲದ ಕೊರಗು ಇವರನ್ನು ತುಂಬಾ ಬಾಧಿಸುತ್ತಿತ್ತು. ಇದಕ್ಕಾಗಿ ದೀರ್ಘಕಾಲ ಯಜ್ಞೇಶ್ವರನನ್ನು ಕುರಿತು ತಪಸ್ಸು ಮಾಡಿದರು. ಆತನ ಕೃಪೆಯಿಂದ ಒಂದು ಗಂಡು ಮಗುವನ್ನು ಪಡೆದರು. ಮಗನಿಗೆ ಯಾಜ್ಞವಲ್ಕ್ಯ ಎಂದು ನಾಮಕರಣ ಮಾಡಿದರು. ಯಾಜ್ಞವಲ್ಕ್ಯ ಬಾಲ್ಯದಿಂದಲೂ ಚುರುಕಾಗಿದ್ದ. ಜೊತೆಗೆ ದೈವಭಕ್ತಿ ಉಳ್ಳವನಾಗಿದ್ದ. ಬ್ರಹ್ಮರಾತರು ಮಗನಿಗೆ ಕಿರಿಯ ವಯಸ್ಸಿನಲ್ಲಿಯೇ ಉಪನಯನ ಸಂಸ್ಕಾರವನ್ನು ಮುಗಿಸಿ, ಯಜುರ್ವೇದವನ್ನು ಕಲಿತು ಬರಲು ವೈಶಂಪಾಯನ ಎಂಬುವವರ ಬಳಿಗೆ ಕಳುಹಿಸಿಕೊಟ್ಟರು. ವೈಶಂಪಾಯನರು ಯಾಜ್ಞವಲ್ಕ್ಯನ ಸೋದರಮಾವನೇ ಆಗಿದ್ದರು. ವೈಶಂಪಾಯನರಿಂದ ಚೂಟಿಯ ಬಾಲಕನಾದ ಯಾಜ್ಞವಲ್ಕ್ಯ ಬೇಗ ಬೇಗ ಯಜುರ್ವೇದದ ಮಂತ್ರಗಳನ್ನು ಅರ್ಥಮಾಡಿಕೊಳ್ಳುತ್ತಾ ಕಲಿಯತೊಡಗಿದ. ಅವರ ಅಚ್ಚುಮೆಚ್ಚಿನ ಶಿಷ್ಯ ಎನಿಸಿದ. ಒಂದು ಬಾರಿ ವೈಶಂಪಾಯನರು ಖಾಯಿಲೆಯಿಂದ ಹಾಸಿಗೆ ಹಿಡಿದರು. ರೋಗ ನಿವಾರಣೆಗಾಗಿ ಅವರ ಶಿಷ್ಯರಾದ ಚರಕ ಮೊದಲಾದ ವೈದ್ಯವಿದ್ವನ್ಮಣಿಗಳು ವ್ರತ ಆಚರಿಸಲು ನಿರ್ಧರಿಸಿದರು. ವಿಷಯ ಯಾಜ್ಞವಲ್ಕ್ಯನಿಗೆ ತಿಳಿಯಿತು. ರೋಗ ನಿವಾರಣೆಗಾಗಿ ಇವರು ವ್ರತ ಆಚರಿಸುವುದನ್ನು ಕಂಡು, ಯಾಜ್ಞವಲ್ಕ್ಯನಿಗೆ ನಗು ಬಂತು. ಅವನು ತನ್ನ ಗುರುವಿನೊಂದಿಗೆ ತಿಳಿಸಿದ: “ಗುರುಗಳೇ ಈ ಒಂದು ಪುಟ್ಟ ಖಾಯಿಲೆಗೆ ಇಷ್ಟೊಂದು ಮಂದಿ ವೃಥಾ ವ್ರತ ಆಚರಿಸಬೇಕೇ? ನಾನೊಬ್ಬನೇ ವ್ರತವನ್ನು ಕೈಗೊಂಡು, ನಿಮ್ಮ ಅಸ್ವಸ್ಥತೆಯನ್ನು ನಿವಾರಿಸುತ್ತೇನೆ.”
ತನ್ನ ಹಿರಿಯ ಶಿಷ್ಯರ ಬಗ್ಗೆ ಈ ರೀತಿಯ ಅಸಡ್ಡೆಯ ಮಾತುಗಳನ್ನು ಕೇಳಿ, ಬಾಲಕನಾದ ಯಾಜ್ಞವಲ್ಕ್ಯನ ಬಗ್ಗೆ ವೈಶಂಪಾಯನ ಗುರುಗಳಿಗೆ ಕೋಪ ಬಂತು. ಹೀಗೆಲ್ಲಾ ಆಡುವುದು ಬಾಲಕನ ಉದ್ಧಟತನ ಎಂದೇ ಭಾವಿಸಿದರು. ಸಿಟ್ಟಿನಿಂದಲೇ ಹೇಳಿದರು:
“ಹಿರಿಯ ಶಿಷ್ಯರ ಬಗ್ಗೆ ಹೀಗೆಲ್ಲಾ ಹೀನವಾಗಿ ಮಾತಾಡುವ ನಿನ್ನಿಂದ ನಾನು ಯಾವುದೇ ವ್ರತವನ್ನೂ ಬಯಸುವುದಿಲ್ಲ. ಹೊರಟುಹೋಗು.”
ಇನ್ನೊಮ್ಮೆ ವೈಶಂಪಾಯನರು ಅನಿವಾರ್ಯ ನಿಮಿತ್ತ ಸಭೆಯೊಂದರಲ್ಲಿ ಹಾಜರಾಗಲು ಸಾಧ್ಯ ಆಗಲಿಲ್ಲ. ಸಭೆಯ ನಿಯಮದಂತೆ ಇಂತಹ ಅಪರಾಧದಿಂದ ಬಹ್ಮಹತ್ಯಾ ದೋಷ ಪ್ರಾಪ್ತವಾಯಿತು. ಮನನೊಂದ ವೈಶಂಪಾಯನ ತನ್ನ ಶಿಷ್ಯರನ್ನು ಕರೆದು ಹೇಳಿದರು:”ನನಗೆ ತಗುಲಿರುವ ಬ್ರಹ್ಮಹತ್ಯಾ ನಿವಾರಣೆಗಾಗಿ ನೀವೆಲ್ಲಾ ಈ ಶಾಪದ ಪ್ರಾಯಶ್ಚಿತ್ತ ಮಾಡಿರಿ.” ಯಾಜ್ಞವಲ್ಕ್ಯ ಮತ್ತೆ ತನ್ನ ಹುಡುಗತನದ ಧಾಟಿಯಲ್ಲಿಯೇ ಹೇಳಿದ:
“ಗುರುಗಳೇ, ನೀವು ಒಪ್ಪುವುದಾದರೆ ಅವರೆಲ್ಲಾ ಮಾಡುವ ವ್ರತವನ್ನು ನಾನೊಬ್ಬನೇ ಯಶಸ್ವಿಯಾಗಿ ಪೂರೈಸುತ್ತೇನೆ.”
ವೈಶಂಪಾಯನರಿಗೆ ಈಗ ಇನ್ನೂ ಕೋಪ ಬಂತು. ’ಹುಡುಗತನದಲ್ಲಿ ಅಸಭ್ಯನಂತೆ ಹೀಗೆಲ್ಲಾ ಮಾತಾಡುತ್ತಿರುವನಲ್ಲಾ!’ ಅಂದುಕೊಂಡು: “ಹಿರಿಯ ಬ್ರಾಹ್ಮಣರನ್ನು ಹೀಗೆಲ್ಲಾ ಅವಮಾನದ ರೀತಿಯಲ್ಲಿ ತಿರಸ್ಕರಿಸಿ ಮಾತಾಡುತ್ತಿವೆಯಾ? ನಿನಗೆ ನಾನು ಕಲಿಸಿರುವ ಯಜುರ್ವೇದದ ಮಂತ್ರ ರಹಸ್ಯಗಳೆಲ್ಲವೂ ಮರೆತುಹೋಗಲಿ. ನೀನು ನನ್ನ ಆಶ್ರಮದಲ್ಲಿರಲು ಅನರ್ಹ ಆದ್ದರಿಂದ ಹೊರಟುಹೋಗು.” ಯಾಜ್ಞವಲ್ಕ್ಯ ಹೋದ ಉದ್ದೇಶವನ್ನು ಪೂರೈಸದೆ ಹಿಂದಿರುಗಿದುದನ್ನು ಕಂಡು ಬ್ರಹ್ಮರಾತರಿಗೆ ತುಂಬಾ ದು”ಖ ಆಯಿತು. ಆದರೂ ದು:ಖವನ್ನು ನುಂಗಿಕೊಂಡು, ಋಗ್ವೇದವನ್ನಾದರೂ ಕಲಿತು ಬರಲಿ, ಅಂದುಕೊಂಡು ಪೈಲ ಮುನಿಗಳ ಶಿಷ್ಯರಾದ ಬಾಷ್ಕಲ ಮುನಿಗಳ ಆಶ್ರಮಕ್ಕೆ ಕಳುಹಿಸಿಕೊಟ್ಟರು. ತನ್ನ ತಪ್ಪನ್ನು ಅರ್ಥಮಾಡಿಕೊಂಡಿದ್ದ. ಯಾಜ್ಞವಲ್ಕ್ಯ ಅಹಿತಕರ ರೀತಿಯಲ್ಲಿ ಯಾವ ಮಾತೂ ಆಡದೆ, ಋಗ್ವೇದ ಮಂತ್ರ ರಹಸ್ಯವನ್ನು ಅರಿತು, ಹಿಂದಿರುಗಿದ. ಮಗನ ವಿದ್ಯಾಭ್ಯುದಯವನ್ನು ಮನಗಂಡು ಹಿರಣ್ಯನಾಭರ ಬಳಿಗೆ ಕಳುಹಿಸಿ, ಸಾಮವೇದದಲ್ಲೂ ಮಗನು ಪರಿಣತನೆನಿಸುವಂತೆ ಮಾಡಿದರು. ಇನ್ನೂ ಮುಂದೆ ಅರುಣಿ ಮಹರ್ಷಿಗಳ ಸೇವೆಯಲ್ಲಿದ್ದು ಅಥರ್ವವೇದದಲ್ಲೂ ಯಾಜ್ಞವಲ್ಕ್ಯ ಪಾಂಡಿತ್ಯ ಪಡೆದನು.
ಇಷ್ಟಾದರೂ ಅವನಿಗೆ ತಾನು ಯಜುರ್ವೇದ ಮಂತ್ರ ರಹಸ್ಯವನ್ನು ತಿಳಿಯುವುದರಲ್ಲಿ ವಿಫಲನಾದೆನಲ್ಲಾ ಎಂಬ ಕೊರಗು ಇತ್ತು. ಇದಕ್ಕಾಗಿ ತನ್ನ ತಂದೆ ಉಪನಯನ ಸಮಯದಲ್ಲಿ ಉಪದೇಶಿಸಿದ ಗಾಯತ್ರಿ ಮಂತ್ರದ ಮಹಿಮೆಯಿಂದ ಗಾಯತ್ರೀ ದೇವಿಯ ಕೃಪೆ ಪಡೆದನು. ದೇವಿ ಪ್ರತ್ಯಕ್ಷಳಾಗಿ ಉದ್ದೇಶ ಸಾಧನೆಗಾಗಿ ಸೂರ್ಯದೇವನನ್ನು ಆರಾಧಿಸಲು ಸಲಹೆ ನೀಡಿದಳು. ಅದರಂತೆ ಸೂರ್ಯನನ್ನೇ ಕುರಿತು ಘೋರ ತಪಸ್ಸನ್ನು ಆಚರಿಸಲು ನಿಶ್ಚಯಿಸಿದನು. ಚಿಕ್ಕ ವಯಸ್ಸಿನಲ್ಲೇ ಹೀಗೆಲ್ಲಾ ಸನ್ಯಾಸಿ ಜೀವನದಲ್ಲಿ ಪ್ರವೇಶಿಸುವುದನ್ನು ಕಂಡ, ಬ್ರಹ್ಮರಾತರು ಕದಿರಮುನಿಗಳ ಮಗಳಾದ ಕಾತ್ಯಾಯನಿ ಎಂಬುವಳೊಂದಿಗೆ ಮದುವೆ ಮಾಡಿ ಮುಗಿಸಿದರು. ಮದುವೆ ಅವನ ತಪಸ್ಸಿಗೆ ವಿಘ್ನ ಆಗಲಿಲ್ಲ. ಸೂರ್ಯದೇವನು ಅವನ ತಪಸ್ಸನ್ನು ಮೆಚ್ಚಿ, ಪ್ರತ್ಯಕ್ಷ ಆದ. ಯಾಜ್ಞವಲ್ಕ್ಯನ ಕೋರೆಕೆಯಂತೆ ಯಜುರ್ವೇದ ಮಂತ್ರವನ್ನು ಉಪದೇಶಿಸಿದ. ಇಂತಹ ದಿವ್ಯಜ್ಞಾನವನ್ನು ಪಡೆದ ಯಜ್ಞವಲ್ಕ್ಯ ಬ್ರಹ್ಮರ್ಷಿ ಎನಿಸಿದ. ಯಜುರ್ವೇದವನ್ನು ಕುರಿತು “ಶುಕ್ಲ ಯಜುರ್ವೇದ” ಎಂಬ ಉದ್ಗ್ರಂಥವನ್ನು ರಚಿಸಿದ. ಇದರಿಂದ ಯಾಜ್ಞವಲ್ಕ್ಯರ ಕೀರ್ತಿ ಎಲ್ಲೆಲ್ಲೂ ಹರಡಿತು. ಶುಕ್ಲ ಯಜುರ್ವೇದದ ಪಾರಾಯಣ ಪ್ರವಚನವನ್ನು ತನ್ನ ಆಶ್ರಮದಲ್ಲಿ ಪ್ರಾರಂಭಿಸಿದ. ಇದನ್ನು ಕೇಳಲು ಋಷಿ-ಮುನಿಗಳೇ ಅಲ್ಲದೆ, ವಿಖ್ಯಾತ ರಾಜರುಗಳೂ ಬರುತ್ತಿದ್ದರು.. ಅಂತಹವರಲ್ಲಿ ವಿಥಿಲಾ ಪಟ್ಟಣದ ಜನಕರಾಜನೂ ಒಬ್ಬ. ಪ್ರವಚನದಿಂದ ಪ್ರಭಾವಿತನಾಗಿ, ಯಾಜ್ಞವಲ್ಕ್ಯರ ಪರಮ ಶಿಷ್ಯನೆನಿಸಿದ. ವೇದಮಂತ್ರಗಳಿಗೆ ಯಾಜ್ಞವಲ್ಕ್ಯರೇ ಸೂಕ್ತ ರೀತಿಯ ಅರ್ಥವಿವರಣೆಯನ್ನು ನೀಡುತ್ತಾ, ನೆರೆದಿದ್ದವರೆಲ್ಲರ ಮನ ಗೆದ್ದರು. ಯಾಜ್ಞವಲ್ಕ್ಯರ ಕೀರ್ತಿ ಈಗ ದೇಶ-ವಿದೇಶಗಳಲ್ಲಿಯೂ ಹರಡಿತು. ಇಂತಹ ಪ್ರವಚನ ಸಭೆಯಲ್ಲಿ ಪುರುಷರೇ ಅಲ್ಲದೆ, ಮಹಿಳೆಯರೂ ಭಾಗವಹಿಸಿದ್ದರು. ಅಂತಹವರಲ್ಲಿ ಗಾರ್ಗಿ ಹಾಗೂ ಮೈತ್ರೇಯಿ ಪ್ರಮುಖರು. ಮೈತ್ರೇಯಿ ಯಾಜ್ಞವಲ್ಕ್ಯರ ಪಾಂಡಿತ್ಯ ಪ್ರೌಢಿಮೆಯಿಂದ ತುಂಬಾ ಪ್ರಭಾವಿತಳಾದಳು. ಅವರೊಂದಿಗೆ ಬಾಳುವೆಯನ್ನು ನಡೆಸಿ, ಬ್ರಹ್ಮದರ್ಶನವನ್ನು ಪಡೆಯಲು ಬಯಸಿದಳು. ಇದಕ್ಕಾಗಿ ತಮ್ಮ ಪತ್ನಿ, ಕಾತ್ಯಾಯಿನಿಯ ಅನುಮತಿಯನ್ನು ಪಡೆಯಲು ಯಾಜ್ಞವಲ್ಕ್ಯರು ತಿಳಿಸಿದರು. ಕಾತ್ಯಾಯನಿ ತ್ಯಾಗಮಯಿ ಹಾಗೂ ಕರುಣಾಮಯಿ, ಮೈತ್ರೇಯಿಯ ಅಪೇಕ್ಷೆಯನ್ನು ಸಮ್ಮತಿಸಿದಳು. ಅಂದಿನಿಂದ ಮೈತ್ರೇಯಿ ಯಾಜ್ಞವಲ್ಕ್ಯರೊಂದಿಗೇ ಜೀವನವನ್ನು ಜರುಗಿಸುತ್ತಾ, ಮುನ್ನಡೆದಳು. ಇದೇ ಸಂದರ್ಭದಲ್ಲಿ ರಾಜರ್ಷಿ ಎನಿಸಿದ್ದ ಜನಕ ಮಹಾರಾಜ ಜ್ಞಾನಯಾಗ ಒಂದನ್ನು ನಡೆಸಿದ. ಈ ಯಾಗದಲ್ಲಿ ಭಾಗವಹಿಸಲು ನಾನಾ ಕಡೆಯಿಂದ ವಿದ್ವಾಂಸರು ಹಾಗೂ ಋಷಿ-ಮುನಿಗಳು ಆಗಮಿಸಿದರು. ಯಾಜ್ಞವಲ್ಕ್ಯರೂ ಆಗಮಿಸಿದ್ದರು. ಬ್ರಹ್ಮನಿಷ್ಟರು ಯಾರು ಎಂಬುದರ ಬಗ್ಗೆ ತೀರ್ಮಾನಿಸುವುದು ಯಾಗಸಭೆಯ ಉದ್ದೇಶ ಆಗಿತ್ತು. ಹಾಗೆ ತೀರ್ಮಾನಿಸಲ್ಪಟ್ಟವರಿಗೆ ಸರ್ವಜ್ಞ ಕಿರೀಟವನ್ನು ಅಲಂಕರಿಸಲ್ಪಟ್ಟಿರುವ ಒಂದು ಸಾವಿರ ಗೋವುಗಳನ್ನು ಕೊಟ್ಟು ಗೌರವಿಸುವುದಾಗಿಯೂ ಯಾಗಸಭೆಯಲ್ಲಿ ಜನಕರಾಜ ಘೋಷಿಸಿದ.
ಈ ಬಗ್ಗೆ ಇನ್ನೂ ನಿರ್ದರಿಸುವ ಮೊದಲೇ ಯಾಜ್ಞವಲ್ಕ್ಯರು ತಮ್ಮ ಶಿಷ್ಯನಾದ ಸಾಮಶ್ರವನಿಗೆ ಹೇಳಿದರು:
“ಶಿಷ್ಯನೇ, ಆ ಸಾವಿರ ಗೋವುಗಳನ್ನೂ ನೀನು ಈಗಲೇ ನಮ್ಮ ಆಶ್ರಮಕ್ಕೆ ಹೊಡೆದುಕೊಂಡು ಹೋಗು.”
ಸಭೆಯಲ್ಲಿ ಗೊಂದಲ ಎದ್ದಿತು. “ ತೀರ್ಮಾನಿಸುವ ಮೊದಲೇ ಹೀಗೆಲ್ಲಾ ಮಾಡುವುದು ಸರಿಯಲ್ಲ” ಎಂದು ಯಾಜ್ಞವಲ್ಕ್ಯರ ಬಗ್ಗೆ ಟೀಕಿಸತೊಡಗಿದರು.
ಯಾಜ್ಞ ವಲ್ಕ್ಯರು ನಗುತ್ತಲೇ ಹೇಳಿದರು” “ನೀವೆಲ್ಲಾರೂ ಬ್ರಹ್ಮ ವಿದ್ಯೆಯ ಬಗ್ಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸಿದ್ಧ.
ಎಲ್ಲರೂ ತಮ್ಮ ಪರವಾಗಿ ಪ್ರಶ್ನೆಗಳನ್ನು ಕೇಳಲು ಗಾರ್ಗಿಯನ್ನು ಪ್ರತಿನಿಧಿಯ ರೂಪದಲ್ಲಿ ಆರಿಸಿದರು. ಗಾರ್ಗಿ ಯಾಜ್ಞವಲ್ಕ್ಯರ ಪರಮಶಿಷ್ಯೆ. ಯಾಜ್ಞವಲ್ಕ್ಯರೂ ಸಮ್ಮತಿಸಿದರು.
“ಯಾಜ್ಜವಲ್ಕ್ಯರೇ, ಈ ಜಗತ್ತಿನಲ್ಲಿರುವುದೆಲ್ಲವೂ ನೀರಿನ ಮೇಲೆ ಇದ್ದು ನೇಯಲ್ಪಟ್ಟಿದೆ ಎಂದು ಹೇಳುತ್ತಾರೆ. ಆ ನೀರು ಯಾವುದರ ಮೇಲೆ ನೇಯಲ್ಪಟ್ಟಿದೆ?”
“ಮಾರುತದ ಮೇಲೆ”
“ಮಾರುತ ಯಾವುದರ ಮೇಲೆ ನೇಯಲ್ಪಟ್ಟಿದೆ?”
“ಆಕಾಶದ ಮೇಲೆ”
“ಆಕಾಶ?”
“ಸ್ವರ್ಗೀಯ ಬಾನಿನ ಪ್ರದೇಶದ ಮೇಲೆ”
“ಆ ಸ್ವರ್ಗೀಯ ಪ್ರದೇಶ?”
“ಸೂರ್ಯನ ಮೇಲೆ”
“ಆ ಸೂರ್ಯ?”
“ಚಂದ್ರನ ಮೇಲೆ”
“ಚಂದ್ರ?”
“ನಕ್ಷತ್ರಗಳ ಮೇಲೆ”
“ನಕ್ಷತ್ರಗಳು?”
“ದೇವತೆಗಳು ವಾಸಿಸುವ ನೆಲೆಯ ಮೇಲೆ” ಹೀಗೆ ಎಲ್ಲಾ ವಿಕಟ ರೀತಿಯ ಪ್ರಶ್ನೆಗಳಿಗೂ ಯಾಜ್ಞವಲ್ಕ್ಯರು ನೀರು ಕುಡಿಯುವಷ್ಟು ಸುಲಭವಾಗಿ ಉತ್ತರ ಹೇಳಿ ಮುಗಿಸಿದರು.
ಜನಕಮಹಾರಾಜನಿಗೆ ತನ್ನ ಗುರುವಿನ ವಾದ ವೈಖರಿ ಅಚ್ಚುಮೆಚ್ಚಿನದೆನಿಸಿತು. ಯಾಜ್ಞವಲ್ಕ್ಯರಿಗೆ ಸರ್ವಜ್ಞ ಕಿರೀಟದಿಂದ ಅಲಂಕರಿಸಲಾಯಿತು. ಚಿನ್ನದ ಪದಕಗಳಿಂದ ಅಲಂಕರಿಸಿದ ಸಹಸ್ರ ಗೋವುಗಳನ್ನು ನೀಡಿ, ಸನ್ಮಾನಿಸಲಾಯಿತು. ಮುಂದೆ ಯಾಜ್ಞವಲ್ಕ್ಯರು ಹಲವಾರು ಅಮೂಲ್ಯ ಕೃತಿಗಳನ್ನು ಬ್ರಹ್ಮವಿದ್ಯೆಯ ಬಗ್ಗೆ ರಚಿಸಿದರು. ಇವುಗಳಲ್ಲಿ “ಯಾಜ್ಞವಲ್ಕ್ಯಸ್ಮೃತಿ” ಅತಿ ಮುಖ್ಯವಾದುದು. ಈ ವೇಳೆಗೆ ಯಾಜ್ಞವಲ್ಕ್ಯರನ್ನು ಮುಪ್ಪು ಕಾಡತೊಡಗಿತು. ಇನ್ನು ಲೌಕಿಕ ಜೀವನದಿಂದ ದೂರವಾಗಿ, ಬ್ರಹ್ಮವಿದ್ಯಾ ಚಿಂತನೆ ಯಲ್ಲಿಯೇ ಕಾಲವನ್ನು ಕಳೆಯಲು ನಿರ್ಧರಿಸಿದರು. ತಮ್ಮಲ್ಲಿದ್ದ ಸಕಲ ಸಂಪತ್ತನ್ನು ತಮ್ಮ ಇಬ್ಬರು ಪತ್ನಿಯರಿಗೂ ಸಮನಾಗಿ ಹಂಚಿದರು. ಕಾತ್ಯಾಯನಿ ಏನೋ ಪ್ರಸಾದರೂಪದಲ್ಲಿ ಸ್ವೀಕರಿಸಿದಳು. ಆದರೆ ಮೈತ್ರೇಯಿ ಪ್ರಶ್ನಿಸಿದಳು: “ಭಗವಾನ್, ನಾನು ಈ ಲೋಕದ ಇಂತಹ ಐಶ್ವರ್ಯದಿಂದ ಅಮೃತತ್ವ ಅಂದರೆ ಬ್ರಹ್ಮಲೋಕವನ್ನು ತಲುಪಲು ಸಾಧ್ಯವೇ?” ತಮ್ಮ ಮಡದಿಯ ಪ್ರಶ್ನೆಯಿಂದ ಅಚ್ಚರಿಗೊಂಡ ಯಾಜ್ಞವಲ್ಕ್ಯರು ಹೇಳಿದರು: “ಇಲ್ಲ, ಲೌಕಿಕ ಸಿರಿಯಿಂದ ಅಮರತ್ವ ಲಭಿಸದು.” “ಹಾಗಿದ್ದ ಮೇಲೆ ನನಗೆ ಇದ್ಯಾವುದರ ಅಗತ್ಯವೂ ಇಲ್ಲ. ನಾನೂ ನಿಮ್ಮೊಂದಿಗೆ ತಪಸ್ಸಿನಲ್ಲೇ ಮುಳುಗಿ, ಬ್ರಹ್ಮಪದವಿಯನ್ನು ಪಡೆಯುವೆನು.” ಇದೇ ಉದ್ದೇಶದಿಂದ ಈರ್ವರೂ ಹಿಮಾಲಯದ ತಪ್ಪಲಿನಲ್ಲಿ ತಪೋನಿರತರಾದರು. ದಿನಕ್ರಮೇಣ ಭೌತಿಕ ಶರೀರವನ್ನು ತ್ಯಜಿಸಿ, ಬ್ರಹ್ಮನಲ್ಲಿ ಲೀನರಾದರು.